ಇಸ್ಲಾಮಾಬಾದ್: ಪಾಕಿಸ್ತಾನದಿಂದ ಕೊಲ್ಲಿ ರಾಷ್ಟ್ರಕ್ಕೆ ಬರುತ್ತಿರುವ ಭಿಕ್ಷುಕರ ಸಂಖ್ಯೆಗೆ ಹೌಹಾರಿರುವ ಸೌದಿ ಅರೇಬಿಯಾ, ಧಾರ್ಮಿಕ ಯಾತ್ರೆಗೆ ನೀಡಲಾಗುವ ಉಮ್ರಾ ವಿಸಾದಡಿಯಲ್ಲಿ ಸೌದಿ ಪ್ರವೇಶಿಸುತ್ತಿರುವ ಇವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪಾಕಿಸ್ತಾಣಕ್ಕೆ ಹೇಳಿದೆ.
ಈ ಕುರಿತು ಪಾಕಿಸ್ತಾನದ ಧಾರ್ಮಿಕ ವ್ಯವಹಾರಗಳ ಸಚಿವಾಲಯದ ಮೂಲಗಳು ಮಾಹಿತಿ ನೀಡಿರುವುದಾಗಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್ ಸುದ್ದಿಸಂಸ್ಥೆಯು ವರದಿ ಮಾಡಿದೆ.
‘ಒಂದೊಮ್ಮೆ ಪಾಕಿಸ್ತಾನವು ಇವರನ್ನು ನಿಯಂತ್ರಿಸದಿದ್ದರೆ, ಅಲ್ಲಿಂದ ಬರುವ ಹಜ್ ಯಾತ್ರಿಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ’ ಎಂದು ಸೌದಿ ಸರ್ಕಾರ ಎಚ್ಚರಿಕೆ ನೀಡಿದೆ.
‘ಈ ಎಚ್ಚರಿಕೆಯ ಬೆನ್ನಲ್ಲೇ ‘ಉಮ್ರಾ ಕಾಯ್ದೆ’ಯನ್ನು ಪಾಕಿಸ್ತಾನ ಜಾರಿಗೆ ತರಲು ನಿರ್ಧರಿಸಿದೆ. ಇದರ ಮೂಲಕ ಹಜ್ ಯಾತ್ರೆ ಆಯೋಜಿಸುವ ಟ್ರಾವೆಲ್ ಏಜೆಂಟರನ್ನು ನಿರ್ಬಂಧಿಸಲು ಪಾಕಿಸ್ತಾನ ಸರ್ಕಾರ ಸಿದ್ಧತೆ ನಡೆಸಿದೆ. ಇವರೆಲ್ಲರನ್ನೂ ಕಾನೂನಿನ ಕಣ್ಗಾವಲಿಗೆ ತರಲು ಯೋಜನೆ ರೂಪಿಸಿದೆ’ ಎಂದು ವರದಿಯಾಗಿದೆ.
ಇದರೊಂದಿಗೆ ಧಾರ್ಮಿಕ ಯಾತ್ರೆಯ ಹೆಸರಿನಲ್ಲಿ ಸೌದಿ ಅರೇಬಿಯಾಗೆ ಭಿಕ್ಷುಕರು ಪ್ರಯಾಣಿಸುವುದನ್ನು ತಡೆಯಲು ಸೂಕ್ತ ಮಾರ್ಗೋಪಾಯ ನೀಡುವಂತೆ ಸಚಿವಾಲಯವು ಸರ್ಕಾರವನ್ನು ಕೋರಿದೆ.
ಇದಕ್ಕೂ ಮೊದಲು ಸೌದಿ ರಾಯಭಾರಿ ನವಾಫ್ ಬಿನ್ ಸೈದ್ ಅಹ್ಮದ್ ಅಲ್ ಮಲ್ಕಿ ಅವರೊಂದಿಗೆ ಸಭೆ ನಡೆಸಿದ ಪಾಕಿಸ್ತಾನದ ಆಂತರಿಕ ಸಚಿವ ಮೊಹಸಿನ್ ನಖ್ವಿ, ಭಿಕ್ಷುಕರನ್ನು ಸೌದಿಗೆ ಕಳುಹಿಸುವ ಮಾಫಿಯಾ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವ ಭರವಸೆಯನ್ನು ನೀಡಿದರು. ಜತೆಗೆ, ಈ ಜಾಲವನ್ನು ಭೇದಿಸುವಂತೆ ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿಗೆ ಸಚಿವ ಮೊಹಸಿನ್ ಸೂಚನೆ ನೀಡಿದರು.
ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಹಾಗೂ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಗಳ ದಾಖಲೆಗಳ ಪ್ರಕಾರ ವಿದೇಶಗಳಲ್ಲಿರುವ ಭಿಕ್ಷುಕರಲ್ಲಿ ಶೇ 90ರಷ್ಟು ಜನ ಪಾಕಿಸ್ತಾನಕ್ಕೆ ಸೇರಿದವರು ಎಂದಿವೆ.
ತಿಂಗಳ ಹಿಂದೆ ಸೌದಿ ಅರೇಬಿಯಾದಲ್ಲಿ ಪತ್ತೆಯಾದ 11 ಭಿಕ್ಷುಕರನ್ನು ಆ ದೇಶ ಕರಾಚಿಗೆ ಕಳುಹಿಸಿದೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ 16 ಭಿಕ್ಷುಕರನ್ನು ಕಳುಹಿಸಿತ್ತು.
ಮೆಕ್ಕಾದ ಮಸೀದಿ ಬಳಿ ಜೇಬುಗಳ್ಳತನದಲ್ಲಿ ಸಿಕ್ಕಿಹಾಕಿಕೊಂಡವರಲ್ಲಿ ಪಾಕಿಸ್ತಾನಕ್ಕೆ ಸೇರಿದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇವೆಲ್ಲವೂ ಸೌದಿ ಅರೇಬಿಯಾದ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.