ಮಾಸ್ಕೋ: ಉಕ್ರೇನ್ ಮೇಲಿನ ಮಿಲಿಟರಿ ಕಾರ್ಯಾಚರಣೆಗೆ ರಷ್ಯಾದಲ್ಲೇ ವಿರೋಧ ವ್ಯಕ್ತವಾಗಿದೆ.
ವ್ಲಾಡಿಮಿರ್ ಪುಟಿನ್ ನಿರ್ಧಾರವನ್ನು ವಿರೋಧಿಸಿ ರಷ್ಯಾದ ನಗರಗಳಲ್ಲಿ ರಸ್ತೆಗಿಳಿದ ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ ಎಂದು ಸುದ್ದಿಸಂಸ್ಥೆ ‘ಎಎಫ್‌ಪಿ’ ವರದಿ ಮಾಡಿದೆ.
ಪಾಶ್ಚಿಮಾತ್ಯ ದೇಶಗಳು ಮತ್ತು ವಿಶ್ವ ಸಮುದಾಯದ ಎಚ್ಚರಿಕೆಯನ್ನು ಧಿಕ್ಕರಿಸಿ ಪುಟಿನ್ ಗುರುವಾರ ಉಕ್ರೇನ್‌ನಲ್ಲಿ ‘ಮಿಲಿಟರಿ ಕಾರ್ಯಾಚರಣೆ’ ಘೋಷಿಸಿದ್ದಾರೆ.
ಇದನ್ನು ವಿರೋಧಿಸಿ ಮಾಸ್ಕೋದ ಪುಷ್ಕಿನ್ ಚೌಕದ ಬಳಿ ನೆರೆದಿದ್ದ ಪ್ರತಿಭಟನಾಕಾರರು ‘ಯುದ್ಧ ಬೇಡ’ ಎಂದು ಘೋಷಣೆ ಕೂಗಿದ್ದಾರೆ. ಇದೇ ರೀತಿಯ ಪ್ರತಿಭಟನೆಗಳು ರಷ್ಯಾದ ಎರಡನೇ ಪ್ರಮುಖ ನಗರ ಸೇಂಟ್ ಪೀಟರ್ಸ್‌ಬರ್ಗ್‌ನಲ್ಲೂ ಕಂಡಿಬಂದಿವೆ.
ಈವರೆಗೆ ರಷ್ಯಾದ ಭದ್ರತಾ ಪಡೆಗಳು 1,700 ಕ್ಕೂ ಹೆಚ್ಚು ಯುದ್ಧ ವಿರೋಧಿ ಪ್ರತಿಭಟನಾಕಾರರನ್ನು ಬಂಧಿಸಿವೆ.
‘ನಾನು ಆಘಾತಕ್ಕೊಳಗಾಗಿದ್ದೇನೆ. ನನ್ನ ಸಂಬಂಧಿಕರು ಮತ್ತು ಪ್ರೀತಿಪಾತ್ರರು ಉಕ್ರೇನ್‌ನಲ್ಲಿ ವಾಸಿಸುತ್ತಿದ್ದಾರೆ’ ಎಂದು ಅನಸ್ತಾಸಿಯಾ ನೆಸ್ತುಲ್ಯ(ಮಾಸ್ಕೋದ ಯುದ್ಧ ವಿರೋಧಿ ಪ್ರತಿಭಟನಾಕಾರ) ಗುರುವಾರ ಎಎಫ್‌ಪಿಗೆ ತಿಳಿಸಿದ್ದಾರೆ.
ಮತ್ತೊಂದೆಡೆ, ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿ, ಮಾಸ್ಕ್ ಧರಿಸಿದ್ದ ಪೊಲೀಸ್ ಅಧಿಕಾರಿಗಳು ಪ್ರತಿಭಟನಾಕಾರರನ್ನು ಬಲವಂತವಾಗಿ ಎಳೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ.
‘ಅಧಿಕಾರಿಗಳು ಹುಚ್ಚರಾಗಿದ್ದಾರೆ. ಪ್ರಚಾರದಿಂದ ಜನರು ಮೂರ್ಖರಾಗಿದ್ದಾರೆ ಎಂಬ ಭಾವನೆ ನನ್ನಲ್ಲಿದೆ’ ಎಂದು ಸ್ವೆಟ್ಲಾನಾ ವೋಲ್ಕೊವಾ ಎಂಬುವವರು ತಿಳಿಸಿದ್ದಾರೆ. ಪುಟಿನ್ ಅವರನ್ನು ಬಂಧಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.