ADVERTISEMENT

ಉಕ್ರೇನ್‌ನ ಖೆರ್ಸನ್‌ ನಗರ ವಶಪಡಿಸಿಕೊಂಡ ರಷ್ಯಾ ಪಡೆ

ಏಜೆನ್ಸೀಸ್
Published 3 ಮಾರ್ಚ್ 2022, 6:17 IST
Last Updated 3 ಮಾರ್ಚ್ 2022, 6:17 IST
ರಷ್ಯಾ ಪಡೆಗಳ ಆಕ್ರಮಣಕ್ಕೆ ತುತ್ತಾದ ಖೆರ್ಸನ್‌ ಪಟ್ಟಣ (ಚಿತ್ರ: ಎಎಫ್‌ಪಿ)
ರಷ್ಯಾ ಪಡೆಗಳ ಆಕ್ರಮಣಕ್ಕೆ ತುತ್ತಾದ ಖೆರ್ಸನ್‌ ಪಟ್ಟಣ (ಚಿತ್ರ: ಎಎಫ್‌ಪಿ)   

ಕೀವ್‌: ಉಕ್ರೇನ್‌ನ ದೊಡ್ಡ ನಗರಗಳಲ್ಲಿ ಒಂದಾದ ಖೆರ್ಸನ್‌ಅನ್ನು ರಷ್ಯಾ ಪಡೆ ವಶಪಡಿಸಿಕೊಂಡಿದೆ. ರಷ್ಯಾ ಪಡೆ ಉಕ್ರೇನ್‌ ಮೇಲೆ ಆಕ್ರಮಣ ನಡೆಸಲು ಆರಂಭಿಸಿ ವಾರವಾಗಿದ್ದು, ವಶಕ್ಕೆ ಪಡೆದ ಮೊದಲ ನಗರ ಇದಾಗಿದೆ. ಖೆರ್ಸನ್‌ ನಗರವನ್ನು ರಷ್ಯಾ ವಶಕ್ಕೆ ಪಡೆದಿರುವ ಬಗ್ಗೆ ಸ್ಥಳೀಯ ಅಧಿಕಾರಿಗಳು ದೃಢಪಡಿಸಿದ್ದಾರೆ.

'ನಗರದ ಎಲ್ಲ ಭಾಗಗಳ ಸುತ್ತಲೂ ರಷ್ಯಾ ಸುತ್ತುವರಿದಿದ್ದು, ಭಾರಿ ಅಪಾಯಕಾರಿ ಸ್ಥಿತಿ ಇದೆ' ಎಂದು ಸ್ಥಳೀಯ ಆಡಳಿತದ ಮುಖ್ಯಸ್ಥ ಗೆನ್ನೆಡಿ ಲಖುತ ಬುಧವಾರ ರಾತ್ರಿ ಟೆಲಿಗ್ರಾಮ್‌ನಲ್ಲಿ ಸಂದೇಶ ರವಾನಿಸಿದ್ದಾರೆ.

ಕಪ್ಪು ಸಮುದ್ರದ ಪ್ರಮುಖ ಬಂದರು ನಗರವಾಗಿರುವ ಖೆರ್ಸನ್‌ನ ಮೇಯರ್‌ ಇಗೊರ್‌ ಕೊಲೈಖೈವ್‌ ಅವರು ರಷ್ಯಾ ಪಡೆಯ ಜೊತೆ ಮಾತುಕತೆ ನಡೆಸಿದ್ದಾರೆ ಎಂದು ಸುದ್ದಿ ಸಂಸ್ಥೆ 'ಎಎಫ್‌ಪಿ' ವರದಿ ಮಾಡಿದೆ.

ADVERTISEMENT

'ನಮ್ಮ ಬಳಿ ಆಯುಧಗಳಿಲ್ಲ ಮತ್ತು ನಾವು ಆಕ್ರಮಣಕಾರಿಗಳಲ್ಲ. ನಗರವನ್ನು ರಕ್ಷಿಸುವ ಉದ್ದೇಶದಿಂದ ಕೆಲಸ ಮಾಡುತ್ತಿದ್ದೇವೆ. ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದ್ದೇವೆ' ಎಂದು ಇಗೊರ್‌ ಕೊಲೈಖೈವ್‌ ಫೇಸ್ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

'ಅತ್ಯಂತ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದ್ದೇವೆ. ಮೃತದೇಹಗಳನ್ನು ಹೂಳುವುದು, ಆಹಾರ ಮತ್ತು ಔಷಧಿಗಳನ್ನು ಪೂರೈಸುವುದು ಮತ್ತು ತ್ಯಾಜ್ಯ ನಿರ್ವಹಣೆ, ಅಪಘಾತಗಳ ನಿರ್ವಹಣೆ ಹೀಗೆ ಹಲವು ಸಮಸ್ಯೆಗಳನ್ನು ಬಗೆಹರಿಸುವುದು ಕಷ್ಟವಾಗಿದೆ' ಎಂದು ಕೊಲೈಖೈವ್‌ ಹೇಳಿದ್ದಾರೆ.

'ಆಕ್ರಮಣಕಾರಿಗಳಿಗೆ ಯಾವುದೇ ಭರವಸೆಯನ್ನು ಕೊಟ್ಟಿಲ್ಲ. ಆದರೆ ಜನರನ್ನು ಗುಂಡಿಕ್ಕಿ ಸಾಯಿಸದಂತೆ ವಿನಂತಿಸಿಕೊಂಡಿದ್ದೇವೆ. ನಗರದಲ್ಲಿ ರಾತ್ರಿ ಕರ್ಫ್ಯೂ ಜಾರಿ ಮಾಡಲಾಗಿದೆ. ವಾಹನ ಸಂಚಾರದ ಮೇಲೆ ನಿರ್ಬಂಧಗಳನ್ನು ಹೇರಲಾಗಿದೆ. ನಮ್ಮ ನೆತ್ತಿಯ ಮೇಲೆ ಉಕ್ರೇನ್‌ನ ಬಾವುಟ ಹಾರಾಡುತ್ತಿದೆ.ಪರಿಸ್ಥಿತಿಹೀಗೆಯೇ ಮುಂದುವರಿಯಲು ಇಂತಹ ಕೆಲವು ಮಾರ್ಪಾಡುಗಳನ್ನು ಮಾಡಿಕೊಳ್ಳಲಾಗಿದೆ' ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.