ಸೇಂಟ್‌ಪೀಟರ್ಸ್‌ಬರ್ಗ್: ಉಕ್ರೇನ್ ಮೇಲೆ ಯುದ್ಧ ಸಾರಿ ಭಾಗಶಃ ಕೈಸುಟ್ಟುಕೊಂಡಿರುವ ರಷ್ಯಾ ಹೇಗಾದರೂ ಮಾಡಿ ಉಕ್ರೇನ್ ಅನ್ನು ಮಣಿಸಲೇಬೇಕು ಎಂದು ಇನ್ನೂ ಹೋರಾಡುತ್ತಲೇ ಇದೆ.
ಇದೀಗ ಉಕ್ರೇನ್ ವಿರುದ್ಧ ಖಾಯಂ ಸೇನೆಯೊಂದಿಗೆ ಹೋರಾಡಲು ರಷ್ಯಾ, ಕಳೆದ ಆರು ತಿಂಗಳ ಹಿಂದೆ ಕೂಲಿ ಆಧಾರದ ಮೇಲೆ ತಾತ್ಕಾಲಿಕ ಸೇನಾಪಡೆಯನ್ನು ರಚಿಸಿದೆ. ಅದಕ್ಕೆ ‘ಪಿಎಂಸಿ ವ್ಯಾಗನರ್ ಗ್ರೂಪ್’ ಎಂದು ಹೆಸರಿಟ್ಟಿದೆ.
ಇದೀಗ ಹೊಸ ಬೆಳವಣಿಗೆ ಏನೆಂದರೆ ಈ ವ್ಯಾಗನರ್ ಗ್ರೂಪ್‌ಗೆ ಕೆಲಸ ಮಾಡಲು ‘ಬೇಕಾಗಿದ್ದಾರೆ’ ಜಾಹೀರಾತನ್ನು ಅಶ್ಲೀಲ ವಿಡಿಯೊಗಳ ತಾಣವಾದ ಪೋರ್ನ್‌ಹಬ್ ವೆಬ್‌ಸೈಟ್‌ನಲ್ಲಿ ಪ್ರಸಾರ ಮಾಡಲಾಗುತ್ತಿದೆ. ಈ ಮೂಲಕ ರಷ್ಯಾದ ತಾತ್ಕಾಲಿಕ ಸೇನಾಪಡೆಗೆ ಯೋಧರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಈ ಕುರಿತು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.
30 ಸೆಕೆಂಡ್ ಹಾಗೂ 1 ನಿಮಿಷದ ವಿಡಿಯೊ ತುಣುಕುಗಳಲ್ಲಿ ಯುವತಿಯೊಬ್ಬಳು ‘ನಾವು ಜಗತ್ತಿನಲ್ಲಿ ಅತಿ ದೊಡ್ಡ ಕೂಲಿ ಆಧಾರಿತ ಸೇನಾಪಡೆಯನ್ನು ನಡೆಸುತ್ತಿದ್ದೇವೆ. ರಷ್ಯಾದ ಎಲ್ಲ ಭಾಗದಿಂದ ನಾವು ಹೋರಾಟಗಾರರನ್ನು ನೇಮಕ ಮಾಡಿಕೊಳ್ಳುತ್ತಿದ್ದೇವೆ. ಹಿಂಜರಿಯಬೇಡಿ, ಬನ್ನಿ’ ಎಂದು ಜಾಹೀರಾತು ಹಾಕಿದ್ದಾರೆ.
ಈ ಪಿಎಂಸಿ ವ್ಯಾಗನರ್ ಗ್ರೂಪ್‌ಗೆ ಅನ್ನು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಸೇನಾ ಆಪ್ತನಾಗಿದ್ದ ಯೆವಜನ್ಸಿ ಪ್ರಿಗೋಜಿನ್ ಅವರು ರಚಿಸಿದ್ದರು. ಸದ್ಯ ಉಕ್ರೇನ್ ಯುದ್ಧದ ಬಗ್ಗೆ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುತ್ತಿದ್ದರು ಎಂಬ ಆರೋಪದ ಮೇಲೆ ಯೆವಜನ್ಸಿ ಅವರನ್ನು ಪುಟಿನ್ ವಜಾ ಮಾಡಿದ್ದಾರೆ.
ಐಸಿಸಿಯಿಂದ ಪುಟಿನ್‌ಗೆ ವಾರಂಟ್!
ಉಕ್ರೇನ್‌ನ ಮಕ್ಕಳ ಅಪಹರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಯುದ್ಧ ಅಪರಾಧಗಳಿಗಾಗಿ ರಷ್ಯಾದ ಅಧ್ಯಕ್ಷ ಪುಟಿನ್ ವಿರುದ್ಧ ಬಂಧನ ವಾರಂಟ್ ಜಾರಿಗೊಳಿಸಿರುವುದಾಗಿ ಅಂತರರಾಷ್ಟ್ರೀಯ ಅಪರಾಧ ನ್ಯಾಯಾಲಯ(ಐಸಿಸಿ) ಶುಕ್ರವಾರ ತಿಳಿಸಿದೆ.
‘ಮಕ್ಕಳನ್ನು ಕಾನೂನುಬಾಹಿರವಾಗಿ ಗಡೀಪಾರು ಮಾಡುವ ಯುದ್ಧ ಅಪರಾಧ ಮತ್ತು ಉಕ್ರೇನ್‌ನ ಆಕ್ರಮಿತ ಪ್ರದೇಶಗಳಿಂದ ರಷ್ಯಾದ ಒಕ್ಕೂಟಕ್ಕೆ ಕಾನೂನುಬಾಹಿರವಾಗಿ ಉಕ್ರೇನ್‌ನ ಮಕ್ಕಳನ್ನು ಸಾಗಿಸುವ ಯುದ್ಧ ಅಪರಾಧಕ್ಕೆ ಪುಟಿನ್ ಜವಾಬ್ದಾರರಾಗಿದ್ದಾರೆ’ ಎಂದು ನ್ಯಾಯಾಲಯವು ಹೇಳಿಕೆಯಲ್ಲಿ ತಿಳಿಸಿದೆ.
ರಷ್ಯಾ ಒಕ್ಕೂಟದ ಅಧ್ಯಕ್ಷರ ಕಚೇರಿಯಲ್ಲಿ ಮಕ್ಕಳ ಹಕ್ಕುಗಳ ಆಯುಕ್ತರಾದ ಮಾರಿಯಾ ಅಲೆಕ್ಸೆಯೆವ್ನಾ ಎಲ್ವೊವಾ-ಬೆಲೋವಾ ಅವರನ್ನು ಇದೇ ಆರೋಪದಡಿ ಬಂಧಿಸಲು ಶುಕ್ರವಾರ ವಾರಂಟ್ ಹೊರಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.