ADVERTISEMENT

ರಷ್ಯಾ ಉದ್ಯಮಿ, ಉಕ್ರೇನ್ ಸಂಧಾನಕಾರರಿಗೆ ವಿಷ ಪ್ರಾಶನದ ಶಂಕೆ: ವರದಿ

ರಾಯಿಟರ್ಸ್
Published 29 ಮಾರ್ಚ್ 2022, 4:59 IST
Last Updated 29 ಮಾರ್ಚ್ 2022, 4:59 IST
ವ್ಲಾಡಿಮಿರ್ ಪುಟಿನ್- ವೊಲೊಡಿಮಿರ್ ಝೆಲೆನ್‌ಸ್ಕಿ
ವ್ಲಾಡಿಮಿರ್ ಪುಟಿನ್- ವೊಲೊಡಿಮಿರ್ ಝೆಲೆನ್‌ಸ್ಕಿ   

ರಷ್ಯಾ ಉದ್ಯಮಿ ರೋಮನ್ ಅಬ್ರಮೊವಿಚ್ ಮತ್ತು ಉಕ್ರೇನ್ ಶಾಂತಿ ಸಂಧಾನಕಾರರಿಗೆ ವಿಷ ಪ್ರಾಶನವಾಗಿರುವ ಶಂಕೆ ವ್ಯಕ್ತವಾಗಿದೆ. ಉಕ್ರೇನ್‌ ರಾಜಧಾನಿ ಕೀವ್‌ನಲ್ಲಿ ಈ ತಿಂಗಳ ಆರಂಭದಲ್ಲಿ ನಡೆದ ಸಭೆ ಬಳಿಕ ಅವರಲ್ಲಿ ವಿಷ ಪ್ರಾಶನದ ಲಕ್ಷಣಗಳು ಗೋಚರಿಸಿವೆ ಎಂದು 'ದಿ ವಾಲ್‌ ಸ್ಟ್ರೀಟ್‌ ಜರ್ನಲ್‌' (ಡಬ್ಲುಎಸ್‌ಜೆ) ವರದಿಮಾಡಿದೆ.

ರಷ್ಯಾದ ಆಕ್ರಮಣವನ್ನು ಕೊನೆಗಾಣಿಸಲು ಮಾತುಕತೆಗೆ ನೆರವಾಗುವಂತೆ ಉಕ್ರೇನ್‌ ಮಾಡಿದ್ದ ಮನವಿಗೆ ಒಪ್ಪಿದ್ದ ಅಬ್ರಮೊವಿಚ್ ಮತ್ತು ಉಕ್ರೇನ್‌ ತಂಡದ ಇನ್ನಿಬ್ಬರು ಹಿರಿಯ ಸದಸ್ಯರಲ್ಲಿ ವಿಷ ಪ್ರಾಶನದ ಲಕ್ಷಣಗಳು ಗೋಚರಿಸಿವೆ ಎಂದು 'ಡಬ್ಲುಎಸ್‌ಜೆ' ಉಲ್ಲೇಖಿಸಿದೆ.

ಅಬ್ರಮೊವಿಚ್ ಮತ್ತು ಉಕ್ರೇನ್ ಸಂಧಾನಕಾರರ ಕಣ್ಣುಗಳು ಕೆಂಪಾಗಿದ್ದು, ನಿರಂತರವಾಗಿ ನೀರು ಸುರಿಯುತ್ತಿದೆ ಮತ್ತು ನೋವು ಅನುಭವಿಸುತ್ತಿದ್ದಾರೆ. ಮುಖ ಮತ್ತು ಕೈ ಮೇಲಿನ ಚರ್ಮ ಸುಲಿದಂತೆ ಎದ್ದು ಬರುತ್ತಿದೆ ಎನ್ನಲಾಗಿದೆ.

ಸದ್ಯ ಅವರ ಆರೋಗ್ಯ ಸುಧಾರಿಸುತ್ತಿದ್ದು, ಪ್ರಾಣಕ್ಕೆ ಯಾವುದೇ ಅಪಾಯವಿಲ್ಲ ಎಂದು ಈ ಬೆಳವಣಿಗೆ ಬಗ್ಗೆ ಮಾಹಿತಿಯಿರುವ ವ್ಯಕ್ತಿಯೊಬ್ಬರು ತಿಳಿಸಿದ್ದಾರೆ.ವಿಷ ಪ್ರಾಶನದ ಅನುಮಾನ ವ್ಯಕ್ತವಾದ ಬಳಿಕವೂ, ಅಬ್ರಮೊವಿಚ್ ತಮ್ಮ ಕೆಲಸ ಮುಂದುವರಿಸಿದ್ದಾರೆ ಎಂದೂ ಅವರು ಹೇಳಿದ್ದಾರೆ.

ಅಬ್ರಮೊವಿಚ್ ಅವರು ಉಕ್ರೇನ್ ಮತ್ತು ರಷ್ಯಾ ನಡುವಿನ ಮಾತುಕತೆ ಪ್ರಕ್ರಿಯೆಯಲ್ಲಿ ಪ್ರಾಥಮಿಕ ಪಾತ್ರ ನಿಭಾಯಿಸಿದ್ದರು. ಸಂಧಾನದ ವಿಚಾರ ಇದೀಗ ಎರಡೂ ಕಡೆಯ ಸಮಾಲೋಚನಾತಂಡಗಳ ಕೈಯಲ್ಲಿದೆ ಎಂದು ಕ್ರೆಮ್ಲಿನ್ (ರಷ್ಯಾ ಅಧ್ಯಕ್ಷರ ಅಧಿಕೃತ ನಿವಾಸ) ತಿಳಿಸಿದೆ.

ರಷ್ಯಾ ಸೇನೆಯು ಫೆಬ್ರುವರಿ 24ರಂದು ಉಕ್ರೇನ್‌ ಮೇಲಿನ ಆಕ್ರಮಣ ಆರಂಭಿಸಿತ್ತು. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಇದನ್ನು 'ವಿಶೇಷ ಮಿಲಿಟರಿ ಕಾರ್ಯಾಚರಣೆ' ಎಂದು ಕರೆದರೆ, ಪುಟಿನ್‌ ಅಪ್ರಚೋದಿತ ಆಕ್ರಮಣ ಆರಂಭಿಸಿದ್ದಾರೆ ಎಂದು ಉಕ್ರೇನ್ ಆರೋಪಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.