ಕೀವ್, ಉಕ್ರೇನ್: ಉಕ್ರೇನ್‌ನಲ್ಲಿ ಕೀವ್ ಮತ್ತು ಇತರೆ ಪ್ರಮುಖ ನಗರಗಳಲ್ಲಿ ವಸತಿ ಕಟ್ಟಡಗಳನ್ನು ಗುರಿಯಾಗಿಸಿ ರಷ್ಯಾ ಸೇನೆಯು ಮಂಗಳವಾರ ಕ್ಷಿಪಣಿ ದಾಳಿ ನಡೆಸಿದೆ. ಕನಿಷ್ಠ ನಾಲ್ವರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ.
ರಷ್ಯಾದ ಗಡಿಗೆ ಹೊಂದಿಕೊಂಡಿರುವ, ಉಕ್ರೇನ್‌ನ ಎರಡನೇ ಅತಿದೊಡ್ಡ ನಗರ ಹಾರ್ಕಿವ್‌ನಲ್ಲಿ ಕ್ಷಿಪಣಿ ದಾಳಿಯಿಂದ ಹಲವು ಕಟ್ಟಡಗಳು ಜಖಂಗೊಂಡಿವೆ. ಅವಶೇಷಗಳಡಿ ಸಿಲುಕಿಕೊಂಡವರ ರಕ್ಷಣಾ ಕಾರ್ಯ ಚುರುಕಿನಿಂದ ಸಾಗಿದೆ.
ರಾತ್ರಿ ಕ್ಷಿಪಣಿ ದಾಳಿಯಿಂದ ಮೂವರು ನಿವಾಸಿಗಳು ಸತ್ತಿದ್ದು, 42 ಮಂದಿ ಗಾಯಗೊಂಡರು ಎಂದು ಪ್ರಾದೇಶಿಕ ಗವರ್ನರ್ ತಿಳಿಸಿದ್ದಾರೆ. ಎರಡು ಭಾರಿ ಸ್ಫೋಟದ ಬಳಿಕ ರಾತ್ರಿಯೇ ಎಚ್ಚರಿಕೆ ಸೈರನ್ ಮೊಳಗಿಸಲಾಗಿತ್ತು ಎಂದು ಎಎಫ್‌ಪಿ ವರದಿ ಮಾಡಿದೆ.
ಉಕ್ರೇನ್ ಸೇನಾ ಮುಖ್ಯಸ್ಥ ವ್ಯಾಲೆರಿ ಝಲುಜ್ನಿ ಅವರು, ’ರಷ್ಯಾದ ಸೇನೆ 42 ಕ್ಷಿಪಣಿಗಳನ್ನು ಪ್ರಯೋಗಿಸಿದೆ. ಇವುಗಳಲ್ಲಿ 21 ಅನ್ನು ಉಕ್ರೇನ್‌ನ ಸೇನೆ ಹೊಡೆದುರುಳಿಸಿದೆ‘ ಎಂದು ಮಾಹಿತಿ ನೀಡಿದರು.
ಕಟ್ಟಡಗಳಿಗೆ ಹಾನಿ, ಕುಸಿದ ಕಟ್ಟಡ ಸ್ದಳದಿಂದ ದಟ್ಟ ಹೊಗೆ ಎದ್ದಿರುವುದು, ಅವಶೇಷಗಳಡಿ ಸಿಕ್ಕಿ ಬಿದ್ದವರಿಗಾಗಿ ರಕ್ಷಣಾ ಸಿಬ್ಬಂದಿ ಶೋಧ ನಡೆಸಿರುವ ದೃಶ್ಯಗಳು ನಗರದ ವಿವಿಧೆಡೆ ಸಾಮಾನ್ಯವಾಗಿತ್ತು. ಕೀವ್ ಹೊರವಲಯದಲ್ಲಿ ನಾಲ್ವರು ಗಾಯಗೊಂಡಿದ್ದಾರೆ. ವಸತಿ ಬ್ಲಾಕ್‌ಗಳು, ಖಾಸಗಿ ನಿವಾಸಗಳು, ಮನೆಗಳು ತೀವ್ರ ಸ್ವರೂಪದಲ್ಲಿ ಜಖಂಗೊಂಡಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ನಗರದಲ್ಲಿ 21 ಜನರು ಗಾಯಗೊಂಡಿದ್ದು, ಕಾರುಗಳಿಗೆ ಬೆಂಕಿ ಹೊತ್ತಿಕೊಂಡಿದೆ ಎಂದು ಕೀವ್ ಮೇಯರ್ ವಿಟಲಿ ಕ್ಲಿಟ್ಸ್ಕೊಹೇಳಿದರು. ಉಕ್ರೇನ್ ಪ್ರಧಾನಿ ಡೆನಿಸ್ ಶೈಮ್‌ಗಲ್, ಉಕ್ರೇನ್‌ನಲ್ಲಿ ಮಾಡಿರುವ ಹಾನಿಯ ಪರಿಣಾಮವನ್ನು ರಷ್ಯಾ ಅನುಭವಿಸಲಿದೆ ಎಂದು ಹೇಳಿದ್ದಾರೆ.
ವಸತಿ ಪ್ರದೇಶ ಗುರಿಯಾಗಿಸಿ ದಾಳಿ ನಡೆಸಿಲ್ಲ –ರಷ್ಯಾ
ಕ್ರೆಮ್ಲಿನ್ (ರಾಯಿಟರ್ಸ್): ಉಕ್ರೇನ್‌ನಲ್ಲಿ ನಾಗರಿಕರನ್ನು ಗುರಿಯಾಗಿಸಿ ದಾಳಿ ನಡೆಸಿಲ್ಲ ಎಂದು ರಷ್ಯಾ ಸೇನೆ ಮಂಗಳವಾರ ಸ್ಪಷ್ಟನೆ ನೀಡಿದೆ. ಕೀವ್ ಮತ್ತು ಹಾರ್ಕಿವ್‌ನಲ್ಲಿ ಕ್ಷಿಪಣಿ ದಾಳಿ ನಡೆದ ನಂತರ ಈ ಹೇಳಿಕೆ ನೀಡಿದೆ. ರಷ್ಯಾ ಸೇನೆಯ ಕ್ಷಿಪಣಿ ದಾಳಿಯಿಂದ ನಾಲ್ವರು ಸತ್ತಿದ್ದು 60ಕ್ಕೂ ಹೆಚ್ಚು ನಾಗರಿಕರು ಗಾಯಗೊಂಡಿದ್ದಾರೆ ಎಂದು ಉಕ್ರೇನ್ ಅಧಿಕಾರಿಗಳು ಇದಕ್ಕೂ ಮೊದಲು ಹೇಳಿದ್ದರು.
ರಷ್ಯಾ ಸರ್ಕಾರದ ವಕ್ತಾರ ಡಿಮಿಟ್ರಿ ಪೆಸ್ಕೊವ್ ‘ವಿಶೇಷ ಸೇನಾ ಕಾರ್ಯಾಚರಣೆ ಮುಂದುವರಿದಿದೆ. ವಸತಿ ಪ್ರದೇಶಗಳನ್ನು ಗುರಿ ಮಾಡಿ ದಾಳಿಯನ್ನು ನಡೆಸಿಲ್ಲ’ ಎಂದು ಪ್ರತಿಕ್ರಿಯಿಸಿದರು. ಉಕ್ರೇನ್‌ನ ಸೇನೆ ರಷ್ಯಾದ ಹಿಡಿತದಲ್ಲಿರುವ ಡೊನೆಟ್ಸ್ಕ್ ನಗರದ ಮೇಲೆ ವಾಯು ದಾಳಿ ನಡೆಸಿದ್ದು 27 ಜನರು ಸತ್ತಿದ್ದಾರೆ ಎಂದು ರಷ್ಯಾ ಭಾನುವಾರವಷ್ಟೇ ಆರೋಪಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.