ಮಾಸ್ಕೊ: ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಆಡಳಿತದಲ್ಲಿನ ಭ್ರಷ್ಟಾಚಾರದ ವಿರುದ್ಧ ಧ್ವನಿಯೆತ್ತಿದ್ದ ಹಾಗೂ ಅಧ್ಯಕ್ಷರ ವಿರುದ್ಧ ಪ್ರತಿಭಟನೆ ನಡೆಸಿದ್ದ ವಿಪಕ್ಷ ನಾಯಕ ಅಲೆಕ್ಸಿ ನವಾಲ್ನಿ (47) ಅವರು ಶುಕ್ರವಾರ ಕಾರಾಗೃಹದಲ್ಲಿ ಮೃತಪಟ್ಟಿದ್ದಾರೆ.
ಶುಕ್ರವಾರ ಬೆಳಿಗ್ಗೆ ವಾಯುವಿಹಾರ ಮಾಡುತ್ತಿದ್ದಾಗ ಅವರು ಅನಾರೋಗ್ಯಕ್ಕೆ ತುತ್ತಾಗಿ ಪ್ರಜ್ಞೆ ಕಳೆದುಕೊಂಡರು. ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಆಂಬುಲೆನ್ಸ್ ಬಂದಿತ್ತು. ಆದರೆ, ಅಷ್ಟು ಹೊತ್ತಿಗಾಗಲೇ ಅವರು ಮೃತಪಟ್ಟಿದ್ದರು ಎಂದು ರಷ್ಯಾದ ಕಾರಾಗೃಹ ಸಂಸ್ಥೆ ಹೇಳಿಕೆ ಬಿಡುಗಡೆ ಮಾಡಿದೆ.
ಅವರ ಸಾವಿನ ಸುದ್ದಿಯನ್ನು ಅಧ್ಯಕ್ಷ ಪುಟಿನ್ ಅವರಿಗೆ ತಿಳಿಸಲಾಗಿದೆ ಎಂದು ಕ್ರೆಮ್ಲಿನ್ ವಕ್ತಾರ ತಿಳಿಸಿದ್ದಾರೆ.
’ನವಾಲ್ನಿ ಅವರು ಮೃತಪಟ್ಟಿದ್ದಾರೆ ಎಂಬ ವಿಚಾರ ನಮಗೆ ಗೊತ್ತಾಗಿಲ್ಲ. ಅವರನ್ನು ಬಂಧಿಸಿಟ್ಟ ಕಾರಾಗೃಹಕ್ಕೆ ಅವರ ವಕೀಲರು ತೆರಳುತ್ತಿದ್ದಾರೆ‘ ಎಂದು ನವಾಲ್ನಿ ಅವರ ವಕ್ತಾರರು ‘ಎಕ್ಸ್’ನಲ್ಲಿ ತಿಳಿಸಿದ್ದಾರೆ.
ವಿಧ್ವಂಸಕ ಕೃತ್ಯದ ಆರೋಪದಲ್ಲಿ 19 ವರ್ಷ ಕಾರಾಗೃಹ ಶಿಕ್ಷೆಗೆ ಒಳಗಾಗಿದ್ದ ನವಾಲ್ನಿ ಅವರನ್ನು ಕಳೆದ ವರ್ಷದ ಡಿಸೆಂಬರ್‌ನಲ್ಲಿ ವ್ಲಾದಿಮಿರ್ ಪ್ರಾಂತ್ಯದಲ್ಲಿರುವ ರಷ್ಯಾ ಕೇಂದ್ರೀಯ ಕಾರಾಗೃಹದಿಂದ ಭಾರಿ ಬಿಗಿ ಭದ್ರತೆ ಇರುವ ಕಾರಾಗೃಹವೊಂದಕ್ಕೆ ಸ್ಥಳಾಂತರಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.