ಮಾಸ್ಕೊ: ಬೇಡದ ಕನಸುಗಳನ್ನು ತಡೆಯಲು, ಸುಂದರ ಕನಸ್ಸುಗಳು ಮಾತ್ರ ಬೀಳುವಂತೆ ಮಾಡಲು ತಲೆಯೊಳಗೆ ಒಂದು ಮೈಕ್ರೊಚಿಪ್ ಅಳವಡಿಸುವ ಯೋಜನೆ ರೂಪಿಸಿದ ವ್ಯಕ್ತಿ ಸಾವಿನ ಮನೆಯ ಕದ ತಟ್ಟಿ ಬಂದಿದ್ದಾನೆ.
ಈ ಘಟನೆ ನಡೆದಿದ್ದು ರಷ್ಯಾದ ಮಾಸ್ಕೊದಲ್ಲಿ. ಮಿಖಾಯಿಲ್ ರಾಡುಗಾ ಎಂಬ 40 ವರ್ಷದ ವ್ಯಕ್ತಿ, ತನ್ನ ಕನಸುಗಳನ್ನು ನಿಯಂತ್ರಿಸುವ ಯೋಜನೆ ಸಾಕಾರಗೊಳ್ಳಲು ತಾನೇ ಶಸ್ತ್ರಚಿಕಿತ್ಸೆಗೆ ಮುಂದಾಗಿದ್ದರ ಪರಿಣಾಮ ಭಾರೀ ಬೆಲೆ ತೆತ್ತಿದ್ದಾನೆ.
ತಲೆಯೊಳಗೆ ಮೈಕ್ರೊಚಿಪ್ ಸೇರಿಸಿ ಅದರ ಮೂಲಕ ಕನಸುಗಳನ್ನು ನಿಯಂತ್ರಿಸುವ ಯೋಜನೆಯೊಂದನ್ನು ರಾಡುಗಾ ವರ್ಷದ ಹಿಂದಿನಿಂದ ಪ್ರಯೋಗಿಸುತ್ತಲೇ ಇದ್ದ. ಮೆದುಳಿನೊಳಗೆ ಎಲೆಕ್ಟ್ರೋಡ್ ಹಾಗೂ ವಿದ್ಯುತ್ ಉತ್ತೇಜಕವನ್ನು ಅಳವಡಿಸುವ ಯೋಜನೆಯನ್ನು ರೂಪಿಸಿದ್ದ. ಕನಸುಗಳು ಬೀಳುತ್ತಿರುವುದರ ಅರಿವು ಇರುವ ಅರೆನಿದ್ರಾವಸ್ಥೆಯಲ್ಲೇ ಈ ಪ್ರಯೋಗ ನಡೆಸುವ ಯೋಜನೆ ಹೊಂದಿರುವುದಾಗಿ ಆತ ಜುಲೈ 18ರಂದು ಟ್ವೀಟ್ ಮಾಡಿದ್ದ.
ತನ್ನ ಯೋಜನೆ ಸಾಕಾರಕ್ಕೆ ತನ್ನನ್ನೇ ಪ್ರಯೋಗಕ್ಕೆ ಒಡ್ಡಿಕೊಂಡ ರಾಡುಗಾ, ಡ್ರಿಲರ್ ಯಂತ್ರದಿಂದ ತಲೆಗೆ ರಂಧ್ರ ಕೊರೆಯಲು ಮುಂದಾದಾಗ ತೀವ್ರ ರಕ್ತಸ್ರಾವವಾಗಿ ಅಸ್ವಸ್ಥಗೊಂಡಿದ್ದಾನೆ. ತಕ್ಷಣ ಈತನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಕ್ಷ–ಕಿರಣ ತಪಾಸಣೆಯಲ್ಲಿ ತಲೆಯೊಳಗೆ ಎಲೆಕ್ಟ್ರೋಡ್ ಇರುವುದನ್ನು ಹಾಗೂ ಇದು ವರ್ಷದ ಹಿಂದೆಯೇ ತಲೆಯೊಳಗೆ ಸೇರಿಸಲಾಗಿತ್ತು ಎಂಬ ಅಂಶವನ್ನು ವೈದ್ಯರ ಪತ್ತೆ ಮಾಡಿದ್ದಾರೆ ಎಂದು ರಷ್ಯಾ ಟುಡೆ ವರದಿ ಮಾಡಿದೆ.
ತನ್ನ ಯೋಜನೆಗೆ ನೆರವಾಗಲು ನರವಿಜ್ಞಾನ ತಜ್ಞರನ್ನು ರಾಡುಗಾ ಭೇಟಿ ಮಾಡಿದ್ದ. ಈತನ ಸಾಹಸದ ಭಾಗವಾಗಲು ಅವರು ನಿರಾಕರಿಸಿದ ನಂತರ ತನ್ನನ್ನೇ ತಾನು ಪ್ರಯೋಗಕ್ಕೆ ಒಡ್ಡಿಕೊಳ್ಳಲು ನಿರ್ಧರಿಸಿ, ತನ್ನ ಅಪಾರ್ಟ್‌ಮೆಂಟ್‌ನಲ್ಲಿ ಇದನ್ನು ನಡೆಸಿದ್ದ ಎಂದು ವರದಿಯಾಗಿದೆ.
ಸುಮಾರು 1 ಲೀಟರ್‌ನಷ್ಟು ರಕ್ತ ನಷ್ಟವಾಗಿತ್ತು. ಅಂದಾಜು ನಾಲ್ಕು ಗಂಟೆಗಳ ಶಸ್ತ್ರಚಿಕಿತ್ಸೆಯ ನಂತರ ರಾಡುಗಾನನ್ನು ವೈದ್ಯರು ಉಳಿಸುವಲ್ಲಿ ಸಫಲರಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.