ಮಾಸ್ಕೋ: ರಷ್ಯಾ–ಉಕ್ರೇನ್ ಬಿಕ್ಕಟ್ಟಿನ ನಡುವೆಯೂ ದ್ವಿಪಕ್ಷೀಯ ಮಾತುಕತೆ ನಡೆಸಲು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಮಾಸ್ಕೋಗೆ ಆಗಮಿಸಿದ್ದಾರೆ.
ಆರ್ಥಿಕ ಮತ್ತು ವ್ಯಾಪಾರ ಸಹಕಾರ ಕುರಿತು ದ್ವಿಪಕ್ಷೀಯ ಮಾತುಕತೆ ನಡೆಸಲು ಎರಡು ದಿನಗಳ ರಷ್ಯಾ ಭೇಟಿಯನ್ನು ಇಮ್ರಾನ್ ಖಾನ್ ಕೈಗೊಂಡಿದ್ದಾರೆ.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜೊತೆ ಇಮ್ರಾನ್ ಖಾನ್ ಚರ್ಚೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.
ರಷ್ಯಾದ ಕಂಪನಿಗಳ ಸಹಯೋಗದೊಂದಿಗೆ ಬಹುಕೋಟಿ ಡಾಲರ್ ವೆಚ್ಚದ ಗ್ಯಾಸ್ ಪೈಪ್‌ಲೈನ್ ನಿರ್ಮಿಸಲು ಇಮ್ರಾನ್ ಖಾನ್ ಪುಟಿನ್ ಅವರಲ್ಲಿ ಮನವಿ ಮಾಡಿಕೊಳ್ಳಲಿದ್ದಾರೆ.
1999ರಲ್ಲಿ ಪಾಕಿಸ್ತಾನದ ಆಗಿನ ಪ್ರಧಾನಿ ನವಾಜ್ ಷರೀಫ್ ರಷ್ಯಾಗೆ ಭೇಟಿ ನೀಡಿದ್ದರು. ಅದಾದ ಬಳಿಕ ರಷ್ಯಾ ಭೇಟಿಗೆ ನೀಡುತ್ತಿರುವ ಮೊದಲ ಪ್ರಧಾನಿ ಇಮ್ರಾನ್ ಖಾನ್. ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನ ಮತ್ತು ರಷ್ಯಾದ ಸಂಬಂಧ ಹಳಸಿತ್ತು. ಕಳೆದ ವರ್ಷ ರಷ್ಯಾದ ವಿದೇಶಾಂಗ ಸಚಿವ ಸರ್ಗೆ ಲಾವ್ರೊವ್ ಇಸ್ಲಾಮಾಬಾದ್‌ಗೆ ಭೇಟಿ ನೀಡಿದ್ದರು.
ಪಾಶ್ಚಿಮಾತ್ಯ ದೇಶಗಳು ಮತ್ತು ವಿಶ್ವ ಸಮುದಾಯದ ಎಚ್ಚರಿಕೆಯನ್ನು ಧಿಕ್ಕರಿಸಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಗುರುವಾರ ಉಕ್ರೇನ್‌ನಲ್ಲಿ ‘ಮಿಲಿಟರಿ ಕಾರ್ಯಾಚರಣೆ’ ಘೋಷಿಸಿದ್ದಾರೆ. ತಮ್ಮ ಶಸ್ತ್ರಾಸ್ತ್ರಗಳನ್ನು ತ್ಯಜಿಸುವಂತೆ ಉಕ್ರೇನ್ ಸೈನಿಕರಿಗೆ ಅವರು ಕರೆ ನೀಡಿದ್ದಾರೆ.
ಇದನ್ನೂ ಓದಿ..ಉಕ್ರೇನ್ ಮೇಲೆ ರಷ್ಯಾ ದಾಳಿ: ದೇಶೀಯ ಷೇರುಪೇಟೆ ಕುಸಿತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.