ಬುಕಾ(ಉಕ್ರೇನ್), ಮಾಸ್ಕೊ: ಉಕ್ರೇನ್ ಮೇಲೆ ಪೂರ್ಣ ಪ್ರಮಾಣದ ವಿಶೇಷ ಸೇನಾ ಕಾರ್ಯಾಚರಣೆ ಕೈಗೊಂಡ ರಷ್ಯಾ ಮೊದಲ ಹಂತದ ಯುದ್ಧ ಪೂರ್ಣಗೊಳಿಸಿ, ಶಾಂತಿಮಾತುಕತೆಗಳ ನಡುವೆಯೂ ಎರಡನೇ ಹಂತದ ಕಾರ್ಯಾಚರಣೆಗೆ ಕಾಲಿಟ್ಟು ವಾರ ಕಳೆದಿದೆ.
ಮೊದಲ ಹಂತದಲ್ಲಿ ಉಕ್ರೇನಿನ ಸೇನಾ ನೆಲೆ, ವಾಯುನೆಲೆ, ಇಂಧನ ಸಂಗ್ರಹಾಗಾರಗಳನ್ನೇ ಪ್ರಮುಖ ಗುರಿಯಾಗಿಸಿ ರಷ್ಯಾ ಪಡೆಗಳು ದಾಳಿ ನಡೆಸಿದ್ದವು. ಆದರೆ, ಉಕ್ರೇನಿನವಾಯುಪ್ರದೇಶದ ಮೇಲೆ ಪಾರಮ್ಯ ಸಾಧಿಸಲು ರಷ್ಯಾ ಪಡೆಗಳಿಗೆ ಆಗಿರಲಿಲ್ಲ. ಆರಂಭದಲ್ಲಿ ಆದ ಹಿನ್ನಡೆ ಸರಿದೂಗಿಸಲೆಂಬಂತೆ ಯುದ್ಧತಂತ್ರವನ್ನು ಪುಟಿನ್ ಪಡೆ ಬದಲಿಸಿಕೊಂಡಂತಿದೆ. ಉಕ್ರೇನಿನ ಪೂರ್ವ ಮತ್ತು ಕೇಂದ್ರ ಭಾಗದ ನಗರಗಳ ಮೇಲೆ ನಿರಂತರ ವೈಮಾನಿಕ ದಾಳಿಯನ್ನು ನಡೆಸುತ್ತಿದೆ.
ಉಕ್ರೇನಿನ ಪ್ರಮುಖ ಕಾರ್ಯತಂತ್ರದ ಭಾಗವಾಗಿರುವ ಬಂದರು ನಗರ ಒಡೆಸಾದ ಮೇಲೆ ರಷ್ಯಾ ಭಾನುವಾರು ನಸುಕಿನಲ್ಲಿ ಕ್ಷಿಪಣಿ ದಾಳಿ ನಡೆಸಿದೆ.ಹೆಚ್ಚು ನಿಖರವಾದ ಸಮುದ್ರ ಮತ್ತು ವಾಯು ಆಧರಿತ ಕ್ಷಿಪಣಿಗಳು ಒಡೆಸಾ ನಗರದ ಬಳಿ ಇರುವ ತೈಲ ಸಂಸ್ಕರಣಾಗಾರ ಮತ್ತು ಇಂಧನ ಹಾಗೂ ಲೂಬ್ರಿಕೆಂಟ್‌ಗಳ ಮೂರು ಸಂಗ್ರಹಣಾಗಾರಗಳನ್ನು ನಾಶಪಡಿಸಿವೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ಹೇಳಿದೆ.
ರಷ್ಯಾದ ವಾಯು ಪಡೆಗಳು ‘ಕಳೆದ 24 ತಾಸುಗಳಲ್ಲಿ ಉಕ್ರೇನ್ ಸೇನೆಯ ಎರಡು ಫಿರಂಗಿ ಘಟಕಗಳು (ಆರ್ಟಿಲರಿ ಕ್ಲಸ್ಟರ್) ಮತ್ತು ಎರಡು ಬಹು ಉಡಾವಣಾ ರಾಕೆಟ್ ವ್ಯವಸ್ಥೆಗಳು ಸೇರಿ ಒಟ್ಟು 51 ಸೇನಾ ನೆಲೆಗಳನ್ನು ನಾಶಪಡಿಸಿವೆ’ ಎಂದು ರಷ್ಯಾದ ರಕ್ಷಣಾ ಸಚಿವಾಲಯದ ವಕ್ತಾರ, ಮೇಜರ್ ಜನರಲ್ ಐಗೋರ್ ಕೊನಶೆಂಕವ್ ಭಾನುವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಈ ನಡುವೆಕೀವ್ ಮತ್ತು ಹೋಸ್ತೊಮೆಲ್ ಪ್ರದೇಶಗಳ ನಿಯಂತ್ರಣವನ್ನು ಮರಳಿ ಪಡೆಯುವಲ್ಲಿಉಕ್ರೇನ್ ಪಡೆಗಳು ಯಶಸ್ವಿಯಾಗಿವೆ. ಆದರೆ, ಹೋಸ್ತೊಮೆಲ್ ವಿಮಾನ ನಿಲ್ದಾಣದಲ್ಲಿದ್ದ ಜಗತ್ತಿನ ಅತಿ ದೊಡ್ಡ ಸರಕು ಸಾಗಣೆ ವಿಮಾನ ಆಂಟೊನೊವ್ ಎಎನ್–225 ಮ್ರಿಯಾ ವನ್ನು ರಷ್ಯಾ ಪಡೆಗಳು ನಾಶಪಡಿಸಿವೆ ಎಂದು ಉಕ್ರೇನ್ ರಕ್ಷಣಾ ಸಚಿವಾಲಯ ಮೊದಲ ಬಾರಿಗೆ ಅಧಿಕೃತವಾಗಿ ಹೇಳಿದೆ.
‘ರಷ್ಯಾದ ಆಕ್ರಮಣಕಾರರು ಮ್ರಿಯಾ ನಾಶಪಡಿಸಿದ್ದಾರೆ. ಆದರೆ, ನಮ್ಮ ಕನಸುಗಳನ್ನು ಅವರಿಂದ ಭಗ್ನಗೊಳಿಸಲು ಸಾಧ್ಯವಿಲ್ಲ’ ಎಂದು ಅದು ಹೇಳಿದೆ.
ಬಂದರು ನಗರ ಒಡೆಸಾದ ಮೇಲೆ ರಷ್ಯಾ ಭಾನುವಾರ ಉಡಾಯಿಸಿದ ಕ್ಷಿಪಣಿಗಳಲ್ಲಿ ಕೆಲವನ್ನುಉಕ್ರೇನಿನ ವಾಯು ರಕ್ಷಣಾ ವ್ಯವಸ್ಥೆ ಹೊಡೆದುರುಳಿಸಿದೆ. ಕಳೆದ 24 ತಾಸು ಗಳಲ್ಲಿರಷ್ಯಾದ ನಾಲ್ಕು ಕ್ಷಿಪಣಿಗಳು, ಬಾಂಬ್‌ಗಳನ್ನು ಒಳಗೊಂಡಿದ್ದ 2 ಸುಖೋಯ್–35 ಯುದ್ಧ ವಿಮಾನಗಳು, ಒಂದು ಹೆಲಿಕಾಪ್ಟರ್, ಮಾನವ ರಹಿತ ಎರಡು ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ ಎಂದು ಉಕ್ರೇನ್
ರಕ್ಷಣಾ ಸಚಿವಾಲಯ ಟ್ವಿಟರ್‌ನಲ್ಲಿ ಹೇಳಿದೆ.
39ನೇ ದಿನದ ಬೆಳವಣಿಗೆಗಳು
l ರಷ್ಯಾ ಮುಗ್ಧ ನಾಗರಿಕರ ಮೇಲೆ ದಾಳಿ ನಡೆಸುತ್ತಿರುವುದನ್ನು ಯುದ್ಧ ಅಪರಾಧಗಳೆಂದು ಪರಿಗಣಿಸಿ ಅಂತರರಾಷ್ಟ್ರೀಯ ನ್ಯಾಯಾಲಯ ತನಿಖೆ ನಡೆಸಬೇಕು ಎಂದು ಬ್ರಿಟನ್ ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್ ಒತ್ತಾಯಿಸಿದ್ದಾರೆ
l ಬುಕಾ ಹತ್ಯಾಕಾಂಡದ ಚಿತ್ರಗಳನ್ನು ನೋಡಿ ಆಘಾತಕ್ಕೆ ಒಳಗಾಗಿದ್ದೇನೆ. ರಷ್ಯಾದ ಮೇಲೆ ಮತ್ತಷ್ಟು ನಿರ್ಬಂಧಗಳನ್ನು ಹೇರುತ್ತೇವೆ. ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ರಷ್ಯಾವನ್ನು ವಿಚಾರಣೆಗೆ ಗುರಿಪಡಿಸಲು ನೆರವು ನೀಡುತ್ತೇವೆ– ಐರೋಪ್ಯ ಪರಿಷತ್ ಅಧ್ಯಕ್ಷ ಚಾರ್ಲ್ಸ್ ಮೈಕೆಲ್
l ಉಕ್ರೇನಿನಲ್ಲಿ ನಡೆಯುತ್ತಿರುವ ವಿಶೇಷ ಸೇನಾ ಕಾರ್ಯಾಚರಣೆ ವಿರೋಧಿಸಿ ರಷ್ಯಾದಲ್ಲಿ ಪ್ರತಿಭಟನೆ ನಡೆಸಿದ 211 ಮಂದಿಯನ್ನು ರಷ್ಯಾ ಪೊಲೀಸರು ಬಂಧಿಸಿದ್ದಾರೆ
l ಉಕ್ರೇನ್ ಸಂಘರ್ಷದಲ್ಲಿ ಭಾರತದ ನಿಲುವು ಸ್ಥಿರತೆ ಮತ್ತು ದೃಢತೆಯಿಂದ ಕೂಡಿದೆ– ತುರ್ಕ್ಮೇನಿಸ್ತಾನದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್
l ರಷ್ಯಾದ ಆಕ್ರಮಣ ಪ್ರಾರಂಭವಾದಾಗಿನಿಂದ ಈವರೆಗೆ ಸುಮಾರು 42 ಲಕ್ಷ ಉಕ್ರೇನಿಗರು ದೇಶ ತೊರೆದಿದ್ದಾರೆ. ಕಳೆದ 24 ಗಂಟೆಗಳಲ್ಲಿ ಸುಮಾರು 40,000 ನಿರಾಶ್ರಿತರು ನೆರೆಹೊರೆಯ ದೇಶಗಳಿಗೆ ವಲಸೆ ಹೋಗಿದ್ದಾರೆ– ವಿಶ್ವಸಂಸ್ಥೆಯ ನಿರಾಶ್ರಿತರ ಏಜೆನ್ಸಿ
l ಉಕ್ರೇನಿನ ಉತ್ತರ ಭಾಗದ ನಗರಗಳನ್ನು ಹಿಮ್ಮೆಟ್ಟುವಾಗ ರಷ್ಯಾ ಸೈನಿಕರು ನೆಲ ಬಾಂಬ್‌ಗಳನ್ನು ಹುದುಗಿಸಿ ಹೋಗಿದ್ದಾರೆ. ಕೀವ್ ಹೊರ ವಲಯದ ನಗರಗಳಲ್ಲಿ ಒಂದೇ ದಿನ 600ಕ್ಕೂ ಹೆಚ್ಚು ಸ್ಫೋಟಕಗಳನ್ನು ಉಕ್ರೇನ್ ಸೇನೆ ಪತ್ತೆ ಹಚ್ಚಿ ನಿಷ್ಕ್ರಿಯಗೊಳಿಸಿದೆ– ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಆರೋಪ
l ರಷ್ಯಾದ ಮೇಲೆ ಹೇರಿರುವ ಪಶ್ಚಿಮದ ರಾಷ್ಟ್ರಗಳ ನಿರ್ಬಂಧದ ಪರಿಣಾಮ ಲಾಟ್ವಿಯ ರಷ್ಯಾದಿಂದ ನೈಸರ್ಗಿಕ ಅನಿಲ ಆಮದು ಮಾಡಿಕೊಳ್ಳುವುದನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಸ್ಥಗಿತಗೊಳಿಸಿದೆ
l ಸೇನಾ ಕಾರ್ಯಾಚರಣೆ ಆರಂಭವಾದ ತಕ್ಷಣ ಪಾಶ್ಚಾತ್ಯ ರಾಷ್ಟ್ರಗಳು ನಿರ್ಬಂಧ ಹೇರುವ ಮುನ್ಸೂಚನೆಯಿಂದ ಅಗತ್ಯ ಔಷಧಗಳನ್ನು ಸಂಗ್ರಹಿಸಿಟ್ಟುಕೊಳ್ಳುವಂತೆ ಮುನ್ನೆಚ್ಚರಿಕೆಯ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಪರಿಣಾಮ ಜನರು ಮುಗಿಬಿದ್ದು ಔಷಧ ಖರೀದಿಸಿಟ್ಟುಕೊಂಡಿದ್ದರಿಂದ ರಷ್ಯಾದಲ್ಲಿ ಈಗ ಔಷಧ ಕೊರತೆ ಉದ್ಭವಿಸಿದೆ
l ಯುದ್ಧಪೀಡಿತ ಮರಿಯುಪೊಲ್ ನಗರದ ಅಪಾಯಕಾರಿ ಸ್ಥಳಗಳಿಂದ ಭಾನುವಾರ ಒಂದೇ ದಿನ 765 ನಾಗರಿಕರನ್ನು ರೆಡ್ ಕ್ರಾಸ್ ನೆರವಿನಲ್ಲಿ ಖಾಸಗಿ ವಾಹನಗಳಲ್ಲಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಯಿತು
l ಐರೋಪ್ಯ ಒಕ್ಕೂಟ, ಅಮೆರಿಕ, ಕೆನಡಾ ಬಾಹ್ಯಾಕಾಶ ಸಂಸ್ಥೆಗಳಿಗೆ ನಿರ್ಬಂಧಗಳನ್ನು ತೆರವುಗೊಳಿಸಲು ನೀಡಿದ್ದ ಗಡುವು ಮುಗಿದಿರುವುದರಿಂದ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಅತಂತ್ರ ಸ್ಥಿತಿಗೆ ತಲುಪಿದೆ–ರಷ್ಯಾ ಬಾಹ್ಯಾಕಾಶ ಯೋಜನೆಯ ಮುಖ್ಯಸ್ಥರ ಹೇಳಿಕೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.