ವಾಷಿಂಗ್ಟನ್:ಪೂರ್ವ ಚೀನಾದ ಸಮುದ್ರದಲ್ಲಿ ಅಮೆರಿಕ ಮತ್ತು ರಷ್ಯಾ ನೌಕಾಪಡೆಯ ಯುದ್ಧನೌಕೆಗಳು ಪರಸ್ಪರ ಅತ್ಯಂತ ಸಮೀಪ, ಅಸುರಕ್ಷಿತ ಸ್ಥಿತಿಯವರೆಗೆ ಬಂದು ಹಿಂದೆ ಸರಿದಿರುವ ಘಟನೆ ಶುಕ್ರವಾರ ನಡೆದಿದೆ.
ರಷ್ಯಾ ನೌಕಾಪಡೆ ಅತ್ಯಂತ ಸಮೀಪ, ಅಪಾಯಮಟ್ಟದವರೆಗೆ ಬಂದಿರುವುದಕ್ಕೆ ಅಮೆರಿಕವು ರಷ್ಯಾದ ವಿರುದ್ಧ ರಾಜತಾಂತ್ರಿಕ ಪ್ರತಿಭಟನೆ ದಾಖಲಿಸುವುದಾಗಿ ಹೇಳಿದೆ.
ಪೂರ್ವ ಚೀನಾದ ಸಮುದ್ರದಲ್ಲಿ ಅಮೆರಿಕ ಯುದ್ಧನೌಕೆಯ ಬಳಿಗೆ ರಷ್ಯಾದ ಯುದ್ಧನೌಕೆ ಅಸುರಕ್ಷಿತ ಹಾಗೂ ವೃತ್ತಿಪರವಲ್ಲದ ರೀತಿಯಲ್ಲಿ ಅತ್ಯಂತ ಸಮೀಪಕ್ಕೆ ಬಂದಿದೆ.
‘ಈ ಘಟನೆ ಕುರಿತು ರಷ್ಯಾ ಮತ್ತು ಅಮೆರಿಕ ಮಿಲಿಟರಿಗಳು ಪರಸ್ಪರ ಮಾತನಾಡುತ್ತೇವೆ, ಅದು ರಾಜತಾಂತ್ರಿವಾದುದು. ಆದರೆ, ನಮಗೆ ದಿನದ ಕೊನೆಯಲ್ಲಿ ಸುರಕ್ಷತೆ ಅತ್ಯಂತ ಮುಖ್ಯವಾಗಿತ್ತು’ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪ್ಯಾಟ್ರಿಕ್ ಶಾನಹನ್ ಪೆಂಟಗನ್‌ನಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾಗಿ ವರದಿಯಾಗಿದೆ.
ಇದಕ್ಕೆ ಪ್ರತಿಯಾಗಿ ರಷ್ಯಾ, ಅಮೆರಿಕ ಯುದ್ಧನೌಕೆಯದ್ದೇ ತಪ್ಪು ಎಂದು ಹೇಳಿದೆ.
ರಷ್ಯಾದ ಯುದ್ಧನೌಕೆ ಅಮೆರಿಕದ ಯುದ್ಧನೌಕೆಯ ಅತ್ಯಂತ ಸಮೀಪಕ್ಕೆ ಬಂದಿದ್ದ ವಿಡಿಯೊಗಳನ್ನು ಅಮೆರಿಕ ನೌಕಾಪಡೆ ಬಿಡುಗಡೆ ಮಾಡಿದೆ.
ರಷ್ಯಾ ಯುದ್ಧನೌಕೆಯು ಅಸುರಕ್ಷಿತ ಹಂತದವರೆಗೆ ಬಂದಾಗ ಉಂಟಾಗಬುಹುದಾಗಿದ್ದ ಘರ್ಷಣೆಯನ್ನು ತಡೆಯಲು ಹಿಂದೆ ಸರಿಯುವಂತೆ ಒತ್ತಾಯಿಸಬೇಕಾಯಿತು ಎಂದು ಅಮೆರಿಕ ನೌಕಾಪಡೆ ಹೇಳಿದೆ.
ಪಿಲಿಪೈನ್ ಸಮುದ್ರದಲ್ಲಿ ಶುಕ್ರವಾರ ಬೆಳಿಗ್ಗೆ 11.45ಕ್ಕೆ ಕಾರ್ಯನಿರ್ವಹಿಸುತ್ತಿದ್ದಾಗ ರಷ್ಯಾದ ಯುದ್ಧನೌಕೆಯು(ಯುಡಾಲೋಯಿ ಐ ಡಿಡಿ 572) ಅಮೆರಿಕದ ಕ್ಷಿಪಣಿ ಉಡಾವಣೆ ಸಾಮರ್ಥ್ಯದ ಯುದ್ಧನೌಕೆಯ(ಸಿಜಿ–62) ಅತ್ಯಂತ ಸಮೀಪ 50ರಿಂದ 100ಗಳಷ್ಟು ಹತ್ತಿರಕ್ಕೆ ಬಂದಿದೆ. ಈ ವೇಳೆ ಅಮೆರಿಕ ಯುದ್ಧನೌಕೆಯು ಅತ್ಯಂತ ವೇಗವಾಗಿ ಬಲಕ್ಕೆ ಚಲಿಸಿದೆ. ನೌಕೆಗಳ ಮಧ್ಯೆ ಸಂಭವಿಸಬಹುದಾಗಿದ್ದ ಅಪಾಯವನ್ನು ಸಿಬ್ಬಂದಿ ತಪ್ಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.