ಮಾಸ್ಕೊ: ಅಣ್ವಸ್ತ್ರ ಹೊಂದಿರುವ ರಾಷ್ಟ್ರಗಳ ಬೆಂಬಲ ಹೊಂದಿರುವ ಯಾವುದೇ ರಾಷ್ಟ್ರ ರಷ್ಯಾದ ಮೇಲೆ ದಾಳಿ ಮಾಡಿದರೆ ಅದನ್ನು ಜಂಟಿ ದಾಳಿ ಎಂದು ಪರಿಗಣಿಸುವ ನಿರ್ಣಯಕ್ಕೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮಂಗಳವಾರ ಸಹಿ ಮಾಡಿದ್ದಾರೆ.
ಅಮೆರಿಕ ಪೂರೈಸಿರುವ ಕ್ಷಿಪಣಿಗಳ ಮೂಲಕ ರಷ್ಯಾದ ಒಳಗೆ ದಾಳಿ ಮಾಡಲು ಉಕ್ರೇನ್‌ಗೆ ಅನುಮತಿ ನೀಡಲು ನಿರ್ಧರಿಸಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರಿಗೆ ತಿರುಗೇಟು ನೀಡಲು ರಷ್ಯಾ ಹೊಸ ಅಣ್ವಸ್ತ್ರ ನೀತಿಯನ್ನು ರೂಪಿಸಿರುವ ಸಾಧ್ಯತೆಗಳಿವೆ.
ಅಮೆರಿಕಕ್ಕೆ ಸಡ್ಡು ಹೊಡೆಯಲು ಹೊಸ ನೀತಿಯನ್ನು ರೂಪಿಸಲಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ರಷ್ಯಾದ ವಕ್ತಾರ ಡಿಮಿಟ್ರಿ ಪೆಸ್ಕೋವ್ ಅವರು, ‘ಕಾಲ ಕಾಲಕ್ಕೆ ನಮ್ಮ ನೀತಿಗಳು ಬದಲಾಗುತ್ತಿರುತ್ತವೆ. ಈ ಬಗ್ಗೆ ವರ್ಷದ ಆರಂಭದಲ್ಲೇ ಪುಟಿನ್ ನಿರ್ದೇಶನ ನೀಡಿದ್ದರು’ ಎಂದು ತಿಳಿಸಿದ್ದಾರೆ.
ಹೊಸ ನೀತಿಯ ಅನ್ವಯ, ಅಣ್ವಸ್ತ್ರ ಹೊಂದಿಲ್ಲದ ರಾಷ್ಟ್ರ ರಷ್ಯಾದ ಮೇಲೆ ದಾಳಿ ಮಾಡಿದರೆ. ಅದಕ್ಕೆ ಬೆಂಬಲ ನೀಡುತ್ತಿರುವ ಅಣ್ವಸ್ತ್ರ ಹೊಂದಿದ ರಾಷ್ಟ್ರವನ್ನು ಹೊಣೆಗಾರರನ್ನಾಗಿ ಪರಿಗಣಿಸಲಾಗುತ್ತದೆ.
ಇಂತಹ ದಾಳಿಗಳು ಪ್ರತ್ಯುತ್ತರವಾಗಿ ಅಣ್ವಸ್ತ್ರ ದಾಳಿ ನಡೆಸಲಾಗುತ್ತದೆಯೇ ಎಂಬ ಬಗ್ಗೆ ಸ್ಪಷ್ಟವಾಗಿ ತಿಳಿಸಿಲ್ಲ. ಅಣ್ವಸ್ತ್ರ ಬಳಕೆ ಬಗ್ಗೆ ಹಿಂದಿನ ನೀತಿಗಿಂತಲೂ ಹೊಸ ನೀತಿಯಲ್ಲಿ ಹೆಚ್ಚು ವಿವರಗಳನ್ನು ನೀಡಲಾಗಿದೆ. ಕ್ಷಿಪಣಿ, ಯುದ್ಧವಿಮಾನ ಮತ್ತು ಡ್ರೊನ್‌ಗಳ ಮೂಲಕ ತೀವ್ರ ದಾಳಿ ನಡೆದಾಗ ಅಣ್ವಸ್ತ್ರ ಬಳಕೆ ಮಾಡಬಹುದು ಎಂದು ಹೊಸ ನೀತಿಯಲ್ಲಿ ತಿಳಿಸಲಾಗಿದೆ.
ತನ್ನ ಮಿತ್ರರಾಷ್ಟ್ರ ಬೆಲಾರಸ್ ಮೇಲಿನ ದಾಳಿಗೆ ಪ್ರತಿಯಾಗಿ ರಷ್ಯಾದ ಅಣ್ವಸ್ತ್ರ ದಾಳಿ ನಡೆಸುವ ಸಾಧ್ಯತೆಗಳನ್ನು ಹೊಸ ನೀತಿ ತಿಳಿಸುತ್ತದೆ.
ಅಣ್ವಸ್ತ್ರ ನೀತಿಯಲ್ಲಿನ ಬದಲಾವಣೆ ಬಗ್ಗೆ ಪುಟಿನ್ ಸೆಪ್ಟೆಂಬರ್‌ನಲ್ಲಿ ಘೋಷಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.