ADVERTISEMENT

ಶಸ್ತ್ರಾಸ್ತ್ರಗಳನ್ನು ಬಳಸಲು ಉಕ್ರೇನ್‌ಗೆ ವಿಧಿಸಿದ್ದ ನಿರ್ಬಂಧ ಸಡಿಲಿಸಿದ ಅಮೆರಿಕ

ರಾಯಿಟರ್ಸ್
Published 18 ನವೆಂಬರ್ 2024, 4:02 IST
Last Updated 18 ನವೆಂಬರ್ 2024, 4:02 IST
<div class="paragraphs"><p>ಅಮೆರಿಕ ಅಧ್ಯಕ್ಷ&nbsp;ಜೋ ಬೈಡನ್‌ ಮತ್ತು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ</p></div>

ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಮತ್ತು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ

   

–ರಾಯಿಟರ್ಸ್ ಚಿತ್ರ

ವಾಷಿಂಗ್ಟನ್‌: ರಷ್ಯಾದ ಭೂಪ್ರದೇಶದ ಮೇಲೆ ದಾಳಿ ನಡೆಸಲು ಅಮೆರಿಕ ಒದಗಿಸಿದ ಶಸ್ತ್ರಾಸ್ತ್ರಗಳನ್ನು ಬಳಸದಂತೆ ಉಕ್ರೇನ್‌ಗೆ ಹೇರಿದ್ದ ನಿರ್ಬಂಧಗಳನ್ನು ಜೋ ಬೈಡನ್‌ ನೇತೃತ್ವದ ಆಡಳಿತ ತೆಗೆದುಹಾಕಿದೆ. ಇದು ಉಕ್ರೇನ್‌-ರಷ್ಯಾ ಸಂಘರ್ಷ ಕುರಿತಾದ ಅಮೆರಿಕದ ನೀತಿಯಲ್ಲಿ ಮಹತ್ವದ ಬದಲಾವಣೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ADVERTISEMENT

ಅಮೆರಿಕ ಈ ನಿರ್ಧಾರದಿಂದ ರಷ್ಯಾದ ಮೇಲೆ ಉಕ್ರೇನ್ ತನ್ನ ಮೊದಲ ದೀರ್ಘ ಶ್ರೇಣಿಯ ದಾಳಿಯನ್ನು ನಡೆಸಲು ಯೋಜನೆ ರೂಪಿಸಿದೆ ಎಂದು ಮೂಲಗಳು ತಿಳಿಸಿವೆ. ಈ ಕುರಿತು ಶ್ವೇತಭವನವು ಪ್ರತಿಕ್ರಿಯೆ ನೀಡಲು ನಿರಾಕರಿಸಿದೆ.

2025ರ ಜನವರಿ 20ರಂದು ಅಮೆರಿಕ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಇದಕ್ಕೂ ಎರಡು ತಿಂಗಳ ಮೊದಲೇ ಬೈಡನ್‌ ಅವರು ಅಮೆರಿಕದ ಶಸ್ತ್ರಾಸ್ತ್ರಗಳನ್ನು ಬಳಸಲು ಅನುಮತಿ ನೀಡಬೇಕೆಂಬ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಅವರ ಮನವಿಗೆ ಸ್ಪಂದಿಸಿದ್ದಾರೆ.

ಉಕ್ರೇನ್‌ ವಿರುದ್ಧದ ಯುದ್ಧದಲ್ಲಿ ರಷ್ಯಾಗೆ ನೆರವಾಗಲು ಉತ್ತರ ಕೊರಿಯಾ ಸೇನಾಪಡೆಗಳನ್ನು ಕಳುಹಿಸಿದೆ. ಇದಕ್ಕೆ ಪ್ರತ್ಯುತ್ತರವಾಗಿ ಅಮೆರಿಕ ತನ್ನ ನಿಲುವು ಬದಲಾಯಿಸಿದೆ ಎಂದು ವಿಶ್ಲೇಷಿಸಲಾಗಿದೆ.

ಮೊದಲ ಹಂತದಲ್ಲಿ ಅಮೆರಿಕ ನಿರ್ಮಿತ 306 ಕಿ.ಮೀ. ವ್ಯಾಪ್ತಿಯನ್ನು ಕ್ರಮಿಸಬಲ್ಲ ಎಟಿಎಸಿಎಂಎಸ್ ರಾಕೆಟ್‌ಗಳನ್ನು ಬಳಸಿಕೊಂಡು ರಷ್ಯಾದ ಮೇಲೆ ಉಕ್ರೇನ್‌ ದಾಳಿ ನಡೆಸುವ ಸಾಧ್ಯತೆಯಿದೆ.

ಉಕ್ರೇನ್‌ಗೆ ಅಮೆರಿಕ ಒದಗಿಸಿರುವ ಶಸ್ತ್ರಾಸ್ತ್ರಗಳನ್ನು ಹೇಗೆ ಬಳಸಬಹುದು ಎಂಬುದರ ಕುರಿತು ನಿಯಮಗಳನ್ನು ಸಡಿಲಗೊಳಿಸುವಂತೆ ಕೆಲವು ರಿಪಬ್ಲಿಕನ್‌ ನಾಯಕರು ಒತ್ತಾಯಿಸಿದ್ದಾರೆ.

ಇತ್ತ ಶಸ್ತ್ರಾಸ್ತ್ರಗಳ ಬಳಕೆಯ ಮೇಲಿನ ಮಿತಿಗಳನ್ನು ಸಡಿಲಗೊಳಿಸುವ ಅಮೆರಿಕದ ಕ್ರಮವನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ರಷ್ಯಾ ಎಚ್ಚರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.