ADVERTISEMENT

ಪತ್ರಕರ್ತ ಜಮಾಲ್‌ ಖಶೋಗ್ಗಿ ಹತ್ಯೆ: ಐವರಿಗೆ ಮರಣದಂಡನೆ

ಏಜೆನ್ಸೀಸ್
Published 23 ಡಿಸೆಂಬರ್ 2019, 17:04 IST
Last Updated 23 ಡಿಸೆಂಬರ್ 2019, 17:04 IST
ಜಮಾಲ್‌ ಖಶೋಗ್ಗಿ
ಜಮಾಲ್‌ ಖಶೋಗ್ಗಿ   

ರಿಯಾದ್‌:ಕಳೆದ ಅಕ್ಟೋಬರ್‌ನಲ್ಲಿ ಇಸ್ತಾಂಬುಲ್‌ನಲ್ಲಿ ನಡೆದ ಪತ್ರಕರ್ತ ಜಮಾಲ್‌ ಖಶೋಗ್ಗಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಐವರಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ ಎಂದು ಸೌದಿ ಅರೇಬಿಯಾ ಪಬ್ಲಿಕ್‌ ಪ್ರಾಸಿಕ್ಯೂಟರ್‌ ತಿಳಿಸಿದ್ದಾರೆ.

‘ಖಶೋಗ್ಗಿ ಹತ್ಯೆ ಪೂರ್ವನಿಯೋಜಿತವಲ್ಲ ಎಂದು ದೃಢಪಟ್ಟಿದೆ’ ಎಂದು ಪ್ರಾಸಿಕ್ಯೂಟರ್‌ ಶಲಾನ್‌ ಅಲ್‌ ಶಲಾನ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಇಬ್ಬರು ನಿರ್ದೋಷಿಗಳು:‘ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅಪರಾಧಿಗಳಿಗೆ ಒಟ್ಟು 24 ವರ್ಷಗಳ ಜೈಲು ಶಿಕ್ಷೆಯಾಗಿದ್ದು, ತನಿಖೆಗೆ ಒಳಪಟ್ಟಿದ್ದ ಗುಪ್ತಚರ ವಿಭಾಗದ ಸಹಾಯಕ ಮುಖ್ಯಸ್ಥ ಅಹಮ್ಮದ್‌ ಅಲ್‌ ಅಸ್ಸಿರಿ ಹಾಗೂ ಸೌದಿ ದೊರೆ ಮೊಹಮ್ಮದ್‌ ಬಿನ್‌ ಸಲ್ಮಾನ್‌ ಸಲಹೆಗಾರ ಸೌದ್‌ ಅಲ್‌ ಖತಾನಿ ಅವರನ್ನು ಸಾಕ್ಷ್ಯಾಧಾರಗಳ ಕೊರತೆಯಿಂದ ಬಿಡುಗಡೆಗೊಳಿಸಲಾಗಿದೆ’ ಎಂದು ಪ್ರಕಟಣೆಯಲ್ಲಿ ಪ್ರಾಸಿಕ್ಯೂಟರ್‌ ತಿಳಿಸಿದ್ದಾರೆ.

ADVERTISEMENT

‘ವಾಷಿಂಗ್ಟನ್‌ ಪೋಸ್ಟ್‌’ನ ಸೌದಿಪ್ರತಿನಿಧಿಯಾಗಿದ್ದ 59 ವರ್ಷದ ಖಶೋಗ್ಗಿ, ಕಳೆದ ಅಕ್ಟೋಬರ್ 2ರಂದು ಟರ್ಕಿಯ ಇಸ್ತಾಂಬುಲ್‌ನಲ್ಲಿ ಸೌದಿ ರಾಯಭಾರಿ ಕಚೇರಿ ಪ್ರವೇಶಿಸಿದ್ದಾಗ ಹತ್ಯೆಯಾಗಿದ್ದರು. 15 ಜನರಿದ್ದ ತಂಡವೊಂದು ಅವರನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, ದೇಹವನ್ನು ತುಂಡು ತುಂಡಾಗಿ ಕತ್ತರಿಸಿತ್ತು ಎಂದು ಟರ್ಕಿ ಅಧಿಕಾರಿಗಳು ತಿಳಿಸಿದ್ದರು. ಖಶೋಗ್ಗಿ ಮೃತದೇಹ ಪತ್ತೆಯಾಗಿರಲಿಲ್ಲ.

ಸೌದಿ ಸರ್ಕಾರದ ಸಲಹೆಗಾರರಾಗಿ ಖಶೋಗ್ಗಿ ಕಾರ್ಯನಿರ್ವಹಿಸಿದ್ದರು. ದೊರೆಯಾಗಿ ಮೊಹಮ್ಮದ್‌ ಅಧಿಕಾರ ಸ್ವೀಕರಿಸಿದ ಬಳಿಕ ಅವರ ನೀತಿಯನ್ನು ಕಟುವಾಗಿ ಟೀಕಿಸುತ್ತಿದ್ದರು. ಅರಬ್‌ ಹಾಗೂ ಪಾಶ್ಚಿಮಾತ್ಯ ಮಾಧ್ಯಮಗಳ ಜತೆಗೂ ತಮ್ಮ ಅಭಿಪ್ರಾಯಗಳನ್ನು ಹೇಳಿಕೊಳ್ಳುತ್ತಿದ್ದರು. ಹೀಗಾಗಿ ಹತ್ಯೆಪ್ರಕರಣದಲ್ಲಿ ಸೌದಿ ದೊರೆ ಮೊಹಮ್ಮದ್‌ ಬಿನ್‌ ಸಲ್ಮಾನ್‌ ಹೆಸರೂ ಕೇಳಿ ಬಂದಿತ್ತು.

ಮುಂದಿನ ವರ್ಷ ರಿಯಾದ್‌ನಲ್ಲಿ ಜಿ20 ಶೃಂಗಸಭೆ ಹಿನ್ನೆಲೆಯಲ್ಲಿಮರಣದಂಡನೆ ಆದೇಶ ಮಹತ್ವ ಪಡೆದಿದೆ. ಈ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ತನ್ನ ವರ್ಚಸ್ಸನ್ನು ಮತ್ತೆ ಹೆಚ್ಚಿಸಿಕೊಳ್ಳಲು ಸೌದಿ ಪ್ರಯತ್ನಿಸುತ್ತಿದೆ ಎನ್ನಲಾಗಿದೆ.

‘ಹತ್ಯೆ ರೂವಾರಿ ಅಸ್ಸಿರಿ’

ಖಶೋಗ್ಗಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಸ್ಸಿರಿ, ಖತನಿ, ಸೌದಿ ದೊರೆಯ ಗುಪ್ತಚರ ವಿಭಾಗದ ಮಹೆರ್‌ ಮುತ್ರೆಬ್‌, ವಿಧಿ ವಿಜ್ಞಾನ ತಜ್ಞ ಸಲ್ಹಾ ಎಲ್‌ ತುಬೈಗಿ, ಸೌದಿ ರಾಯಲ್‌ ಗಾರ್ಡ್‌ ಸದಸ್ಯ ಫಹಾದ್‌ ಅಲ್‌ ಬಲವಿ ಸೇರಿದಂತೆ 11 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.ವಿಚಾರಣೆ ಸಂದರ್ಭದಲ್ಲಿ ‘ನಾವೆಲ್ಲರೂ ಅಸ್ಸಿರಿ ನೀಡಿದ ಆದೇಶ ಪಾಲಿಸುತ್ತಿದ್ದೆವು’ ಎಂದು ಆರೋಪಿಗಳು ಹೇಳಿದ್ದರು. ಈ ಮೂಲಕ ಅಸ್ಸಿರಿ ‘ಹತ್ಯೆಯ ರೂವಾರಿ’ ಎಂದು ಉಲ್ಲೇಖಿಸಿದ್ದರು.

11 ಜನ ಆಪಾದಿತರ ಪೈಕಿ ಯಾರ ಹೆಸರನ್ನೂ ಪ್ರಾಸಿಕ್ಯೂಟರ್‌ ಅವರು ಹೊರಡಿಸಿರುವ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿಲ್ಲ. ಹೀಗಾಗಿ ಯಾರಿಗೆಲ್ಲ ಮರಣದಂಡನೆ ಶಿಕ್ಷೆಯಾಗಿದೆ ಎನ್ನುವುದರ ಖಚಿತ ಮಾಹಿತಿ ಇಲ್ಲ. ಸಾರ್ವಜನಿಕ ಸ್ಥಳದಲ್ಲಿ ತಲೆಕಡಿಯುವ ಮೂಲಕ ಸೌದಿ ಅರೇಬಿಯಾದಲ್ಲಿ ಮರಣದಂಡನೆ ಶಿಕ್ಷೆ ವಿಧಿಸಲಾಗುತ್ತದೆ. ಆದರೆ ಅಪರಾಧಿಗಳಿಗೆ ಮೇಲ್ಮನವಿ ಸಲ್ಲಿಸುವ ಅವಕಾಶವೂ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.