ವಾಷಿಂಗ್ಟನ್: ನ್ಯಾಟೊ ಮಿತ್ರರಾಷ್ಟ್ರವಾದ ಜರ್ಮನಿಯಲ್ಲಿ ಹೆಚ್ಚುವರಿ 7,000 ಸೈನಿಕರನ್ನು ನಿಯೋಜಿಸುವಂತೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಆದೇಶ ಹೊರಡಿಸಿದ್ದಾರೆ.
ನ್ಯಾಟೊ ರಾಷ್ಟ್ರಗಳ ಸಹಕಾರದ ಭಾಗವಾಗಿ ಜರ್ಮನಿಗೆ ಹೆಚ್ಚುವರಿ ಸೇನಾ ಪಡೆಯನ್ನು ನಿಯೋಜಿಸುವಂತೆ ಬೈಡನ್ ತಿಳಿಸಿರುವುದಾಗಿ ಶ್ವೇತಭವನ ಪ್ರಕಟಣೆಯಲ್ಲಿ ಹೇಳಿದೆ.
ಉಕ್ರೇನ್‌ನಲ್ಲಿ ಬಿಕ್ಕಟ್ಟು ಉಲ್ಬಣಿಸಿರುವ ಹಿನ್ನೆಲೆಯಲ್ಲಿ ರಷ್ಯಾದ ಒತ್ತಡ ಕ್ರಮಗಳ ವಿರುದ್ಧ ಪಾಶ್ಚಿಮಾತ್ಯ ರಾಷ್ಟ್ರಗಳು ಏಕತೆಯನ್ನು ಕಾಪಾಡಿಕೊಳ್ಳಬೇಕು ಎಂದು ಬೈಡನ್ ಕರೆ ನೀಡಿದ್ದಾರೆ ಎಂದು ಶ್ವೇತಭವನ ತಿಳಿಸಿದೆ.
ಪೂರ್ವ ಉಕ್ರೇನ್‌ನಲ್ಲಿ ರಷ್ಯಾ ಬೆಂಬಲಿತ ಪ್ರತ್ಯೇಕತಾವಾದಿಗಳ ಹಿಡಿತದಲ್ಲಿರುವ ಎರಡು ಪ್ರದೇಶಗಳಲ್ಲಿ ಶಾಂತಿ ಸ್ಥಾಪನೆ ಮಾಡುವ ಕಾರ್ಯಾಚರಣೆಗೆ ಸಶಸ್ತ್ರ ಪಡೆಗಳನ್ನು ನಿಯೋಜಿಸುವ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಮನವಿಗೆ ರಷ್ಯಾದ ಮೇಲ್ಮನೆಯಲ್ಲಿ ಸರ್ವಾನುಮತದಿಂದ ಒಪ್ಪಿಗೆ ಸಿಕ್ಕಿತ್ತು.
ಈ ಬೆಳವಣಿಗೆ ಬೆನ್ನಲ್ಲೇ ನ್ಯಾಟೊ ರಾಷ್ಟ್ರಗಳ ಸಹಕಾರದ ಭಾಗವಾಗಿ ಜರ್ಮನಿಯಲ್ಲಿ ಹೆಚ್ಚುವರಿ ಸೇನಾ ಪಡೆಯನ್ನು ನಿಯೋಜನೆ ಮಾಡಲು ಅಮೆರಿಕ ಮುಂದಾಗಿರುವುದು ಕುತೂಹಲ ಮೂಡಿಸಿದೆ.
'ಉಕ್ರೇನ್‌ನೊಳಗೆ ನ್ಯಾಟೊದ ಸಶಸ್ತ್ರ ಪಡೆಗಳು ಇಲ್ಲ. ಅಲ್ಲದೇ, ಆ ದೇಶಕ್ಕೆ ಸೇನಾ ಪಡೆಯನ್ನು ರವಾನಿಸುವ ಯೋಜನೆಯನ್ನೂ ನಾವು ಹೊಂದಿಲ್ಲ’ ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಜೆನ್ಸ್ ಸ್ಟೋಲ್ಟೆನ್‌ಬರ್ಗ್ ಅವರು ಗುರುವಾರ ಸ್ಪಷ್ಟಪಡಿಸಿದ್ದರು.
ಉಕ್ರೇನ್ ಅನ್ನು ನ್ಯಾಟೊ ಒಕ್ಕೂಟಕ್ಕೆ ಸೇರಿಸಲಾಗುವುದಿಲ್ಲ ಎಂಬುದನ್ನು ಖಾತ್ರಿಪಡಿಸುವಂತೆ ರಷ್ಯಾ ಬೇಡಿಕೆ ಇಟ್ಟಿತ್ತು. ಇದನ್ನು ತಿರಸ್ಕರಿಸಿರುವ ಅಮೆರಿಕ ಮತ್ತು ನ್ಯಾಟೊ, ಉಕ್ರೇನ್ ಮೇಲೆ ಆಕ್ರಮಣ ಮಾಡಿದರೆ, ಆರ್ಥಿಕ ನಿರ್ಬಂಧಗಳನ್ನು ಎದುರಿಸಬೇಕಾಗುತ್ತದೆ ಎಂದು ರಷ್ಯಾಗೆ ಎಚ್ಚರಿಕೆ ನೀಡಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.