ಮಾಸ್ಕೊ:ರಷ್ಯಾ, ಉಕ್ರೇನ್ ಮೇಲೆ ಆಕ್ರಮಣ ಮಾಡಲಿದೆ ಎಂಬ ಭೀತಿ ನಡುವೆ, ಉಕ್ರೇನ್ ಗಡಿಯ ಸಮೀಪವಿರುವ ಪ್ರದೇಶಗಳಲ್ಲಿ ರಷ್ಯಾದ ಮಿಲಿಟರಿಯ ಹೊಸ ಜಮಾವಣೆಯು ಉಪಗ್ರಹ ಚಿತ್ರಗಳಲ್ಲಿ ಕಂಡುಬಂದಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ನಿನ್ನೆ, ಉಕ್ರೇನ್‌ನಲ್ಲಿ ಪ್ರತ್ಯೇಕತಾವಾದಿಗಳನ್ನು ಬೆಂಬಲಿಸಲು ದೇಶದ ಹೊರಗೆ ಸೇನೆ ಬಳಸಲು ಅಧ್ಯಕ್ಷ ಪುಟಿನ್ ಅವರಿಗೆ ರಷ್ಯಾ ಸಂಸತ್ ಮಂಗಳವಾರ ಅನುಮತಿ ನೀಡಿತ್ತು.
ಉಪಗ್ರಹ ಚಿತ್ರಗಳ ಪ್ರಕಾರ, ಉಕ್ರೇನ್ ಗಡಿ ಬಳಿ 100 ಕ್ಕೂ ಹೆಚ್ಚು ವಾಹನಗಳು ಮತ್ತು ದಕ್ಷಿಣ ಬೆಲಾರಸ್‌ನ ಮೊಝೈರ್ ಬಳಿಯ ಸಣ್ಣ ಏರ್‌ಫೀಲ್ಡ್‌ನಲ್ಲಿ ಡಜನ್‌ಗಟ್ಟಲೆ ಸೈನಿಕರ ಟೆಂಟ್‌ಗಳನ್ನು ನಿರ್ಮಿಸಲಾಗಿದೆ. ಉಕ್ರೇನ್ ಗಡಿಯಿಂದ ಏರ್‌ಫೀಲ್ಡ್ 40 ಕಿಲೋಮೀಟರ್‌ಗಿಂತಲೂ ಕಡಿಮೆ ದೂರದಲ್ಲಿದೆ.
ಪಶ್ಚಿಮ ರಷ್ಯಾದಲ್ಲಿ ಪೊಚೆಪ್ ಬಳಿ ಹೆಚ್ಚುವರಿ ನಿಯೋಜನೆಗಾಗಿ ದೊಡ್ಡ ಪ್ರದೇಶವನ್ನು ತೆರವುಗೊಳಿಸಲಾಗುತ್ತಿದೆ. ಬೆಲ್ಗೊರೊಡ್‌ನ ಪಶ್ಚಿಮ ಹೊರವಲಯದಲ್ಲಿರುವ ಮಿಲಿಟರಿ ಗ್ಯಾರಿಸನ್‌ನಲ್ಲಿ ಹೊಸ ಆಸ್ಪತ್ರೆಯನ್ನು ಸ್ಥಾಪಿಸಲಾಗಿದೆ. ಉಕ್ರೇನ್ ಗಡಿಯಿಂದ 20 ಕಿಲೋಮೀಟರ್‌ಗಿಂತ ಕಡಿಮೆ ದೂರದಲ್ಲಿರುವ ಬೆಲ್ಗೊರೊಡ್‌ನ ನೈಋತ್ಯದ ಗ್ರಾಮೀಣ ಪ್ರದೇಶಗಳಲ್ಲಿ ಸೇನಾಪಡೆಗಳು ಮತ್ತು ಯದ್ಧೋಪಕರಣಗಳನ್ನು ನಿಯೋಜಿಸಲಾಗಿದೆ.
ಟ್ಯಾಂಕ್‌ಗಳು, ಫಿರಂಗಿಗಳು ಮತ್ತು ದೊಡ್ಡ ಯುದ್ಧೋಪಕರಣಗಳನ್ನು ಸಾಗಿಸಲು ಬಳಸಲಾಗುವ ದೊಡ್ಡ ಸಲಕರಣೆ ಟ್ರಾನ್ಸ್‌ಪೋರ್ಟರ್ (ಎಚ್‌ಇಟಿಗಳು) ಉಕ್ರೇನ್‌ನ ಗಡಿಯ ಪೂರ್ವಕ್ಕೆ ಸುಮಾರು 40 ಕಿಲೋಮೀಟರ್ ದೂರದಲ್ಲಿ ಕಂಡುಬಂದಿವೆ.
ಇತ್ತೀಚೆಗೆ, ರಷ್ಯಾ, ಉಕ್ರೇನ್ ಗಡಿಯ ಬಳಿ 1,50,000 ಕ್ಕೂ ಹೆಚ್ಚು ಸೈನಿಕರ ಜಮಾವಣೆ ಮಾಡಿದೆ ಎಂದು ಅಮೆರಿಕ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳು ಅಂದಾಜಿಸಿದ್ದು, ಅಮೆರಿಕದ ಪ್ರತಿದಾಳಿಯು ಸನ್ನಿಹಿತವಾಗಿದೆ ಎಂದು ಎಚ್ಚರಿಸಿದೆ.
ಇದಕ್ಕೆ ಪ್ರತಿಯಾಗಿ ಅಮೆರಿಕ ಸೇರಿದಂತೆ ಹಲವು ದೇಶಗಳು ರಷ್ಯಾದ ಮೇಲೆ ನಿರ್ಬಂಧ ಹೇರಿವೆ. ಅಮೆರಿಕ ತನ್ನ ಸೈನ್ಯವನ್ನು ಪೂರ್ವ ಯುರೋಪಿನ ನ್ಯಾಟೋ ಸದಸ್ಯ ರಾಷ್ಟ್ರಗಳಿಗೆ ಕಳುಹಿಸುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.