ADVERTISEMENT

ರಷ್ಯಾ ಆಕ್ರಮಣ: ಜೆಕ್‌ ಗಣರಾಜ್ಯದಿಂದ ಉಕ್ರೇನ್‌ಗೆ ಹೆಚ್ಚುವರಿ ಮಿಲಿಟರಿ ಸಹಾಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಫೆಬ್ರುವರಿ 2022, 13:25 IST
Last Updated 27 ಫೆಬ್ರುವರಿ 2022, 13:25 IST
ಪುಟಿನ್‌ ವಿರುದ್ಧ ಪ್ರಾಗ್‌ನಲ್ಲಿ ನಡೆದ ಪ್ರತಿಭಟನೆ
ಪುಟಿನ್‌ ವಿರುದ್ಧ ಪ್ರಾಗ್‌ನಲ್ಲಿ ನಡೆದ ಪ್ರತಿಭಟನೆ   

ಪ್ರಾಗ್‌: ಯುದ್ಧ ಪೀಡಿತ ಉಕ್ರೇನ್‌ಗೆ ₹136 ಕೋಟಿಗೂ ಅಧಿಕ ಬೆಲೆಯುಳ್ಳ ಹೆಚ್ಚುವರಿ ಶಸ್ತ್ರಾಸ್ತ್ರಗಳ ನೆರವನ್ನು ನೀಡಲಿದ್ದೇವೆ ಎಂದು ಜೆಕ್‌ ಗಣರಾಜ್ಯದ ರಕ್ಷಣಾ ಸಚಿವ ಜನಾ ಸೆರ್ನೊಚೋವಾ ತಿಳಿಸಿದ್ದಾರೆ.

ಮೆಷಿನ್ ಗನ್‌ಗಳು, ಅಸಾಲ್ಟ್ ರೈಫಲ್‌ಗಳು ಮತ್ತು ಇತರ ಲಘು ಶಸ್ತ್ರಾಸ್ತ್ರಗಳನ್ನು ಉಕ್ರೇನ್‌ಗೆ ನೀಡಲು ಜೆಕ್‌ ಗಣರಾಜ್ಯದ ಸರ್ಕಾರ ಈಗಾಗಲೇ ಅನುಮೋದನೆ ನೀಡಿದೆ.

ಪುಟಿನ್‌ ನಡೆಯನ್ನು ವಿರೋಧಿಸಿರುವ ಜೆಕ್‌ ಗಣರಾಜ್ಯ, ರಷ್ಯಾದ ವಿಮಾನಗಳಿಗೂ ನಿರ್ಬಂಧ ಹೇರಿದೆ.

ADVERTISEMENT

ಈ ವರ್ಷ ನಡೆಯಲಿರುವ ವಿಶ್ವಕಪ್‌ ಫುಟ್‌ಬಾಲ್ ಟೂರ್ನಿಯ ಪ್ಲೇ ಆಫ್ ಹಂತದ ಪಂದ್ಯದಲ್ಲಿ ರಷ್ಯಾ ವಿರುದ್ಧ ಸೆಣಸುವ ಪರಿಸ್ಥಿತಿ ನಿರ್ಮಾಣವಾದರೆ ಆಡುವುದಿಲ್ಲ ಎಂದು ಜೆಕ್ ಗಣರಾಜ್ಯದ ಫುಟ್‌ಬಾಲ್ ಸಂಸ್ಥೆ ಭಾನುವಾರ ಸ್ಪಷ್ಟಪಡಿಸಿದೆ.

ಜೆಕ್‌, ಜರ್ಮನಿ ಹಾಗೂ ಇಂಗ್ಲೆಂಡ್‌ ಸೇರಿದಂತೆ ಇತರ ರಾಷ್ಟ್ರಗಳೂ ಉಕ್ರೇನ್‌ ಸಹಾಯಕ್ಕೆ ಧಾವಿಸಿವೆ. ಪೋಲೆಂಡ್‌, ಹಂಗೇರಿ, ಸ್ಲೊವಾಕಿಯಾ ಹಾಗೂ ರೊಮೇನಿಯಾ ದೇಶಗಳು ಉಕ್ರೇನ್‌ ನಿರಾಶ್ರಿತರಿಗೆ ಆಶ್ರಯ ಕಲ್ಪಿಸಲು ಮತ್ತು ಅಗತ್ಯ ಆರೋಗ್ಯ ಸೇವೆ ಒದಗಿಸಲು ವ್ಯವಸ್ಥೆ ಮಾಡಿಕೊಂಡಿವೆ. ಬಲ್ಗೇರಿಯಾ ಮತ್ತು ಹಂಗೇರಿ ಕೂಡ ತಮ್ಮ ಗಡಿಗಳನ್ನು ಉಕ್ರೇನ್‌ ನಿರಾಶ್ರಿತರಿಗೆ ತೆರೆದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.