ರಿಯಾದ್: ಸೌದಿ ಅರೇಬಿಯಾದಲ್ಲಿನ ಎರಡು ತೈಲ ಸಂಸ್ಕರಣಾ ಘಟಕಗಳ ಮೇಲೆ ಯೆಮನ್‌ನ ಹೌತಿ ಬಂಡುಕೋರರು ಡ್ರೋನ್ ದಾಳಿ ನಡೆಸಿರುವ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ತೈಲ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿದೆ.
ಇದನ್ನೂ ಓದಿ:ತೈಲ ಘಟಕಗಳ ಮೇಲೆ ಡ್ರೋನ್ ದಾಳಿ
‘ದಾಳಿಗೆ ತುತ್ತಾಗಿರುವ ಬುಖ್ಯಾಖ್ ಹಾಗೂ ಖುರಾಯಿಸ್‌ನಲ್ಲಿನ ತೈಲ ಸಂಸ್ಕರಣಾ ಘಟಕಗಳು ಸೌದಿ ಅರಾಮ್ಕೊ ತೈಲ ಕಂಪನಿಗೆ ಸೇರಿವೆ. ದಾಳಿಯ ಪರಿಣಾಮತೈಲ ಉತ್ಪಾದನೆ ಅಥವಾ ರಫ್ತು ಮೇಲೆ ಪರಿಣಾಮವಾಗುವ ಸಾಧ್ಯತೆಗಳಿವೆ ಎಂದು ಸರ್ಕಾರಿ ವಕ್ತಾರರು ಅಭಿಪ್ರಾಯಪಟ್ಟಿದ್ದಾರೆ.
ಡ್ರೋನ್ ದಾಳಿಯಿಂದ ತೈಲ ಘಟಕಗಳಿಗೆ ಹಾನಿಯಾಗಿದ್ದು ಅವುಗಳನ್ನು ಪುನಶ್ಚೇತನಗೊಳಿಸುವ ಕಾರ್ಯ ನಡೆಯುತ್ತಿದ್ದು ಎರಡು ದಿನಗಳ ಬಳಿಕ ತೈಲ ಉತ್ಪಾದನೆಯ ಕುರಿತಂತೆ ಅಧಿಕೃತ ಪ್ರಕಟಣೆ ಹೊರಡಿಸಲಾಗುವುದು ಎಂದು ಅರಾಮ್ಕೊ ತೈಲ ಕಂಪನಿಯ ಸಿಇಒ ಅಮೀನ್ ನಾಸೀರ್ ತಿಳಿಸಿದ್ದಾರೆ.
ಬುಖ್ಯಾಖ್‌ನ ಘಟಕದಲ್ಲಿ ದಿನಕ್ಕೆ 70 ಲಕ್ಷ ಬ್ಯಾರೆಲ್‌ವರೆಗೆ ಹಾಗೂ ಖುರಾಯಿಸ್‌ನ ಘಟಕದಲ್ಲಿ ದಿನಕ್ಕೆ 10 ಲಕ್ಷ ಬ್ಯಾರೆಲ್‌ಗೂ ಹೆಚ್ಚು ಪ್ರಮಾಣದ ಕಚ್ಚಾತೈಲವನ್ನು ಸಂಸ್ಕರಿಸಲಾಗುತ್ತದೆ. ‘ದಾಳಿಯಿಂದಾಗಿ ಭಾರಿ ಪ್ರಮಾಣದಲ್ಲಿ ಬೆಂಕಿ ಹಬ್ಬಿಕೊಂಡಿತ್ತು. ಕೈಗಾರಿಕಾ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಿ, ಬೆಂಕಿಯನ್ನು ಹತೋಟಿಗೆ ತಂದಿದ್ದು ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಸೌದಿ ಅರೇಬಿಯಾ ಸಚಿವಾಲಯ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.