ಬಖ್‌ಮಾಖ್, ಉಕ್ರೇನ್: ರಷ್ಯಾ ಉಕ್ರೇನ್ ಯುದ್ಧದ ಸಂದರ್ಭ ಉಕ್ರೇನ್‌ನ ಬಖ್‌ಮಾಖ್ ನಗರದಲ್ಲಿ ವ್ಯಕ್ತಿಯೊಬ್ಬರು ಬರಿಗೈನಲ್ಲೇ ರಷ್ಯಾದ ಯುದ್ಧ ಟ್ಯಾಂಕರ್‌ಅನ್ನು ಮುಂದೆ ಚಲಿಸದಂತೆ ತಡೆದು ನಿಲ್ಲಿಸುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಉಕ್ರೇನ್‌ನ ವಿದೇಶಾಂಗ ಸಚಿವಾಲಯವು ಈ ವಿಡಿಯೊವನ್ನು ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದೆ.
ಬೃಹತ್ ಯುದ್ಧ ಟ್ಯಾಂಕ್‌ಅನ್ನು ಮುಂದಕ್ಕೆ ಚಲಿಸದಂತೆ ಬರಿಗೈನಲ್ಲೇ ದೂಡಿ ಪ್ರತಿರೋಧ ಒಡ್ಡುತ್ತಿರುವ ದೃಶ್ಯ ವಿಡಿಯೊದಲ್ಲಿದೆ. ಕ್ರಮೇಣ ಟ್ಯಾಂಕ್‌ನ ವೇಗ ಕಡಿಮೆಯಾಗಿ ನಿಲ್ಲುತ್ತದೆ. ನಂತರ ಸ್ಥಳೀಯ ವ್ಯಕ್ತಿಯು ಟ್ಯಾಂಕ್ ಮುಂದೆ ಮಂಡಿಯೂರಿ ಕೂರುತ್ತಾರೆ. ತಕ್ಷಣ ಅಲ್ಲಿಗೆ ಆಗಮಿಸಿದ ಇತರ ಸ್ಥಳೀಯರು ಅವರನ್ನು ಅಲ್ಲಿಂದ ಕರೆದೊಯ್ದಿದ್ದಾರೆ. ಉಕ್ರೇನ್ ನಾಗರಿಕರ ದೇಶಭಕ್ತಿಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಪ್ರಶಂಸೆ ವ್ಯಕ್ತವಾಗಿದೆ.
ರಷ್ಯಾದ ಯುದ್ಧ ಟ್ಯಾಂಕ್ ಬಖ್‌ಮಾಖ್ ನಗರದಲ್ಲಿ ಹಾದುಹೋಗುವಾಗ ಶನಿವಾರ ಈ ಘಟನೆ ಸಂಭವಿಸಿದೆ ಎಂದು ವರದಿಗಳು ಹೇಳಿವೆ.
'ಉಕ್ರೇನ್ ಸರ್ಕಾರವು ಉಕ್ರೇನ್ ನಾಗರಿಕರನ್ನು ಸೆರೆಯಲ್ಲಿ ಇರಿಸಿಕೊಂಡಿದೆ ಎಂದು ರಷ್ಯಾ ಹಲವು ವರ್ಷಗಳಿಂದ ಸುಳ್ಳು ಹೇಳುತ್ತಲೇ ಬಂದಿದೆ. ಉಕ್ರೇನ್‌ನ ನಾಗರಿಕರು ಸ್ವತಂತ್ರರು ಮತ್ತು ಅಗತ್ಯ ಬಿದ್ದಲ್ಲಿ ರಷ್ಯಾದ ಟ್ಯಾಂಕ್‌ಗಳನ್ನು ಬರಿಗೈನಲ್ಲೇ ತಡೆದು ನಿಲ್ಲಿಸಬಲ್ಲರು.' ಎಂದು ಉಕ್ರೇನ್ ವಿದೇಶಾಂಗ ಸಚಿವಾಲಯ ವಿಡಿಯೊ ಪೋಸ್ಟ್‌ನಲ್ಲಿ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.