ಕ್ರಾಮರೊಸ್ಕಿ: ಉಕ್ರೇನ್ ಮೇಲೆ ವಿಶೇಷ ಸೇನಾ ಕಾರ್ಯಾಚರಣೆ ನಡೆಸುತ್ತಿರುವ ರಷ್ಯಾ ಭಾನುವಾರ ಪೂರ್ವ ಉಕ್ರೇನ್‌ನ ಹಳ್ಳಿಯೊಂದರ ಶಾಲೆಯ ಮೇಲೆ ಬಾಂಬ್ ದಾಳಿ ನಡೆಸಿದ್ದು, 60 ಮಂದಿ ಮೃತಪಟ್ಟಿದ್ದಾರೆ.
‘ಬಿಲೋಗೊರಿವ್ಕಾ ಗ್ರಾಮದ ಶಾಲೆಯೊಂದರಲ್ಲಿ 90 ಮಂದಿ ಆಶ್ರಯ ಪಡೆಯುತ್ತಿದ್ದರು. ಆ ಪೈಕಿ 60 ಮಂದಿ ಬಾಂಬ್ ದಾಳಿಯಲ್ಲಿ ಸಾವಿಗೀಡಾಗಿದ್ದಾರೆ’ ಎಂದು ಲುಗಾನ್ಸ್ಕ್‌ನ ಪ್ರಾದೇಶಿಕ ಗವರ್ನರ್ ಸೆರ್ಗಿ ಗೈಡೈ ಖಚಿತಪಡಿಸಿದ್ದಾರೆ.
ಬಾಂಬ್ ದಾಳಿಯಿಂದಾಗಿ ಶಾಲಾ ಕಟ್ಟಡ ಸಂಪೂರ್ಣ ಹಾನಿಯಾಗಿದೆ. ಇದರ ನಡುವೆ ಕಾರ್ಯಾಚರಣೆ ನಡೆಸಿ 27 ಮಂದಿಯನ್ನು ರಕ್ಷಿಸಲಾಗಿದೆ. ಸದ್ಯ ಕಾರ್ಯಾಚರಣೆ ಮುಂದುವರಿದಿದೆ ಎಂದು ಗೈಡೈ ತಿಳಿಸಿದ್ದಾರೆ.
‘ರಷ್ಯಾ ಮತ್ತು ಉಕ್ರೇನ್ ಬಿಕ್ಕಟ್ಟಿಗೆ ಶಾಂತಿಯುತ ಪರಿಹಾರ ಕಂಡುಕೊಳ್ಳಬೇಕು’ ಎಂಬ ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರ ನಿಲುವನ್ನು ಭದ್ರತಾ ಮಂಡಳಿಯು ಸರ್ವಾನುಮತದಿಂದ ಅಂಗೀಕರಿಸಿದೆ.
ರಷ್ಯಾ ಫೆ.24ರಂದು ಉಕ್ರೇನ್ ಮೇಲೆ ಆರಂಭಿಸಿದ ಸೇನಾ ಕಾರ್ಯಾಚರಣೆಯ ನಂತರ ಇದೇ ಮೊದಲ ಬಾರಿಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಉಕ್ರೇನ್ ಬಿಕ್ಕಟ್ಟು ಶಮನಕ್ಕೆ ಸರ್ವಾನುಮತದ ಹೇಳಿಕೆ ಬಂದಿದ್ದು, ‘ಶಾಂತಿ ಮತ್ತು ಭದ್ರತೆಯ ಸ್ಥಾಪನೆ’ ಬಗ್ಗೆ ತೀವ್ರ ಕಳಕಳಿ ವ್ಯಕ್ತವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.