ಮಾಸ್ಕೊ: ಉಕ್ರೇನ್ ವಿರುದ್ಧ ‘ಮಿಲಿಟರಿ ಕಾರ್ಯಾಚರಣೆ’ ಆರಂಭಿಸಿದ ರಷ್ಯಾದ ಮೇಲೆ ಜಾಗತಿಕ ಸಮುದಾಯ ಹೇರಿರುವ ನಿರ್ಬಂಧಗಳು ಪರಿಣಾಮ ಬೀರಲಾರಂಭಿಸಿವೆ.
ಆಹಾರ ಪದಾರ್ಥಗಳು ಕಾಳಸಂತೆಯಲ್ಲಿ ಮಾರಾಟವಾಗುವುದನ್ನು ತಡೆಗಟ್ಟಲು, ಅವುಗಳು ಜನರಿಗೆ ಸುಲಭವಾಗಿ ಲಭ್ಯವಾಗುವಂತೆ ನೋಡಿಕೊಳ್ಳಲು ಕ್ರಮ ಕೈಗೊಂಡಿರುವ ಸರ್ಕಾರ, ಅಗತ್ಯ ವಸ್ತುಗಳ ಚಿಲ್ಲರೆ ಮಾರಾಟದ ಮೇಲೆ ಮಿತಿ ಹೇರಲು ಹೊರಟಿದೆ.
‘ಮರುಮಾರಾಟಕ್ಕಾಗಿ, ಖಾಸಗಿ ಬಳಕೆಯ ಉದ್ದೇಶಕ್ಕಾಗಿ ಅಗತ್ಯ ಆಹಾರ ಪದಾರ್ಥಗಳನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸಿದ ಪ್ರಕರಣಗಳು ನಮ್ಮ ಗಮನಕ್ಕೆ ಬಂದಿವೆ’ ಎಂದು ವ್ಯಾಪಾರ ಮತ್ತು ಉದ್ಯಮ ಸಚಿವಾಲಯ ತಿಳಿಸಿದೆ.
‘ಚಿಲ್ಲರೆ ವ್ಯಾಪಾರಿಗಳು ಅಗತ್ಯ ವಸ್ತುಗಳನ್ನು ವ್ಯಕ್ತಿಯೊಬ್ಬರಿಗೆ ಒಂದು ಬಾರಿಗೆ ಮಾತ್ರ ಮಾರಾಟ ಮಾಡುವಂತೆ ಮಿತಿಗೊಳಿಸಬೇಕು’ ಎಂದು ಚಿಲ್ಲರೆ ವ್ಯಾಪಾರಿಗಳ ಸಂಘಗಳು ಸರ್ಕಾರವನ್ನು ಆಗ್ರಹಿಸಿದ್ದವು.
‘ಕೈಗಾರಿಕೆ ಮತ್ತು ವ್ಯಾಪಾರ ಸಚಿವಾಲಯ ಮತ್ತು ಕೃಷಿ ಸಚಿವಾಲಯವು ವ್ಯಾಪಾರ ಸಂಸ್ಥೆಗಳ ನಿರ್ಧಾರವನ್ನು ಬೆಂಬಲಿಸಿದೆ’ ಎಂದು ಸಂಘಟನೆಗಳು ಹೇಳಿವೆ. ಅಲ್ಲದೆ, ಸಂಘಟನೆಗಳೇ ಮಾರ್ಗಸೂಚಿಗಳನ್ನು ಸಿದ್ಧಪಡಿಸಲಿವೆ ಎಂದು ತಿಳಿಸಿವೆ.
ಅಗತ್ಯ ವಸ್ತುಗಳಾದ ಬ್ರೆಡ್, ಅಕ್ಕಿ, ಹಿಟ್ಟು, ಮೊಟ್ಟೆ, ಮಾಂಸ, ಡೈರಿ ಉತ್ಪನ್ನಗಳ ಬೆಲೆಗಳು ಸರ್ಕಾರದ ನಿಯಂತ್ರಣಗಳಿಗೆ ಒಳಪಟ್ಟಿರುತ್ತವೆ ಎಂದು ತಿಳಿಸಲಾಗಿದೆ.
ಫೆಬ್ರುವರಿ 24 ರಂದು ನೆರೆಯ ಉಕ್ರೇನ್ ವಿರುದ್ಧ ರಷ್ಯಾ ‘ವಿಶೇಷ ಮಿಲಿಟರಿ ಕಾರ್ಯಾಚರಣೆ‘ಯನ್ನು ಆರಂಭಿಸಿತ್ತು. ಇದರ ಪರಿಣಾಮವಾಗಿ ರಷ್ಯಾದ ಮೇಲೆ ಪಾಶ್ಚಾತ್ಯ ದೇಶಗಳು ವಿವಿಧ ಬಗೆಯ ನಿರ್ಬಂಧಗಳನ್ನು ವಿಧಿಸಿವೆ.
ಇತ್ತೀಚಿಗೆ ಕೇಂದ್ರೀಯ ಬ್ಯಾಂಕ್ ಬಂಡವಾಳ ನಿಯಂತ್ರಣವೂ ಸೇರಿದಂತೆ ಇತರ ನಿಯಂತ್ರಣಗಳನ್ನು ವಿಧಿಸಿದೆ. ಈ ಬೆಳವಣಿಗೆಯು ರಷ್ಯಾದ ಆರ್ಥಿಕತೆಗೆ ಪೆಟ್ಟು ನೀಡಿದೆ. ರಷ್ಯಾದ ಕರೆನ್ಸಿ ರೂಬೆಲ್‌ನ ಮೌಲ್ಯ ಕುಸಿಯುವಂತೆ ಮಾಡಿದೆ.
ಕುಸಿಯುತ್ತಿರುವ ರೂಬೆಲ್ ಮೌಲ್ಯವು 1990ರ ರಷ್ಯಾದ ಆರ್ಥಿಕ ಅಸ್ಥಿರತೆಯನ್ನು ಜನರಿಗೆ ನೆನಪು ಮಾಡಿಕೊಡುತ್ತಿದೆ. ಆಗ, ಕರೆನ್ಸಿ ಅಪಮೌಲ್ಯದಿಂದಾಗಿ ಲಕ್ಷಾಂತರ ರಷ್ಯನ್ನರ ಉಳಿತಾಯ ಖಾತೆಯಲ್ಲಿದ್ದ ಹಣ ಕರಗಿಹೋಗಿತ್ತು. ಅಲ್ಲದೆ, ಭಾರಿ ಹಣದುಬ್ಬರ ಎದುರಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.