ಟೋಕಿಯೊ (ಪಿಟಿಐ):ವಿಜ್ಞಾನಿಗಳು 1,800ಕ್ಕೂ ಹೆಚ್ಚು ಹೊಸ ನಕ್ಷತ್ರಗಳನ್ನು ಅಥವಾ ಸೂಪರ್‌ನೋವಾಗಳನ್ನು ಪತ್ತೆ ಹಚ್ಚಿದ್ದಾರೆ. ಇದರಿಂದ ಬ್ರಹ್ಮಾಂಡವು ಯಾವ ರೀತಿ ಬದಲಾಗುತ್ತಿದೆ ಅಥವಾ ವಿಸ್ತರಿಸುತ್ತಿದೆ ಎಂಬುದನ್ನು ತಿಳಿಯಲು ಸಾಧ್ಯವಾಗುತ್ತದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.
ಜಪಾನ್‌ನಲ್ಲಿನ ಟೋಕಿಯೊ ವಿಶ್ವವಿದ್ಯಾಲಯ ಹಾಗೂ ಕಾವ್ಲಿ ಗಣಿತ ಮತ್ತು ಭೌತವಿಜ್ಞಾನ ಸಂಸ್ಥೆಯ ಸಂಶೋಧಕರು ಜಗತ್ತಿನ ಅತ್ಯುತ್ಕೃಷ್ಟ ಡಿಜಿಟಲ್ ಕ್ಯಾಮೆರಾಗಳು ಮತ್ತು ದೂರದರ್ಶಕಗಳ ಸಹಾಯದಿಂದ ತೆಗೆದ ಚಿತ್ರಗಳ ಆಧಾರದ ಮೇಲೆ ಈ ಕುರಿತು ವರದಿ ನೀಡಿದ್ದಾರೆ.
800 ಜ್ಯೋತಿರ್‌ವರ್ಷಗಳ ದೂರದಲ್ಲಿರುವ 58 ಬಗೆಯ ಐಎ (ಎ ದರ್ಜೆಯ) ಸೂಪರ್‌ನೋವಾಗಳು ಈ ಹೊಸ ನಕ್ಷತ್ರಗಳ ಪಟ್ಟಿಯಲ್ಲಿವೆ. ಹೆಚ್ಚು ಪ್ರಕಾಶಮಾನವಾದ ನಕ್ಷತ್ರಗಳನ್ನು ಐಎ ಸೂಪರ್‌ನೋವಾಗಳು ಎಂದು ಹೇಳಬಹುದು. ನಕ್ಷತ್ರಗಳು ಹೊಂದಿರುವ ಬೆಳಕು ಅಥವಾ ಪ್ರಕಾಶದ ಆಧಾರದ ಮೇಲೆ ಅದು ಭೂಮಿಯಿಂದ ಎಷ್ಟು ದೂರದಲ್ಲಿದೆ ಎಂದು ಗುರುತಿಸಲಾಗುತ್ತದೆ.
ದೈತ್ಯ ನಕ್ಷತ್ರಗಳು ಅಂತ್ಯವಾಗುವುದು ಸೂಪರ್‌ನೋವಾ ಮೂಲಕ. ನಕ್ಷತ್ರವೊಂದು ಅಂತ್ಯವಾಗುವುದಕ್ಕೂ ಒಂದು ತಿಂಗಳಿಂದ ಆರು ತಿಂಗಳ ನಡುವಿನ ಅವಧಿಯಲ್ಲಿ ಸೂರ್ಯನಿಗಿಂತ 100 ಪಟ್ಟು ಹೆಚ್ಚು ಪ್ರಕಾಶಮಾನವಾಗುತ್ತದೆ. ನಂತರ, ಅದರ ಬೆಳಕು ಕಡಿಮೆಯಾಗುತ್ತಾ ಬಂದು ಅಂತ್ಯಗೊಳ್ಳುತ್ತದೆ.
ಇಂತಹ ಅಸ್ವಾಭಾವಿಕ ಪ್ರಕಾಶವನ್ನು ಹೊಂದಿರುವ ನಕ್ಷತ್ರಗಳ ಅಧ್ಯಯನದಿಂದ, ವಿಶ್ವದ ಉಗಮದ ಸಂದರ್ಭದಲ್ಲಿ ಉಂಟಾದ ಮಹಾಸ್ಫೋಟ ಅಥವಾ ಬಿಗ್‌ಬ್ಯಾಂಗ್ ಸಂದರ್ಭದಲ್ಲಿನ ನಕ್ಷತ್ರಗಳ ಲಕ್ಷಣಗಳು ಹೇಗಿತ್ತು ಎಂಬುದನ್ನು ಊಹಿಸಬಹುದಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
‘ಸುಬರು ದೂರದರ್ಶಕವನ್ನು ಬಳಸಿ ಈ ನಕ್ಷತ್ರಗಳ ಚಿತ್ರವನ್ನು ಸೆರೆ ಹಿಡಿಯಲಾಗಿದೆ. ಅಲ್ಲದೆ, 870 ಮೆಗಾಪಿಕ್ಸೆಲ್ ಸಾಮರ್ಥ್ಯದ ಡಿಜಿಟಲ್ ಕ್ಯಾಮೆರಾವು ರಾತ್ರಿ ವೇಳೆ ಸಂಪೂರ್ಣ ಆಕಾಶದ ಚಿತ್ರವನ್ನು ಒಂದೇ ಕ್ಲಿಕ್‌ನಲ್ಲಿ ಸೆರೆ ಹಿಡಿದಿದೆ’ ಎಂದು ಪ್ರೊಫೆಸರ್ ನವೋಕಿ ಯಸುಡಾ ಹೇಳುತ್ತಾರೆ.
ಈ ಚಿತ್ರಗಳ ಮೂಲಕ ಸಂಗ್ರಹಿಸಲಾದ ದತ್ತಾಂಶಗಳನ್ನು ಆಧಾರವಾಗಿಟ್ಟುಕೊಂಡು ಬ್ರಹ್ಮಾಂಡದ ವಿಸ್ತರಣೆಯನ್ನು ಹೆಚ್ಚು ನಿಖರವಾಗಿ ಪತ್ತೆ ಹಚ್ಚಬಹುದಾಗಿದೆ ಎಂದು ಅವರು ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.