ಕಝಾನ್ (ರಷ್ಯಾ): ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ರಷ್ಯಾಕ್ಕೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು ಅಲ್ಲಿಯ ಜನ ಸಂಸ್ಕೃತದ ಹಾಡು, ರಷ್ಯನ್ ನೃತ್ಯ ಶೈಲಿ ಮತ್ತು ಕೃಷ್ಣನ ಭಜನೆಗಳ ಮೂಲಕ ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ.
ಕಝಾನ್ ನಗರದಲ್ಲಿನ ಕೊರ್ಸ್ಟನ್ ಹೋಟೆಲ್‌ಗೆ ಮೋದಿ ಆಗಮಿಸುತ್ತಿದ್ದಂತೆ, ಭಾರತೀಯ ಮೂಲದ ರಷ್ಯನ್ ಜನತೆ ಭಾರತದ ಧ್ವಜ ಹಿಡಿದು ಘೋಷಣೆಗಳನ್ನು ಕೂಗಿದರು. ಹಲವರು ಮೋದಿಯವರಿಗೆ ಹಸ್ತಲಾಘವ ಮಾಡಿ ಸೆಲ್ಫಿ ಕ್ಲಿಕ್ಕಿಸಿಕೊಂಡರು. ಇದೇ ವೇಳೆ ಕಲಾವಿದರು ಸಂಸ್ಕೃತದಲ್ಲಿ ಸ್ವಾಗತ ಪದ್ಯ ಹಾಡಿದರು.
ರಷ್ಯಾದ ಕಲಾವಿದರು ಭಾರತೀಯ ಸಂಪ್ರದಾಯದಂತೆ ಉಡುಪನ್ನು ಧರಿಸಿ, ರಷ್ಯನ್ ನೃತ್ಯವನ್ನು ಪ್ರದರ್ಶಿಸಿದರು. ಇಸ್ಕಾನ್‌ನ ಭಕ್ತರು ಕೃಷ್ಣನ ಭಜನೆ ಹಾಡಿದರು.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಪ್ರಧಾನಿ ಮೋದಿ, ‘ನನ್ನನ್ನು ಸ್ವಾಗತಿಸಿರುವುದು ಎಲ್ಲದಕ್ಕಿಂತ ಹೆಚ್ಚು ಮನಸ್ಸಿಗೆ ಹಿಡಿಸಿತು. ಕಝಾನ್ ಜನತೆಗೆ ಧನ್ಯವಾದಗಳು. ಭಾರತದ ಜನರು ಜಗತ್ತಿನಾದ್ಯಂತ ವಿವಿಧ ಸಾಧನೆಗಳ ಮೂಲಕ ಗುರುತಿಸಿಕೊಂಡಿದ್ದಾರೆ. ಅದೇ ರೀತಿ ಭಾರತೀಯ ಸಂಸ್ಕೃತಿಯನ್ನು ಪ್ರಪಂಚದಾದ್ಯಂತೆ ಪಸರಿಸಿದ್ದಾರೆ’ ಎಂದು ಬರೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.