ADVERTISEMENT

ಯೆವ್ಗೆನಿ ಪ್ರಿಗೋಷಿನ್‌ ಅಕಾಲಿಕ ಸಾವು: ‘ವ್ಯಾಗ್ನರ್‌’ಗೆ ಆವರಿಸಿದ ಅನಿಶ್ಚಿತತೆ

ಆಫ್ರಿಕಾ ರಾಷ್ಟ್ರಗಳಲ್ಲಿ ‘ಪ್ರಾಬಲ್ಯ’ಕ್ಕಾಗಿ ರಷ್ಯಾಗೆ ಅಸ್ತಿತ್ವ ಉಳಿಸುವ ಅನಿವಾರ್ಯತೆ

ಎಪಿ
Published 26 ಆಗಸ್ಟ್ 2023, 14:15 IST
Last Updated 26 ಆಗಸ್ಟ್ 2023, 14:15 IST
ರಷ್ಯಾದ ಸೇಂಟ್‌ ಪೀಟರ್ಸ್‌ಬರ್ಗ್‌ನಲ್ಲಿ ಕೆಫೆಯೊಂದರ ಎದುರು ಇಡಲಾಗಿದ್ದ ಯೆವ್ಗೆನಿ ಪ್ರಿಗೋಷಿನ್‌ ಅವರ ಭಾವಚಿತ್ರವನ್ನು ವ್ಯಕ್ತಿಯೊಬ್ಬ ಗಮನಿಸುತ್ತಿರುವುದು
ರಷ್ಯಾದ ಸೇಂಟ್‌ ಪೀಟರ್ಸ್‌ಬರ್ಗ್‌ನಲ್ಲಿ ಕೆಫೆಯೊಂದರ ಎದುರು ಇಡಲಾಗಿದ್ದ ಯೆವ್ಗೆನಿ ಪ್ರಿಗೋಷಿನ್‌ ಅವರ ಭಾವಚಿತ್ರವನ್ನು ವ್ಯಕ್ತಿಯೊಬ್ಬ ಗಮನಿಸುತ್ತಿರುವುದು    – ಎ.ಪಿ ಚಿತ್ರ

ಮಾಸ್ಕೊ: ರಷ್ಯಾದ ಖಾಸಗಿ ಸೇನಾ ಪಡೆ ‘ವ್ಯಾಗ್ನರ್‌’ನ ಮುಖಂಡ ಯೆವ್ಗೆನಿ ಪ್ರಿಗೋಷಿನ್‌ ಅಕಾಲಿಕ ಸಾವಿನಿಂದಾಗಿ ಈ ಗುಂಪಿನ ಸದಸ್ಯರಲ್ಲಿ ಅನಿಶ್ಚಿತತೆ ಮನೆಮಾಡಿದ್ದು ‘ವ್ಯಾಗ್ನರ್’ನ ಭವಿಷ್ಯ ಕುರಿತಂತೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. 

ಕಳೆದ ಬುಧವಾರ ಸಂಭವಿಸಿದ್ದ ಖಾಸಗಿ ವಿಮಾನ ಅಪಘಾತದಲ್ಲಿ ಪ್ರಿಗೋಷಿನ್‌ ಸೇರಿ 10 ಮಂದಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಪ್ರಿಗೋಷಿನ್‌ ಕಡೆಯದಾಗಿ ಕಳೆದ ವಾರದ ಆರಂಭದಲ್ಲಿ ಅಪರಿಚಿತ ಸ್ಥಳದಿಂದ ವಿಡಿಯೊ ಸಂದೇಶ ನೀಡಿದ್ದು, ‘ಎಲ್ಲ ದೇಶಗಳು ಹಾಗೂ ಆಫ್ರಿಕಾಗಿಂತ ರಷ್ಯಾವನ್ನು ಹೆಚ್ಚು ಶಕ್ತಿಯುತಗೊಳಿಸುವುದು ನಮ್ಮ ಗುರಿ’ ಎಂದು ಹೇಳಿದ್ದರು.

‘ಪ್ರಿಗೋಷಿನ್‌ ಮೃತಪಟ್ಟಿದ್ದಾರೆ. ಅವರ ಏಳಿಗೆಯನ್ನು ಸಹಿಸದವರ ಪಾತ್ರ ಸಾವಿನ ಹಿಂದಿದೆ’ ಎಂಬ ವದಂತಿಯು ದಟ್ಟವಾಗಿದೆ. ಆದರೆ, ವಿಮಾನ ಅಪಘಾತದ ಹಿಂದೆ ತನ್ನ ಪಾತ್ರವಿದೆ ಎಂಬ ವದಂತಿಗಳನ್ನು ರಷ್ಯಾ ಸರ್ಕಾರ ಈಗಾಗಲೇ ನಿರಾಕರಿಸಿದೆ.

ADVERTISEMENT

ಆಲ್ ಖೈದಾ, ಇಸ್ಲಾಮಿಕ್‌ ಸ್ಟೇಟ್‌ ಸಂಘಟನೆಗಳ ವಿರುದ್ಧ ಆಫ್ರಿಕಾದ ಕೆಲ ರಾಷ್ಟ್ರಗಳಲ್ಲಿ ವ್ಯಾಗ್ನರ್‌ ಗುಂಪು ಭದ್ರತಾ ಸೇವೆಯನ್ನು ನೀಡುತ್ತಿದೆ. ರಷ್ಯಾದ ಹೊಸ ನಾಯಕತ್ವದಲ್ಲಿ ‘ವ್ಯಾಗ್ನರ್‌’ ಅಸ್ತಿತ್ವ ಮುಂದುವರಿಯಬಹುದು’ ಎಂದು ಅಧಿಕಾರಿಗಳು ಆಶಿಸಿದ್ದಾರೆ.

ಪ್ರಿಗೋಷಿನ್ ಈಗಾಗಲೇ ಆಳವಾದ ಹಾಗೂ ವ್ಯಕ್ತಿಗತ ನೆಲೆಯಲ್ಲಿ ಬಲವಾದ ಸಂಪರ್ಕ ಜಾಲ ರೂಪಿಸಿದ್ದಾರೆ. ಹೀಗಾಗಿ, ಪ್ರಿಗೋಷಿನ್‌ಗೆ ಪರ್ಯಾಯ ನಾಯಕತ್ವ ಕಂಡುಕೊಳ್ಳುವುದು ರಷ್ಯಾಗೆ ಕಷ್ಟವಾಗಲಾರದು ಎಂದೂ ಕೆಲವರು ಅಭಿಪ್ರಾಯಪಟ್ಟಿದ್ದಾರೆ. 

ಆರ್ಥಿಕ ಮತ್ತು ರಾಜಕೀಯ ಕಾರಣಗಳಿಂದ ರಷ್ಯಾ ಸರ್ಕಾರಕ್ಕೆ ಆಫ್ರಿಕಾ ಮುಖ್ಯವಾದುದಾಗಿದೆ. ಕಳೆದ ಬೇಸಿಗೆಯಲ್ಲಿ ವ್ಯಾಗ್ನರ್ ಗುಂಪು ಸೆಂಟ್ರಲ್‌ ಆಫ್ರಿಕನ್‌ ರಿಪಬ್ಲಿಕ್‌ನಲ್ಲಿ ಅಧ್ಯಕ್ಷೀಯ ಆಡಳಿತ ಸ್ಥಾಪಿಸುವ ನಿಟ್ಟಿನಲ್ಲಿ ಜನಾಭಿಪ್ರಾಯ ಮೂಡಿಸಲು ನೆರವಾಗಿತ್ತು. ಅಲ್ಲದೆ, ಮಾಲಿಯಲ್ಲಿ ಶಸ್ತ್ರಸಜ್ಜಿತ ಬಂಡುಕೋರರ ವಿರುದ್ಧ ಹೋರಾಡಲು ಅಲ್ಲಿನ ಸೇನೆಗೂ ವ್ಯಾಗ್ನರ್ ಸಹಕಾರ ನೀಡುತ್ತಿದೆ.

ಆಫ್ರಿಕಾ ನೆಲದಲ್ಲಿ ಪ್ರಾಬಲ್ಯ ವೃದ್ಧಿ ಜೊತೆಗೆ ಪಶ್ಚಿಮ ರಾಷ್ಟ್ರಗಳ ಪ್ರಭಾವ ಕುಗ್ಗಿಸುವುದು ರಷ್ಯಾದ ಈಗಿನ ಆದ್ಯತೆಯಾಗಿದೆ. ಆಫ್ರಿಕಾದ 54 ರಾಷ್ಟ್ರಗಳು ವಿಶ್ವಸಂಸ್ಥೆ ಸದಸ್ಯತ್ವ ಹೊಂದಿದ್ದು ಮತದಾನದಲ್ಲಿ ನಿರ್ಣಾಯಕ ಪಾತ್ರ ವಹಿಸಲಿವೆ. ಇದೇ ಕಾರಣದಿಂದ ಉಕ್ರೇನ್‌ ಯುದ್ಧದ ಹಿನ್ನೆಲೆಯಲ್ಲಿ ಹೊಸ ಪಾಲುದಾರರ ನಿರೀಕ್ಷೆಯಲ್ಲಿರುವ ರಷ್ಯಾ, ಈ ರಾಷ್ಟ್ರಗಳ ಬೆಂಬಲ ಒಟ್ಟುಗೂಡಿಸಲೂ ಯತ್ನಿಸುತ್ತಿದೆ.

ವಿಶ್ವಸಂಸ್ಥೆಯಲ್ಲಿನ ಅಮೆರಿಕ ರಾಯಭಾರಿ ಲಿಂಡಾ ಥಾಮಸ್‌ ಅವರು, ‘ವ್ಯಾಗ್ನರ್ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ಅದರ ಉಪಸ್ಥಿತಿ ಮತ್ತು ಕಾರ್ಯಶೈಲಿಯನ್ನು ವಿರೋಧಿಸುವ ಆಫ್ರಿಕಾದ ರಾಷ್ಟ್ರಗಳಿಗೆ ಉತ್ತೇಜನ ನೀಡಲಾಗುವುದು’ ಎಂದು ಹೇಳುತ್ತಾರೆ.

ಕೇಂದ್ರೀಯ ಆಫ್ರಿಕಾ ಗಣರಾಜ್ಯದಲ್ಲಿನ ಆಡಳಿತಪಕ್ಷದ ಮೈತ್ರಿಯ ಭಾಗವಾಗಿರುವ ರಿಪಬ್ಲಿಕನ್ ಫ್ರಂಟ್, ‘ರಷ್ಯಾ ಮತ್ತು ವ್ಯಾಗ್ನರ್‌ಗೆ ತನ್ನ ಬೆಂಬಲವು ಮುಂದುವರಿಯಲಿದೆ. ಸ್ವ ಅಸ್ತಿತ್ವ ರಕ್ಷಣೆಗಾಗಿ ಹೋರಾಟವೂ ಮುಂದುವರಿಯಲಿದೆ’ ಎಂದು ಸ್ಪಷ್ಟಪಡಿಸಿದೆ.

ಈ ಮಧ್ಯೆ, ಪ್ರಿಗೋಷಿನ್‌ ಹುಟ್ಟುಹಾಕಿರುವ ಭದ್ರ ಅಡಿಪಾಯವನ್ನು ಕಾಯ್ದುಕೊಳ್ಳುವುದು ರಷ್ಯಾಗೆ ಈಗಲೂ ಸವಾಲಿನ ಕೆಲಸವೇ ಆಗಿದೆ. ಪುಟಿನ್‌ ಅವರಿಗೆ ಹಿಂದೆ ಭಾಷಣ ಬರೆದುಕೊಡುತ್ತಿದ್ದ  ಅಬ್ಬಾಸ್‌ ಗಲ್ಯಾಮೊವ್ ಅವರು, ‘ಪ್ರಿಗೋಷಿನ್‌ ಕಾರ್ಯವನ್ನು ಮುಂದುವರಿಸಿಕೊಂಡು ಹೋಗುವ ನಾಯಕನ ಅನ್ವೇಷಣೆಯು ರಷ್ಯಾ ಆಡಳಿತಕ್ಕೆ ಅನಿವಾರ್ಯವಾಗಿದೆ’ ಎಂದು ಹೇಳುತ್ತಾರೆ. 

ಬ್ರಿಟನ್‌ನ ರಕ್ಷಣಾ ಸಚಿವಾಲಯವು, ‘ವ್ಯಾಗ್ನರ್‌ ಗುಂಪು ಬಹುತೇಕ ಅಸ್ತಿತ್ವ ಕಳೆದುಕೊಳ್ಳಲಿದೆ’ ಎಂದು ಅಭಿಪ್ರಾಯಪಟ್ಟಿದ್ದರೆ, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ ಅವರ ವಕ್ತಾರ ಡಿಮಿಟ್ರಿ ‍ಪೆಸ್ಕೊವ್, ಈ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.