ಉಕ್ರೇನ್‌ಗೆ ಹೆಚ್ಚಿನ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಕಳುಹಿಸುತ್ತಿರುವುದರ ವಿರುದ್ಧ ಕಿಡಿಕಾರಿರುವ ರಷ್ಯಾ, ಅಮೆರಿಕಕ್ಕೆ ಎಚ್ಚರಿಕೆ ನೀಡಿದೆ ಎಂದು ವಾಷಿಂಗ್ಟನ್‌ನಲ್ಲಿರುವ ರಷ್ಯಾದ ರಾಯಭಾರಿ ರಷ್ಯಾದ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.
'ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕವು ಉಕ್ರೇನ್‌ಗೆ ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡುತ್ತಿರುವುದನ್ನು ನಾವು ಒಪ್ಪಿಕೊಳ್ಳುವುದಿಲ್ಲ ಎಂಬುದನ್ನು ಒತ್ತಿಹೇಳಿದ್ದೇವೆ ಮತ್ತು ಈ ಅಭ್ಯಾಸವನ್ನು ಕೊನೆಗೊಳಿಸಬೇಕೆಂದು ನಾವು ಒತ್ತಾಯಿಸಿದ್ದೇವೆ' ಎಂದು ಅನಾಟೊಲಿ ಆಂಟೊನೊವ್ ಅವರು ರೊಸ್ಸಿಯಾ 24 ಟಿವಿ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಉಕ್ರೇನ್‌ಗೆ ಶಸ್ತ್ರಾಸ್ತ್ರಗಳನ್ನು ಕಳುಹಿಸುವ ಕುರಿತು ರಷ್ಯಾದ ಕಳವಳವನ್ನು ವ್ಯಕ್ತಪಡಿಸುವ ಅಧಿಕೃತ ರಾಜತಾಂತ್ರಿಕ ಪತ್ರವನ್ನು ವಾಷಿಂಗ್ಟನ್‌ಗೆ ಕಳುಹಿಸಲಾಗಿದೆ ಎಂದು ಆಂಟೊನೊವ್ ತಿಳಿಸಿದ್ದಾರೆ.
ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಅವರು ಭಾನುವಾರ ತಡರಾತ್ರಿ ಕೀವ್‌ನಲ್ಲಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರನ್ನು ಭೇಟಿಯಾದರು. ರಷ್ಯಾದ ಆಕ್ರಮಣಕ್ಕೆ ಒಳಗಾಗಿರುವ ಉಕ್ರೇನ್ ಮತ್ತು ಅದರ ಸುತ್ತಮುತ್ತಲಿನ ಇತರ ದೇಶಗಳಿಗೆ 713 ಮಿಲಿಯನ್ ಡಾಲರ್ ಮೌಲ್ಯದ ನೆರವನ್ನು ನೀಡುವ ವಾಗ್ದಾನ ಮಾಡಿದರು.
ಇದಕ್ಕೂ ಮುನ್ನ ಏಪ್ರಿಲ್‌ನಲ್ಲಿ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರು ಉಕ್ರೇನ್‌ಗೆ ಹೆಚ್ಚುವರಿ 800 ಮಿಲಿಯನ್ ಡಾಲರ್ ಮಿಲಿಟರಿ ಸಹಾಯವನ್ನು ಘೋಷಿಸಿದ್ದರು.
ಕೀವ್‌ಗೆ ದೊಡ್ಡ ಶಸ್ತ್ರಾಸ್ತ್ರಗಳು ಮತ್ತು ಸಲಕರಣೆಗಳನ್ನು ಪೂರೈಸಲು ಝೆಲೆನ್‌ಸ್ಕಿ ಅಮೆರಿಕ ಮತ್ತು ಯುರೋಪಿಯನ್ ನಾಯಕರಲ್ಲಿ ಮನವಿ ಮಾಡುತ್ತಿದ್ದಾರೆ. ಫೆಬ್ರುವರಿ 24 ರಂದು ರಷ್ಯಾ ತನ್ನ ನೆರೆಯ ರಾಷ್ಟ್ರವನ್ನು 'ಸೈನ್ಯ ಮುಕ್ತಗೊಳಿಸಲು' 'ವಿಶೇಷ ಸೇನಾ ಕಾರ್ಯಾಚರಣೆ'ಯನ್ನು ಕೈಗೊಳ್ಳುವ ಮೂಲಕ ಉಕ್ರೇನ್‌ಗೆ ಸೇನೆಯನ್ನು ಕಳುಹಿಸಿದೆ. ಅಂದಿನಿಂದ ಸಾವಿರಾರು ಜನರು ಸಾವಿಗೀಡಾಗಿದ್ದಾರೆ ಮತ್ತು ಲಕ್ಷಾಂತರ ಜನರು ಇತರೆ ದೇಶಗಳಿಗೆ ಪಲಾಯನ ಮಾಡಿದ್ದಾರೆ.
ರಷ್ಯಾ ಫೆ. 24 ರಂದು ಉಕ್ರೇನ್ ಮೇಲೆ ಆಕ್ರಮಣ ಶುರುಮಾಡಿದ್ದು, ಅಮೆರಿಕ ಸೇರಿದಂತೆ ಹಲವು ಪಾಶ್ಚಿಮಾತ್ಯ ದೇಶಗಳು ರಷ್ಯಾ ಮೇಲೆ ಕಠಿಣ ನಿರ್ಬಂಧ ವಿಧಿಸಿವೆ. ಇದು ವಿಶ್ವದ ಎರಡು ದೊಡ್ಡ ಪರಮಾಣು ಶಕ್ತಿಯನ್ನು ಹೊಂದಿರುವ ರಷ್ಯಾ ಮತ್ತು ಅಮೆರಿಕ ಮುಖಾಮುಖಿಯ ವ್ಯಾಪಕ ಭಯವನ್ನು ಹುಟ್ಟುಹಾಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.