ADVERTISEMENT

Russia–Ukraine War: ಶಾಂತಿ ನೆಲೆಸಬೇಕೆಂದರೆ ಉಕ್ರೇನ್ ತಟಸ್ಥವಾಗಿರಬೇಕು –ಪುಟಿನ್

ರಾಯಿಟರ್ಸ್
Published 8 ನವೆಂಬರ್ 2024, 2:26 IST
Last Updated 8 ನವೆಂಬರ್ 2024, 2:26 IST
<div class="paragraphs"><p>ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹಾಗೂ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ</p></div>

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹಾಗೂ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ

   

ಮಾಸ್ಕೊ: ಶಾಂತಿ ನೆಲೆಸಬೇಕು ಎಂದರೆ ಉಕ್ರೇನ್ ತಟಸ್ಥವಾಗಿ ಉಳಿಯಬೇಕು. ಇಲ್ಲದಿದ್ದರೆ, ಉಭಯ ದೇಶಗಳ ನಡುವೆ ನೆರೆ–ಹೊರೆಯ ರಾಷ್ಟ್ರಗಳು ಎನ್ನಬಹುದಾದ ಯಾವುದೇ ರೀತಿಯ ಉತ್ತಮ ಸಂಬಂಧಗಳು ಉಳಿಯುವುದಿಲ್ಲ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಗುರುವಾರ ಎಚ್ಚರಿಸಿದ್ದಾರೆ.

ಅಷ್ಟಲ್ಲದೆ, ರಷ್ಯಾ ಹಕ್ಕು ಸಾಧಿಸಿರುವ ಪ್ರದೇಶಗಳಲ್ಲಿ ವಾಸಿಸುವ ಜನರ ಆಶಯಗಳಿಗೆ ಅನುಗುಣವಾಗಿ ಉಕ್ರೇನ್ ಗಡಿಗಳು ಇರಬೇಕು ಎಂದು ಪ್ರತಿಪಾದಿಸಿರುವ ಅವರು, ಉಕ್ರೇನ್‌ ತಟಸ್ಥವಾಗಿದೆಯೇ ಎಂಬುದರ ಆಧಾರದಲ್ಲಿ ಗಡಿಗಳು ನಿರ್ಧಾರವಾಗಲಿವೆ ಎಂಬುದನ್ನು ಒತ್ತಿ ಹೇಳಿದ್ದಾರೆ.

ADVERTISEMENT

ಅಮೆರಿಕ ನೇತೃತ್ವದ ನ್ಯಾಟೊ ಮಿಲಿಟರಿ ಒಕ್ಕೂಟವು, ಉಕ್ರೇನ್‌ ಎಂದಾದರೂ ನ್ಯಾಟೊಗೆ ಸೇರಲಿದೆ ಎಂದು ಪದೇ ಪದೇ ಹೇಳುತ್ತಿದೆ.

ಈ ಸಂಬಂಧ ಹೇಳಿಕೆ ನೀಡಿರುವ ಪುಟಿನ್‌, 'ಒಂದು ವೇಳೆ ತಟಸ್ಥವಾಗಿ ಉಳಿಯದೇ ಇದ್ದರೆ, ದುಷ್ಟ ಕೈಗಳು ಉಕ್ರೇನ್‌ ಅನ್ನು ರಷ್ಯಾದ ಹಿತಾಸಕ್ತಿಗಳಿಗೆ ಹಾನಿಯಾಗುವಂತೆ ನಿರಂತರವಾಗಿ ಅಸ್ತ್ರವಾಗಿ ಬಳಸಿಕೊಳ್ಳಲಿವೆ' ಎಂದು ಅಭಿಪ್ರಾಯಪಟ್ಟಿದ್ದಾರೆ.

ಉಕ್ರೇನ್‌ ಹಾಗೂ ರಷ್ಯಾ ನಡುವೆ ಎರಡೂವರೆ ವರ್ಷಗಳಿಂದ ಯುದ್ಧ ನಡೆಯುತ್ತಿದೆ. ಇದೀಗ, ಉಕ್ರೇನ್‌ನ ಐದನೇ ಒಂದರಷ್ಟು ಪ್ರದೇಶಗಳನ್ನು ರಷ್ಯಾ ನಿಯಂತ್ರಣಕ್ಕೆ ಪಡೆದಿದೆ. ಪುಟಿನ್‌ ಅವರು ಸಂಘರ್ಷ ಅಂತ್ಯಗೊಳಿಸುವ ನಿಟ್ಟಿನಲ್ಲಿ ಇದೇ ಜೂನ್ 14ರಂದು ನಿಯಮಗಳನ್ನು ರೂಪಿಸಿದ್ದಾರೆ.

ನ್ಯಾಟೊ ಸೇರುವ ಮಹತ್ವಾಕಾಂಕ್ಷೆಯನ್ನು ಉಕ್ರೇನ್‌ ಬಿಡಬೇಕು. ರಷ್ಯಾ ಹಕ್ಕು ಸಾಧಿಸಿರುವ ಎಲ್ಲ ಪ್ರದೇಶಗಳಿಂದ ತನ್ನ ಸೇನೆಯನ್ನು ಹಿಂಪಡೆಯಬೇಕು ಎಂಬುದೂ ಸೇರಿದಂತೆ ಹಲವು ಷರತ್ತುಗಳನ್ನು ವಿಧಿಸಿದ್ದಾರೆ.

'ದೀರ್ಘಾವಧಿಗೆ ಸಂಘರ್ಷ ಇತ್ಯರ್ಥಗೊಳಿಸಲು ನಿರ್ಧರಿಸಿದ್ದೇವೆ. ಉಕ್ರೇನ್‌ ಸ್ವತಂತ್ರ ಹಾಗೂ ಸಾರ್ವಭೌಮ ರಾಷ್ಟ್ರ. ಅದನ್ನು ಮೂರನೇ ರಾಷ್ಟ್ರ ಅಸ್ತ್ರವಾಗಿಸಿಕೊಂಡು, ಅದರದ್ದೇ ಹಿತಾಸಕ್ತಿಗೆ ತಕ್ಕಂತೆ ಬಳಸಬಾರದು' ಎಂದು ಪುಟಿನ್‌ ಹೇಳಿದ್ದಾರೆ.

'ಉಕ್ರೇನ್‌ನ ಗಡಿಗಳು ಅಲ್ಲಿ ವಾಸಿಸುವ ಜನರ ನಿರ್ಧಾರಗಳಿಗೆ ಅನುಗುಣವಾಗಿ ಇರಬೇಕು. ಆ ಸ್ಥಳಗಳನ್ನು ನಾವು ಐತಿಹಾಸಿಕ ಪ್ರದೇಶಗಳು ಎಂದು ಕರೆಯುತ್ತೇವೆ' ಎಂದಿದ್ದಾರೆ.

ಆದರೆ, ರಷ್ಯಾದ ಷರತ್ತುಗಳನ್ನು ಶರಣಾಗತಿಗೆ ಸಮಾನ ಎಂದಿರುವ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ 'ವಿಜಯ ಯೋಜನೆ' ರೂಪಿಸಿದ್ದು, ಅದರ ಸಾಕಾರಕ್ಕಾಗಿ ಪಾಶ್ಚಾತ್ಯ ರಾಷ್ಟ್ರಗಳಿಂದ ಮತ್ತಷ್ಟು ನೆರವು ಕೋರಿದ್ದಾರೆ.

ಹಾಗೆಯೇ, ರಷ್ಯಾದ ಕಟ್ಟಕಡೇ ಸೈನಿಕನನ್ನೂ ತನ್ನ ನೆಲದಿಂದ ಹೊರಹಾಕುವವರೆಗೆ ವಿಶ್ರಮಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಆದರೆ, ಅಂತಹ ಗುರಿ ಸಾಧನೆಗೆ ಭಾರಿ ಸಂಪನ್ಮೂಲಗಳ ಅಗತ್ಯವಿದೆ. ಸದ್ಯ ಉಕ್ರೇನ್‌ ಬಳಿ ಅಷ್ಟು ಸಾಮರ್ಥ್ಯವಿಲ್ಲ ಎಂದು ಅಮೆರಿಕದ ಅಧಿಕಾರಿಗಳು ವಿಶ್ಲೇಷಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.