ಕೀವ್ : ಉಕ್ರೇನ್ ಮೇಲೆ ರಷ್ಯಾವು ಸೋಮವಾರ ಭೀಕರ ಡ್ರೋನ್ ಮತ್ತು ಕ್ಷಿಪಣಿ ದಾಳಿ ನಡೆಸಿದ್ದು, ಮೂವರು ಮೃತಪಟ್ಟಿದ್ದಾರೆ.
ಮಧ್ಯರಾತ್ರಿ ಆರಂಭವಾದ ದಾಳಿಯು ಬೆಳಿಗ್ಗೆವರೆಗೂ ಮುಂದುವರಿದಿದ್ದು, ಉಕ್ರೇನ್ ಮೇಲೆ ರಷ್ಯಾ ಇತ್ತೀಚೆಗೆ ನಡೆಸಿದ ಬೃಹತ್ ದಾಳಿ ಇದಾಗಿದೆ.
‘ರಷ್ಯಾ ಡ್ರೋನ್‌ಗಳ ಹಲವು ಗುಂಪುಗಳು ಉಕ್ರೇನ್‌ನ ಪೂರ್ವ, ಉತ್ತರ ಮತ್ತು ಕೇಂದ್ರ ಭಾಗಗಳ ಮೇಲೆ ನುಗ್ಗಿಬಂದಿದ್ದವು’ ಎಂದು ಉಕ್ರೇನ್ ವಾಯುಪಡೆ ತಿಳಿಸಿದೆ.
‘ರಾಜಧಾನಿಯಲ್ಲಿ ಸ್ಫೋಟದ ಸದ್ದು ಕೇಳಿಸಿತ್ತು. ನಗರದ ಇಂಧನ ಮೂಲಸೌಕರ್ಯ ವ್ಯವಸ್ಥೆ ಹಾನಿಗೊಂಡಿದೆ’ ಎಂದು ಕೀವ್ ಮೇಯರ್ ವಿಟಲಿ ಕ್ಲಿಟ್‌ಸ್ಕೊ ಅವರು ತಿಳಿಸಿದ್ದಾರೆ.
ರಷ್ಯಾ ದಾಳಿಯಿಂದಾಗಿ ವಿವಿಧ ಭಾಗಗಳಲ್ಲಿ ಕಟ್ಟಡಗಳಿಗೆ ಹಾನಿಯಾಗಿದೆ. ಹಲವರು ಗಾಯಗೊಂಡಿದ್ದಾರೆ. ಜನರು ತಮ್ಮ ಎಲೆಕ್ಟ್ರಾನಿಕ್ ಉಪಕರಣಗಳನ್ನು ಚಾರ್ಜ್ ಮಾಡಿಕೊಳ್ಳಲು ಪರ್ಯಾಯ ವ್ಯವಸ್ಥೆಗಳನ್ನು ನೀಡಲಾಗುತ್ತದೆ’ ಎಂದು ಉಕ್ರೇನ್‌ನ ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ಉಕ್ರೇನ್‌ನಿಂದ ದಾಳಿ: ‘ಭಾನುವಾರ ತಡರಾತ್ರಿ ಮತ್ತು ಸೋಮವಾರ ಮುಂಜಾನೆ ಉಕ್ರೇನ್ ಡ್ರೋನ್‌ಗಳು ರಷ್ಯಾದ ಮೇಲೆ ದಾಳಿ ನಡೆಸಿದ್ದಾವೆ. ವಸತಿ ಕಟ್ಟಡಗಳಿಗೆ ಡ್ರೋನ್ ಅಪ್ಪಳಿಸಿದ ಪರಿಣಾಮ ನಾಲ್ವರು ಗಾಯಗೊಂಡಿದ್ದಾರೆ’ ಎಂದು ರಷ್ಯಾದ ಅಧಿಕಾರಿಗಳು ತಿಳಿಸಿದ್ದಾರೆ.
‘ಸರಟೋವಾ ಮತ್ತು ಯರೊಸ್ಲಾವಲ್ ಸೇರಿದಂತೆ ರಷ್ಯಾದ 8 ಪ್ರದೇಶಗಳ ಮೇಲೆ ಉಕ್ರೇನ್‌ನ 22 ಡ್ರೋನ್‌ಗಳು ದಾಳಿ ನಡೆಸಿದ್ದವು’ ಎಂದು ರಷ್ಯಾ ಸೇನಾ ಪಡೆ ತಿಳಿಸಿದೆ.
ಉಕ್ರೇನ್ ಮೇಲಿನ ದಾಳಿಯಿಂದ ಎಚ್ಚೆತ್ತುಕೊಂಡಿರುವ ಪೋಲೆಂಡ್, ದೇಶದ ಪೂರ್ವ ಭಾಗದಲ್ಲಿ ಪೋಲಿಶ್ ಮತ್ತು ನ್ಯಾಟೊ ವಾಯುಪಡೆಗಳಿಂದ ಭದ್ರತೆಯನ್ನು ಹೆಚ್ಚಿಸಿದೆ.
ರಷ್ಯಾ ದಾಳಿಯನ್ನು ಖಂಡಿಸಿರುವ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರು ‘ಇದು ಹೇಯ ಕೃತ್ಯ’ ಎಂದು ವಾಗ್ದಾಳಿ ನಡೆಸಿದ್ದಾರೆ. ‘ನೂರಕ್ಕೂ ಹೆಚ್ಚು ಕ್ಷಿಪಣಿಗಳು ಮತ್ತು ನೂರು ಶಹೇದ್ ಡ್ರೋನ್‌ಗಳು ಉಕ್ರೇನ್ ಮೇಲೆ ದಾಳಿ ನಡೆಸಿದ್ದು ಇಂಧನ ಮೂಲಸೌಕರ್ಯ ವ್ಯವಸ್ಥೆಯು ತೀವ್ರವಾಗಿ ಹಾನಿಗೊಂಡಿದೆ’ ಎಂದು ತಿಳಿಸಿದ್ದಾರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.