ಮಾಸ್ಕೊ: ಉಕ್ರೇನ್–ರಷ್ಯಾ ಬಿಕ್ಕಟ್ಟು ಉಲ್ಬಣಗೊಂಡಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ವ್ಯಕ್ತವಾದ ಖಂಡನೆ ಮತ್ತು ನಿರ್ಬಂಧಗಳನ್ನು ನಿರ್ಲಕ್ಷಿಸಿ ರಷ್ಯಾದ ಸೇನೆಯು ಉಕ್ರೇನ್ ಮೇಲೆ ಗುರುವಾರ ಬೆಳಿಗ್ಗೆಯೇ ದಾಳಿ ನಡೆಸಿದೆ.ಈ ವಿಚಾರದಲ್ಲಿ ಯಾರೇ ಆದರೂ ಮಧ್ಯಪ್ರವೇಶಿಸಿದರೆ ಹಿಂದೆಂದೂ ಕಂಡಿರದಂತಹ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಎಚ್ಚರಿಕೆ ನೀಡಿದ್ದಾರೆ.
ಪ್ರಮುಖ ಪಟ್ಟಣಗಳಾದ ಕೀವ್, ಖಾರ್ಕಿವ್ ಮತ್ತು ಒಡೆಸಾಗಳಲ್ಲಿ ಮುಂಜಾನೆಯಿಂದಲೇ ಭಾರಿ ಸ್ಫೋಟದ ಸದ್ದು ಕೇಳಿಸಿದೆ. ಉಕ್ರೇನ್ ಮೇಲೆ ಆಕ್ರಮಣವಾದರೆ ಭಾರಿ ಸಾವು ನೋವು ಸಂಭವಿಸಬಹುದು ಮತ್ತು ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಉಕ್ರೇನ್ ಸರ್ಕಾರ ಪತನವಾಗಬಹುದು ಎಂದು ಜಾಗತಿಕ ನಾಯಕರು ಮೊದಲಿನಿಂದಲೇ ಹೇಳಿಕೊಂಡು ಬಂದಿದ್ದಾರೆ. ಆದರೆ, ಪುಟಿನ್ ಅವರು ಇದಾವುದನ್ನೂ ಲೆಕ್ಕಿಸಿಲ್ಲ.ಹತ್ತಕ್ಕೂ ಹೆಚ್ಚು ನಗರಗಳ ಮೇಲೆ ಕ್ಷಿಪಣಿ ದಾಳಿ ನಡೆಸಲಾಗಿದೆ. ಕೀವ್‌ನ ವಿಮಾನ ನಿಲ್ದಾಣದ ಮೇಲೆಯೂ ಕ್ಷಿಪಣಿ ದಾಳಿ ನಡೆದಿದೆ.
ಉಕ್ರೇನ್‌ನಲ್ಲಿ ಸೇನೆಯು ಇಲ್ಲದಂತೆ ಮಾಡುವುದಕ್ಕಾಗಿ ವಿಶೇಷ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಪುಟಿನ್ ಹೇಳಿದ್ದಾರೆ.
ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರು ದೇಶದಲ್ಲಿ ತುರ್ತುಪರಿಸ್ಥಿತಿ ಘೋಷಿಸಿದ್ದಾರೆ. ಉಕ್ರೇನ್‌ನ ಸೇನಾ ಮೂಲಸೌಕರ್ಯಗಳನ್ನೇ ಗುರಿಯಾಗಿಸಿಕೊಂಡು ರಷ್ಯಾ ದಾಳಿ ನಡೆಸುತ್ತಿದೆ ಎಂದು ಅವರು ಹೇಳಿದ್ದಾರೆ.
ರಷ್ಯಾಕ್ಕೆ ಪಾಠ ಕಲಿಸುವುದಕ್ಕಾಗಿ ಹೊಸ ನಿರ್ಬಂಧಗಳನ್ನು ಹೇರಲಾಗುವುದು ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡನ್ ಶಪಥ ಮಾಡಿದ್ದಾರೆ. ಆದರೆ, ಪುಟಿನ್ ಅವರು ಆಕ್ರಮಣವನ್ನು ಸಮರ್ಥಿಸಿಕೊಂಡಿದ್ದಾರೆ.
ಪೂರ್ವ ಉಕ್ರೇನ್‌ನ ನಾಗರಿಕರನ್ನು ರಕ್ಷಿಸಲು ದಾಳಿ ಅನಿವಾರ್ಯವಾಗಿತ್ತು ಎಂದು ಅವರು ಹೇಳಿದ್ದಾರೆ.
ನ್ಯಾಟೊಗೆ ಉಕ್ರೇನ್ ಸೇರ್ಪಡೆಯನ್ನು ತಡೆಯಬೇಕು ಎಂಬ ತಮ್ಮ ಬೇಡಿಕೆಯನ್ನು ಅಮೆರಿಕ ಮತ್ತು ಅದರ ಮಿತ್ರ ದೇಶಗಳು ನಿರ್ಲಕ್ಷಿಸಿವೆ ಎಂದು ಪುಟಿನ್ ಆರೋಪಿಸಿದ್ದಾರೆ. ಉಕ್ರೇನ್ ಅನ್ನು ವಶಕ್ಕೆ ಪಡೆಯುವುದು ತಮ್ಮ ಉದ್ದೇಶವಲ್ಲ, ಆ ದೇಶದ ಸೇನೆಯು ಇಲ್ಲದಂತೆ ಮಾಡುವುದು ಮತ್ತು ಅಪರಾಧ ಎಸಗಿದವರಿಗೆ ಶಿಕ್ಷೆ ನೀಡುವುದು ಉದ್ದೇಶ ಎಂದು ಅವರು ಹೇಳಿಕೊಂಡಿದ್ದಾರೆ. ಆಕ್ರಮಣವನ್ನು ಪುಟಿನ್ ಅವರು ‘ವಿಶೇಷ ಸೇನಾ ಕಾರ್ಯಾಚರಣೆ’ ಎಂದು ಬಣ್ಣಿಸಿದ್ದಾರೆ.
ಉಕ್ರೇನ್‌ನ ವಾಯುನೆಲೆಗಳು ಮತ್ತು ಇತರ ಸೇನಾ ಸೊತ್ತುಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ. ಜನದಟ್ಟಣೆಯ ಪ್ರದೇಶದ ಮೇಲೆ ದಾಳಿ ನಡೆಸಿಲ್ಲ ಎಂದು ರಷ್ಯಾ ಹೇಳಿದೆ. ನಾಗರಿಕರಿಗೆ ಯಾವ ಬೆದರಿಕೆಯೂ ಇಲ್ಲ ಎಂದೂ ಹೇಳಿದೆ.
ಕೀವ್‌ನಲ್ಲಿ ಮೊದಲ ಸ್ಫೋಟಗಳ ಸಂದರ್ಭದಲ್ಲಿ ಜನರು ಬೀದಿಯಲ್ಲಿ ಕಿರುಚಾಡುತ್ತಿದ್ದ ದೃಶ್ಯ ಕಂಡುಬಂತು. ಸ್ವಲ್ಪ ಕಾಲದ ಬಳಿಕ ನಗರವು ಸಹಜ ಸ್ಥಿತಿಗೆ ಮರಳಿದೆ.
ರಷ್ಯಾ ಪಡೆಗಳು ಚೆರನಿಹಿವ್ ಪ್ರದೇಶದಲ್ಲಿ 10–20 ಕಿ.ಮೀ.ನಷ್ಟುಉಕ್ರೇನ್‌ನ ಒಳಗೆ ಬಂದಿವೆ ಎಂದು ಉಕ್ರೇನ್ ಅಧ್ಯಕ್ಷರ ಸಲಹೆಗಾರರೊಬ್ಬರು ಹೇಳಿದ್ದಾರೆ. ಆದರೆ, ರಾಜಧಾನಿ ಕೀವ್ ಸುರಕ್ಷಿತವಾಗಿದೆ ಎಂದು ತಿಳಿಸಿದ್ದಾರೆ.
ಉಕ್ರೇನ್ ಮೇಲೆ ಯುದ್ಧವು ಬೀರುವ ಪರಿಣಾಮ ಘೋರವಾಗಿರುತ್ತದೆ. ಅದರ ಜತೆಗೆ, ಜಾಗತಿಕವಾಗಿಯೂ ಪ್ರತಿಕೂಲ ಪರಿಣಾಮವನ್ನು ಬೀರಬಹುದು. ರಷ್ಯಾ ಮೇಲೆ ಹೇರಲಾದ ಆರ್ಥಿಕ ಮತ್ತು ಇತರ ರೀತಿಯ ನಿರ್ಬಂಧಗಳು ಇಡೀ ಜಗತ್ತಿನ ಮೇಲೆಯೂ ಪರಿಣಾಮ ಉಂಟು ಮಾಡಲಿದೆ. ಯುರೋಪ್‌ಗೆ ತೈಲ ಪೂರೈಕೆ ಏರುಪೇರಾಗಲಿದೆ. ಇದರಿಂದ ಜಾಗತಿಕ ಹಣಕಾಸು ವ್ಯವಸ್ಥೆಗೆ ಹೊಡೆತ ಬೀಳಲಿದೆ. ಶೀತಲ ಸಮರ ನಂತರ ಇದ್ದ ಸಮತೋಲನಕ್ಕೆ ಈಗಿನ ಯುದ್ಧವು ದೊಡ್ಡ ಬೆದರಿಕೆಯಾಗಿದೆ. ವಿವಿಧ ದೇಶಗಳ ಷೇರು ಮಾರುಕಟ್ಟೆಗಳು ಕುಸಿತ ಕಂಡಿವೆ. ಕಚ್ಚಾ ತೈಲದ ದರದಲ್ಲಿಯೂ ಏರಿಕೆಯಾಗಿದೆ.
ಸೇನಾ ಕಾರ್ಯಾಚರಣೆ ಇಲ್ಲ: ನ್ಯಾಟೊ
ಬ್ರಸೆಲ್ಸ್ (ಎಪಿ): ಉಕ್ರೇನ್ ಮತ್ತು ರಷ್ಯಾ ಸಮೀಪದಲ್ಲಿರುವ ಮಿತ್ರ ದೇಶಗಳಲ್ಲಿನ ಭೂ, ಸಾಗರ ಮತ್ತು ವಾಯು ಪ್ರದೇಶ ಭದ್ರತೆಯನ್ನು ಹೆಚ್ಚಿಸಲು ನ್ಯಾಟೊ ನಿರ್ಧರಿಸಿದೆ. ‘ಯಾವುದೇ ರೀತಿಯ ಪರಿಸ್ಥಿತಿಗೆ ತಕ್ಕ ಪ್ರತಿಕ್ರಿಯೆ ನೀಡಲು ಸಜ್ಜಾಗಿದ್ದೇವೆ’ ಎಂದು ನ್ಯಾಟೊ ರಾಯಭಾರಿಗಳು ಗುರುವಾರ ಹೇಳಿದ್ದಾರೆ.
ನ್ಯಾಟೊದ 30 ಸದಸ್ಯ ರಾಷ್ಟ್ರಗಳ ಪೈಕಿ ಹಲವು ದೇಶಗಳು ಉಕ್ರೇನ್‌ಗೆ ಶಸ್ತ್ರಾಸ್ತ್ರ ಮತ್ತು ಇತರ ಸೇನಾ ಸಲಕರಣೆಗಳ ಪೂರೈಕೆ ಮಾಡುತ್ತಿವೆ. ಆದರೆ, ನ್ಯಾಟೊ ಮೂಲಕ ಯಾವುದೇ ಪೂರೈಕೆ ಇಲ್ಲ. ಉಕ್ರೇನ್‌ಗೆ ಬೆಂಬಲವಾಗಿ ಸೇನಾ ಕಾರ್ಯಾಚರಣೆ ನಡೆಸುವ ಉದ್ದೇಶವೂ ಇಲ್ಲ ಎಂದು ನ್ಯಾಟೊ ಹೇಳಿದೆ.
ಉಕ್ರೇನ್ ಮತ್ತು ರಷ್ಯಾ ಸಮೀಪದಲ್ಲಿರುವ ನ್ಯಾಟೊ ಸದಸ್ಯ ರಾಷ್ಟ್ರಗಳೆಂದರೆ, ಈಸ್ಟೋನಿಯಾ, ಲಾತ್ವಿಯಾ, ಲಿಥುವೇನಿಯಾ ಮತ್ತು ಪೋಲೆಂಡ್.
74 ಸೇನಾ ನೆಲೆ ನಾಶ
*ಉಕ್ರೇನ್‌ನ 74 ಸೇನಾ ನೆಲೆಗಳನ್ನು ನಾಶ ಮಾಡಲಾಗಿದೆ. ಅದರಲ್ಲಿ 11 ವಾಯುನೆಲೆಗಳೂ ಸೇರಿವೆ ಎಂದು ರಷ್ಯಾ ಹೇಳಿಕೊಂಡಿದೆ. ಮೂರು ಕಮಾಂಡ್ ಠಾಣೆಗಳು, 18 ರೇಡಾರ್ ಕೇಂದ್ರಗಳು, ವಿಮಾನ ಹೊಡೆದುರುಳಿಸುವ ಎರಡು ವ್ಯವಸ್ಥೆಗಳು ನಾಶಗೊಂಡಿವೆ. ಸೇನೆಯ ಒಂದು ಹೆಲಿಕಾಪ್ಟರ್ ಮತ್ತು ನಾಲ್ಕು ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ
*ರಷ್ಯಾದ ಕನಿಷ್ಠ ಆರು ಯುದ್ಧ ವಿಮಾನಗಳನ್ನು ಹೊಡೆದುರುಳಿಸಲಾಗಿದೆ. ಉಕ್ರೇನ್‌ನ 40 ಸೈನಿಕರು ಮತ್ತು 10 ನಾಗರಿಕರು ಮೃತಪಟ್ಟಿದ್ದಾರೆ. ಹತ್ತಾರು ಮಂದಿ ಗಾಯಗೊಂಡಿದ್ದಾರೆ ಎಂದು ಝೆಲೆನ್‌ಸ್ಕಿ ಹೇಳಿದ್ದಾರೆ. ರಷ್ಯಾ ಜತೆಗಿನ ರಾಜತಾಂತ್ರಿಕ ಸಂಬಂಧವನ್ನು ಉಕ್ರೇನ್ ಕಡಿದುಕೊಂಡಿದೆ
*ಉಕ್ರೇನ್‌ನ ಯುದ್ಧ ವಿಮಾನವೊಂದು ಪತನವಾಗಿದೆ. ಅದರಲ್ಲಿ 14 ಮಂದಿ ಇದ್ದರು. ಅದರಲ್ಲಿ ಇದ್ದವರ ಪೈಕಿ ಎಷ್ಟು ಮಂದಿ ಮೃತಪಟ್ಟಿದ್ದಾರೆ ಎಂಬುದು ತಿಳಿದುಬಂದಿಲ್ಲ
*ಕೀವ್‌ನಿಂದ ಭಾರಿ ಸಂಖ್ಯೆಯಲ್ಲಿ ಜನರು ಹೊರಗೆ ಹೋಗಿದ್ದಾರೆ. ರಷ್ಯಾ ಪಡೆಗಳು ಆಕ್ರಮಣ ಮಾಡುವ ಸಾಧ್ಯತೆ ಕಡಿಮೆ ಇರುವ ಉಕ್ರೇನ್‌ನ ಪಶ್ಚಿಮ ಭಾಗದತ್ತ ಅವರು ಸಾಗುತ್ತಿದ್ದಾರೆ
*ಉಕ್ರೇನ್‌ನಲ್ಲಿರುವ ಭಾರತೀಯರನ್ನು ಕತಾರ್ ಮೂಲಕ ಕರೆತರಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ. ಆದರೆ, ಉಕ್ರೇನ್‌ನ ವಾಯು ಪ್ರದೇಶದಲ್ಲಿ ಯಾವುದೇ ವಿಮಾನ ಹಾರಾಟ ಈಗ ಇಲ್ಲ. ಹಾಗಿರುವಾಗ, ಜನರನ್ನು ಉಕ್ರೇನ್‌ನಿಂದ ಕತಾರ್‌ಗೆ ಕರೆ ತರುವುದು ಹೇಗೆ ಎಂಬುದನ್ನು ಕೇಂದ್ರ ತಿಳಿಸಿಲ್ಲ. ಉಕ್ರೇನ್‌ನಲ್ಲಿ 20 ಸಾವಿರ ಭಾರತೀಯರು ಇದ್ದಾರೆ. ಅವರಲ್ಲಿ ಹೆಚ್ಚಿನವರು ವಿದ್ಯಾರ್ಥಿಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.