ಹ್ಯೂಸ್ಟನ್:ಕೋವಿಡ್ 19ಸಾಂಕ್ರಾಮಿಕ ರೋಗದ ವಿರುದ್ಧ ಭಾರತ ಮತ್ತು ಅಮೆರಿಕ ಕೈಗೊಂಡಿರುವ ಸಂಶೋಧನೆಗಳಿಂದಾಗಿಉಭಯ ದೇಶಗಳ ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳಿಗೆ ವಿಪುಲ ಅವಕಾಶಗಳು ಒದಗಿ ಬಂದಿವೆ ಎಂದುಭಾರತೀಯ ರಾಯಭಾರಿ ತರಣ್‌ಜಿತ್ ಸಿಂಗ್ ಸಂಧು ಅಭಿಪ್ರಾಯಪಟ್ಟಿದ್ದಾರೆ.
ಇಂಡಿಯಾ– ಅಮೆರಿಕ ಸೈನ್ಸ್ ಮತ್ತು ಟೆಕ್ನಾಲಜಿ ಎಂಡೋಮೆಂಟ್ ಫಂಡ್ (ಐಯುಎಸ್‌ಟಿಇಎಫ್) ಭಾಗವಾಗಿ ಕೋವಿಡ್ 19 ಲಸಿಕೆಯ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಗಳಲ್ಲಿ ನಡೆಯುತ್ತಿರುವ ಸಂಶೋಧನೆಗಳಲ್ಲಿ ಎರಡೂ ದೇಶಗಳ ಸಂಶೋಧಕರಿಗೆ ತಮ್ಮ ಕಾರ್ಯವನ್ನು ವಿಸ್ತರಿಸಲು ಉತ್ತಮ ಅವಕಾಶಗಳು ದೊರೆತಿವೆ ಎಂದು ಅವರು ತಿಳಿಸಿದ್ದಾರೆ.
‘ಆರೋಗ್ಯ ರಕ್ಷಣೆ ಮತ್ತು ವೈದ್ಯಕೀಯ ಸಂಶೋಧನೆಯಲ್ಲಿ ಭಾರತ–ಅಮೆರಿಕ ಪಾಲುದಾರಿಕೆ’ ಶೀರ್ಷಿಕೆಯಡಿ ನಡೆದ ವೆಬಿನಾರ್‌ವೊಂದರಲ್ಲಿ ಮಾತನಾಡಿದ ಅವರು
‘ಕೊರೊನಾ ಸೋಂಕಿನ ಆರಂಭದ ದಿನಗಳಿಂದಲೂ ಉಭಯ ದೇಶಗಳ ವಿಜ್ಞಾನಿಗಳು ಮತ್ತು ಸಂಸ್ಥೆಗಳು ತುಂಬಾ ಕ್ರಿಯಾಶೀಲವಾಗಿ ಮಾಹಿತಿ ವಿನಿಯಮ ಮಾಡಿಕೊಳ್ಳುತ್ತಿವೆ. ಈಗ ಐಯುಎಸ್‌ಟಿಇಎಫ್ ಭಾಗವಾಗಿ ಅಭಿವೃದ್ಧಿಪಡಿಸಲಾಗುತ್ತಿರುವ ಕೋವಿಡ್ 19 ವರ್ಚುವಲ್ ನೆಟ್‌ವರ್ಕ್ಸ್ ನಲ್ಲಿ ಭಾರತ ಮತ್ತು ಅಮೆರಿಕದ ವಿಜ್ಞಾನಿಗಳು– ಎಂಜಿನಿಯರ್‌ಗಳು, ಈಗಿರುವ ಮೂಲಸೌಕರ್ಯ, ಹಣಕಾಸಿನ ವ್ಯವಸ್ಥೆಯಲ್ಲೇ ಜಂಟಿಯಾಗಿ ಸಂಶೋಧನಾ ಚಟುವಟಿಕೆಗಳನ್ನು ನಡೆಸಬಹುದು’ ಎಂದು ಹೇಳಿದ್ದಾರೆ.
ಅಮೆರಿಕ ಮತ್ತು ಭಾರತೀಯ ಸಂಶೋಧಕರು, ಉದ್ಯಮಿಗಳ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸುವ ತಂತ್ರಜ್ಞಾನವನ್ನು ‘ವಾಣಿಜ್ಯೀಕರಣ’ಗೊಳಿಸುವುದು ಮತ್ತು ಇದಕ್ಕಾಗಿ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಬೆಂಬಲಿಸುವುದು ಐಯುಎಸ್‌ಟಿಇಎಫ್ ಉದ್ದೇಶ ಎಂದು ಸಂಧು ತಿಳಿಸಿದ್ದಾರೆ.
ಭಾರತ, ಈಗಾಗಲೇ ಅಮೆರಿಕದ ಖಾಸಗಿ ವಲಯದೊಂದಿಗೆ ಕೋವಿಡ್ 19 ಲಸಿಕೆ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದೆ. ಭಾರತ, ಅಮೆರಿಕದ ಕಂಪನಿಗಳು ಮತ್ತು ಸಂಸ್ಥೆಗಳ ಸಹಯೋಗದಲ್ಲಿ ಲಸಿಕೆ ಅಭಿವೃದ್ಧಿಗಾಗಿ ಮೂರು ಯೋಜನೆಗಳು ಚಾಲ್ತಿಯಲ್ಲಿವೆ’ ಎಂದು ಅವರು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.