ಕೀವ್: ಉಕ್ರೇನ್ ರಾಜಧಾನಿ ಕೀವ್ ಮೇಲೆ ರಷ್ಯಾ ರಾಕೆಟ್ ದಾಳಿ ನಡೆಸಿದ್ದು, 10 ಮಂದಿ ಗಾಯಗೊಂಡಿದ್ದಾರೆ. ವಿಶ್ವಸಂಸ್ಥೆ ಮಹಾಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರೆಸ್ ಭೇಟಿ ಸಂದರ್ಭದಲ್ಲೇ ಈ ದಾಳಿ ನಡೆದಿದೆ.
ಕೀವ್ ನಗರದ ಪಶ್ಚಿಮ ಭಾಗದ ವಸತಿ ಪ್ರದೇಶದ ಮೇಲೆ ದಾಳಿ ನಡೆದಿದೆ. ತುರ್ತು ಸೇವೆ ವಾಹನಗಳು ಸ್ಥಳಕ್ಕೆ ದೌಡಾಯಿಸಿವೆ. ದಾಳಿಯು ಅಂಟೋನಿಯೊ ಗುಟೆರೆಸ್ ಹಾಗೂ ತಂಡವನ್ನು ಆಘಾತಕ್ಕೀಡು ಮಾಡಿದೆ.
25 ಮಹಡಿಯ ವಸತಿ ಕಟ್ಟಡದ ಮೇಲೆ ದಾಳಿ ನಡೆದಿದ್ದು, ಎರಡು ಮಹಡಿಗಳಿಗೆ ಭಾಗಶಃ ಹಾನಿಯಾಗಿದೆ. ಕಟ್ಟಡಕ್ಕೆ ಬೆಂಕಿ ಹೊತ್ತಿಕೊಂಡಿದ್ದು, ಭಾರಿ ಹೊಗೆ ಆವರಿಸಿಕೊಂಡಿದೆ. ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ.
ಅಂಟೋನಿಯೊ ಗುಟೆರೆಸ್ ಹಾಗೂ ತಂಡದ ಸದಸ್ಯರು ಸುರಕ್ಷಿತವಾಗಿದ್ದಾರೆ ಎಂದು ವಿಶ್ವಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.
‘ಅದು ಯುದ್ಧಪೀಡಿತ ಪ್ರದೇಶವೆಂಬುದು ನಿಜ. ಆದರೆ ನಮ್ಮ ತಂಡ ಇರುವ ಪ್ರದೇಶದ ಸಮೀಪದಲ್ಲೇ ದಾಳಿ ನಡೆದಿರುವುದು ಆಘಾತ ತಂದಿದೆ’ ಎಂದು ವಕ್ತಾರರು ಹೇಳಿದ್ದಾರೆ.
ಗುಟೆರೆಸ್ ಮತ್ತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಸ್ಥಳದಿಂದ ಕೇವಲ 3.5 ಕಿಲೋ ಮೀಟರ್ ದೂರದಲ್ಲಿ ದಾಳಿ ನಡೆದಿದೆ.
‘ನಮ್ಮ ಮಾತುಕತೆ ಮುಕ್ತಾಯವಾದ ತಕ್ಷಣವೇ ರಷ್ಯಾದ ಐದು ರಾಕೆಟ್‌ಗಳು ನಮ್ಮ ನಗರದ ಮೇಲೆ ಕ್ಷಿಪಣಿ ದಾಳಿ ನಡೆಸಿವೆ’ ಎಂದು ಝೆಲೆನ್‌ಸ್ಕಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.