ಭಾರತ ಮೂಲದ ವಿವಾದಿತ ಲೇಖಕ ಸಲ್ಮಾನ್ ರಶ್ದಿ ಅವರ ಮೇಲೆ ಶುಕ್ರವಾರ ರಾತ್ರಿ ನ್ಯೂಯಾರ್ಕ್‌ನ ಕಾರ್ಯಕ್ರಮವೊಂದರಲ್ಲಿ ದಾಳಿ ನಡೆದಿದೆ. ವೇದಿಕೆಗೆ ನುಗ್ಗಿದ ಯುವಕನೊಬ್ಬ ಅವರಿಗೆ 10–15 ಬಾರಿ ಚಾಕುವಿನಿಂದ ಇರಿದಿದ್ದಾನೆ.
1981ರಲ್ಲಿ ಅವರ ಎರಡನೇ ಕಾದಂಬರಿ ‘ಮಿಡ್‌ನೈಟ್ಸ್ ಚಿಲ್ಡ್ರನ್’ಮೂಲಕ ಅವರು ವಿಶ್ವದ ಗಮನ ಸೆಳೆದಿದ್ದರು. ಸ್ವಾತಂತ್ರ್ಯಾನಂತರದ ಭಾರತದ ಚಿತ್ರಣವನ್ನು ಒಳಗೊಂಡಿರುವ ಈ ಪುಸ್ತಕವು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಶಂಸೆ ಗಳಿಸಿತ್ತು. ಬ್ರಿಟನ್‌ನ ಪ್ರತಿಷ್ಠಿತ ಬೂಕರ್ ಪ್ರಶಸ್ತಿ ಸಹ ಗೆದ್ದುಕೊಂಡಿತ್ತು.
ಆದರೆ, 1988ರಲ್ಲಿ ಬಿಡುಗಡೆಯಾದ ಅವರ ಮತ್ತೊಂದು ಪುಸ್ತಕ ‘ದಿ ಸಟಾನಿಕ್ ವರ್ಸಸ್’ಅವರ ಕಲ್ಪನೆಯನ್ನು ಮೀರಿ ಗಮನ ಸೆಳೆಯಿತು. ಅವರ ವಿರುದ್ಧ ಫತ್ವಾ ಅಥವಾ ಧಾರ್ಮಿಕ ಆದೇಶವನ್ನು ಹುಟ್ಟುಹಾಕಿತು. ಇರಾನ್ ಕ್ರಾಂತಿಕಾರಿ ನಾಯಕ ಅಯತೊಲ್ಲಾ ರುಹೊಲ್ಲಾ ಖೊಮೇನಿ ಅವರು ಸಲ್ಮಾನ್ ರಶ್ದಿ ಅವರ ಹತ್ಯೆಗೆ ಕರೆ ನೀಡಿದ್ದರು. ಈ ಕಾದಂಬರಿಯನ್ನು ಕೆಲವು ಮುಸ್ಲಿಮರು ಪ್ರವಾದಿ ಮಹಮ್ಮದ್‌ಗೆ ತೋರಿದ ಅಗೌರವ ಎಂದು ಪರಿಗಣಿಸಿದ್ದರು.
ಧರ್ಮ ಆಚರಣೆ ಮಾಡದ ಭಾರತದ ಮುಸ್ಲಿಂ ದಂಪತಿಯ ಪುತ್ರನಾಗಿದ್ದ ರಶ್ದಿ, ನಾಸ್ತಿಕನಾಗಿದ್ದರು. ತಮ್ಮನ್ನು ಕೊಂದವರಿಗೆ ಬಹುಮಾನ ನೀಡುವುದಾಗಿ ಫತ್ವಾ ಹೊರಡಿಸಿದ್ದರಿಂದ ಅವರು ತಲೆಮರೆಸಿಕೊಳ್ಳುವಂತೆ ಮಾಡಿತ್ತು.
ಅವರ ಭಾಷಾಂತರಕಾರರು ಮತ್ತು ಪ್ರಕಾಶಕರ ಮೇಲೆ ಹತ್ಯೆಯ ಪ್ರಯತ್ನದ ನಂತರ ಅವರಿಗೆ ಬ್ರಿಟನ್ ಸರ್ಕಾರದಿಂದ ಪೊಲೀಸ್ ರಕ್ಷಣೆಯನ್ನು ನೀಡಲಾಗಿತ್ತು.
ಅವರು ಸುಮಾರು ಒಂದು ದಶಕವನ್ನು ತಲೆಮರೆಸಿಕೊಂಡೇ ಕಳೆದರು. ಪದೇ ಪದೇ ಮನೆಗಳನ್ನು ಬದಲಾಯಿಸುತ್ತಿದ್ದುದರಿಂದ ತಾವು ಎಲ್ಲಿ ವಾಸಿಸುತ್ತಿದ್ದೇವೆ ಎಂಬ ಬಗ್ಗೆ ಅವರು ಬೋಧನೆ ಮಾಡುತ್ತಿದ್ದ ಶಾಲೆಯ ಮಕ್ಕಳಿಗೆ ಹೇಳಲು ಸಾಧ್ಯವಾಗಿರಲಿಲ್ಲ.
1998ರಲ್ಲಿ ಇರಾನ್ ಸರ್ಕಾರವು ರಶ್ದಿ ಹತ್ಯೆ ಆದೇಶವನ್ನು ಬೆಂಬಲಿಸುವುದಿಲ್ಲ ಎಂದು ಹೇಳಿದ ನಂತರ ಸಾರ್ವಜನಿಕವಾಗಿ ಓಡಾಡಲು ಪ್ರಾರಂಭಿಸಿದ್ದರು.
‘ಬ್ರಿಡ್ಜೆಟ್ ಜೋನ್ಸ್ ಡೈರಿ’ಸಿನಿಮಾ ಮತ್ತು ಅಮೆರಿಕದ ದೂರದರ್ಶನ ಕಾರ್ಯಕ್ರಮ ‘ಸೈನ್ಫೆಲ್ಡ್’ನಲ್ಲಿ ಕಾಣಿಸಿಕೊಳ್ಳುವ ಮೂಲಕ ಅಂತರರಾಷ್ಟ್ರೀಯ ವಲಯದಲ್ಲಿ ಅವರು ಗುರುತಿಸಿಕೊಂಡಿದ್ದರು. ನಾಲ್ಕು ಬಾರಿ ಮದುವೆಯಾಗಿರುವ ಅವರಿಗೆ ಇಬ್ಬರು ಮಕ್ಕಳಿದ್ದಾರೆ.
ವಾಕ್ ಸ್ವಾತಂತ್ರ್ಯದ ಪ್ರತಿಪಾದಕರಾಗಿರುವ ಅವರು, 2015 ರಲ್ಲಿ ಪ್ಯಾರಿಸ್‌ನಲ್ಲಿ ಇಸ್ಲಾಮಿಸ್ಟ್‌ಗಳಿಂದ ತಮ್ಮ ಸಿಬ್ಬಂದಿ ಹತ್ಯೆಯಾದ ನಂತರ, ಫ್ರೆಂಚ್‌ನ ವಿಡಂಬನಾತ್ಮಕ ನಿಯತಕಾಲಿಕ ‘ಚಾರ್ಲಿ ಹೆಬ್ಡೊ’ ರಕ್ಷಣೆಗೆ ಗಟ್ಟಿಯಾಗಿ ನಿಂತಿದ್ದರು.
ಈ ನಿಯತಕಾಲಿಕೆಯು ಪ್ರಕಟಿಸಿದ್ದ ಮಹಮ್ಮದ್ ಅವರ ಕುರಿತಾದ ರೇಖಾಚಿತ್ರಗಳ ವಿರುದ್ಧ ಪ್ರಪಂಚದಾದ್ಯಂತದ ಮುಸ್ಲಿಮರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.
‘ಸ್ವಾತಂತ್ರ್ಯ ಮತ್ತು ದಬ್ಬಾಳಿಕೆ, ಅಪ್ರಾಮಾಣಿಕತೆ ಮತ್ತು ಮೂರ್ಖತನದ ವಿರುದ್ಧ ಯಾವಾಗಲೂ ಶಕ್ತಿಯಾಗಿರುವ ವಿಡಂಬನೆಯ ಕಲೆಯನ್ನು ನಾವೆಲ್ಲರೂ ರಕ್ಷಿಸಬೇಕಾಗಿದ್ದು, ನಾನು ‘ಚಾರ್ಲಿ ಹೆಬ್ಡೊ’ಜೊತೆ ನಿಲ್ಲುತ್ತೇನೆ’ಎಂದು ರಶ್ದಿ ಹೇಳಿದ್ದರು.
‘ಧರ್ಮವನ್ನು ಗೌರವಿಸುವುದೆಂದರೆ ಧರ್ಮದ ಬಗೆಗಿನ ಭಯ ಎಂಬುವಂತಾಗಿದೆ. ಇತರ ಎಲ್ಲ ವಿಚಾರಗಳಂತೆ ಧರ್ಮಗಳು ಸಹ ಟೀಕೆ, ವಿಡಂಬನೆ ಮತ್ತು ನಿರ್ಭೀತ ಅಗೌರವಕ್ಕೆ ಅರ್ಹವಾಗಿವೆ ಎಂದು ಅವರು ಹೇಳಿದ್ದರು.
ರಶ್ದಿ ಭಾಗವಹಿಸುತ್ತಿದ್ದ ಸಾಹಿತ್ಯಿಕ ಕಾರ್ಯಕ್ರಮಗಳ ವಿರುದ್ಧ ಬೆದರಿಕೆಗಳು ಮತ್ತು ಬಹಿಷ್ಕಾರಗಳು ಮುಂದುವರೆದಿದ್ದವು. 2007 ರಲ್ಲಿ ಇರಾನ್ ಮತ್ತು ಪಾಕಿಸ್ತಾನದಲ್ಲಿ ಪ್ರತಿಭಟನೆಗಳು ನಡೆದವು.
ಫತ್ವಾ, ರಶ್ದಿಯವರ ಬರವಣಿಗೆಯನ್ನು ನಿಗ್ರಹಿಸುವಲ್ಲಿ ವಿಫಲವಾಯಿತು. 'ಜೋಸೆಫ್ ಆ್ಯಂಟನ್' ಗುಪ್ತನಾಮದ ಮೂಲಕ ಅವರು ಬರವಣಿಗೆ ಮುಂದುವರಿಸಿದರು.
ಹಲವಾರು ಸಣ್ಣ ಕಥೆಗಳು, ಕಾಲ್ಪನಿಕವಲ್ಲದ ಮತ್ತು ಡಜನ್‌ಗಿಂತಲೂ ಹೆಚ್ಚು ಕಾದಂಬರಿಗಳನ್ನು ಅವರು ಬರೆದಿದ್ದಾರೆ. ಅವುಗಳಲ್ಲಿ ಇತ್ತೀಚೆಗೆ ಪ್ರಕಟವಾದ ಕಾದಂಬರಿ ಕಿಶಾಟ್ ’(2019) ಸಹ ಒಂದಾಗಿದೆ.
600ಕ್ಕೂ ಹೆಚ್ಚು ಪುಟಗಳಲ್ಲಿರುವ ‘ಮಿಡ್ ನೈಟ್ಸ್ ಚಿಲ್ಡ್ರನ್’ ಕೃತಿಯೂ ನಾಟಕ ಮತ್ತು ಚಲನಚಿತ್ರದ ಮೂಲಕವೂ ಗಮನ ಸೆಳೆದಿದೆ. 40 ಕ್ಕೂ ಹೆಚ್ಚು ಭಾಷೆಗಳಿಗೆ ಪುಸ್ತಕವನ್ನು ಅನುವಾದಿಸಲಾಗಿದೆ.
ಮುಂಬೈನಲ್ಲಿ ಜನಿಸಿದ ರಶ್ದಿಯವರು ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ಇತಿಹಾಸವನ್ನು ಅಧ್ಯಯನ ಮಾಡುವುದಕ್ಕೂ ಮೊದಲು, ಇಂಗ್ಲಿಷ್ ಬೋರ್ಡಿಂಗ್ ಸ್ಕೂಲ್‌ನಲ್ಲಿ ವ್ಯಾಸಂಗ ಮಾಡಿದ್ದರು.
ಆರಂಭದಲ್ಲಿ ಜಾಹೀರಾತು ವೃತ್ತಿ ಆರಂಭಿಸಿದ್ದ ರಶ್ದಿ, ಕ್ರೀಮ್ ಕೇಕ್‌ಗಳಿಗಾಗಿ ‘ನಾಟಿ ಬಟ್ ನೈಸ್’ಎಂಬ ಘೋಷಣೆಯನ್ನು ಬರೆದಿದ್ದರು. ಅದು ಸಾಮಾನ್ಯ ಜನರಿಗೆ ಹತ್ತಿರವಾಯಿತು.
ಇತ್ತೀಚಿನ ವರ್ಷಗಳಲ್ಲಿ ರಶ್ದಿ ಅತ್ಯಾಸಕ್ತಿಯ ಸಾಮಾಜಿಕ ಮಾಧ್ಯಮ ಬಳಕೆದಾರರಾಗಿದ್ದರು. ಫತ್ವಾ ವಿವಾದವು ಪ್ರೀ ಡಿಜಿಟಲ್ ಯುಗದಲ್ಲಿ ಇತ್ತು. ಈಗ ಇಲ್ಲ ಎಂದು ಸಂತೋಷ ವ್ಯಕ್ತಪಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.