ವಾಷಿಂಗ್ಟನ್: ವಾಷಿಂಗ್ಟನ್ ಪೋಸ್ಟ್ ಅಂಕಣಕಾರ ಜಮಾಲ್ ಖಶೋಗ್ಗಿ ಅವರ ಹತ್ಯೆಯಲ್ಲಿ ತಮ್ಮ ಕೈವಾಡವಿರುವ ಬಗ್ಗೆ ಸೌದಿ ಅರೇಬಿಯಾದ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಅವರು ಅಂಗೀಕರಿಸಿದ್ದು, ಅಮೆರಿಕದ ಗುಪ್ತಚರ ವರದಿ ಇದೇ ಶುಕ್ರವಾರದೊಳಗೆ ಬಹಿರಂಗಗೊಳ್ಳುವ ಸಾಧ್ಯತೆ ಇದೆ ಎಂದು ಮೂಲವೊಂದು ತಿಳಿಸಿದೆ.
2018ರ ಅಕ್ಟೋಬರ್‌ನಲ್ಲಿ ಇಸ್ತಾಂಬುಲ್‌ನ ಸೌದಿ ಕಾನ್ಸುಲೇಟ್‌ನೊಳಗೆ ಖಶೋಗ್ಗಿ ಹತ್ಯೆಯ ನಂತರ ಸಿಐಎ ಮತ್ತು ಇತರ ಗುಪ್ತಚರ ಸಂಸ್ಥೆಗಳಿಂದ ವರ್ಗೀಕೃತ ಗುಪ್ತಚರ ವರದಿಯನ್ನು ಸಿದ್ಧಪಡಿಸಲಾಗಿದೆ. ವರದಿ ಬಹಿರಂಗವಾದ ಬಳಿಕ ಹತ್ಯೆಯಲ್ಲಿ ಪ್ರಿನ್ಸ್ ಮೊಹಮ್ಮದ್ ಪಾತ್ರದ ಬಗ್ಗೆ ಎಷ್ಟು ವಿವರಗಳು ಇರುತ್ತವೆ ಎಂಬುದು ತಿಳಿಯಲಿದೆ ಎಂದು ಮಾಹಿತಿ ನೀಡಿರುವ ಹೆಸರು ಬಹಿರಂಗಪಡಿಸಲು ಇಚ್ಛಿಸದ ವ್ಯಕ್ತಿಯು ತಿಳಿಸಿದ್ದಾರೆ ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ.
ರಾಷ್ಟ್ರೀಯ ಗುಪ್ತಚರ ನಿರ್ದೇಶಕರ ಕಚೇರಿಯಿಂದ ಸಂಗ್ರಹಿಸಲ್ಪಟ್ಟ ವರದಿಯನ್ನು ಬಿಡುಗಡೆ ಮಾಡುವ ನಿರ್ಧಾರವು ವಿಶ್ವದ ಅತಿದೊಡ್ಡ ತೈಲ ರಫ್ತುದಾರರಾದ ಸೌದಿ ಅರೇಬಿಯಾದೊಂದಿಗಿನ ಸಂಬಂಧವನ್ನು ಮರು ಸ್ಥಾಪಿಸುವ ಅಮೆರಿಕದ ಬೈಡನ್ ಆಡಳಿತದ ನಿರ್ಧಾರದ ಮೇಲೆ ಆಧರಿಸಿದೆ.
ವರದಿಯ ಪ್ರಕಟಣೆಗೂ ಮುನ್ನವೇ, ಅಮೆರಿಕ ಅಧ್ಯಕ್ಷ ಜೋ ಬೈಡನ್ ಗುರುವಾರ ಸೌದಿ ಅರೇಬಿಯಾದ ರಾಜ ಸಲ್ಮಾನ್ ಅವರಿಗೆ ದೂರವಾಣಿ ಕರೆ ಮಾಡಿ ಮಾತುಕತೆ ನಡೆಸಿದ್ದಾರೆ. ಈ ಸಂದರ್ಭ ಬೈಡನ್ ಪ್ರಾದೇಶಿಕ ಭದ್ರತೆ ಮತ್ತು ಯೆಮನ್‌ನಲ್ಲಿನ ಯುದ್ಧವನ್ನು ಕೊನೆಗೊಳಿಸುವ ಅಮೆರಿಕ ಮತ್ತು ವಿಶ್ವಸಂಸ್ಥೆಯ ಹೊಸ ಪ್ರಯತ್ನಗಳ ಬಗ್ಗೆ ಚರ್ಚಿಸಿದರು. “ಜಾಗತಿಕ ಮಾನವ ಹಕ್ಕುಗಳು ಮತ್ತು ಕಾನೂನಿನ ನಿಯಮಗಳ ಮೇಲೆ ಅಮೆರಿಕವು ಇರಿಸಿರುವ ಮಹತ್ವವನ್ನು ಧೃಡೀಕರಿಸಿದೆ” ಎಂದು ಶ್ವೇತಭವನ ಹೇಳಿಕೆಯಲ್ಲಿ ತಿಳಿಸಿದೆ.
ಹತ್ಯೆಯಲ್ಲಿ ತಮ್ಮ ಕೈವಾಡವನ್ನು ರಾಜಕುಮಾರ ಮೊಹಮ್ಮದ್ ನಿರಾಕರಿಸಿದ್ದಾರೆ, ಆದರೆ ದೇಶದ ವಾಸ್ತವಿಕ ಆಡಳಿತಗಾರನಾಗಿ ಸಾಂಕೇತಿಕ ಹೊಣೆ ಹೊರುತ್ತೇನೆ ಎಂದು ಹೇಳಿದ್ದಾರೆ. ಕೆಲ ರಾಕ್ಷಸ ಏಜೆಂಟರು ಈ ಕೊಲೆ ಮಾಡಿದ್ದಾರೆ ಎಂದು ಸೌದಿ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.