ವಾಷಿಂಗ್ಟನ್: ಜಾತಿ ಪದ್ಧತಿಯನ್ನು ತೊಡೆದು ಹಾಕುವ ಕಾನೂನು ಜಾರಿಗೆ ತಂದ ಸಿಯಾಟಲ್‌ನ ನಗರಸಭೆಯ ತೀರ್ಮಾನವನ್ನು ಭಾರತ ಮೂಲದ ಸೆನೆಟರ್ ಒಬ್ಬರು ಖಂಡಿಸಿದ್ದಾರೆ.
ಇದು ಅಮೆರಿಕದಲ್ಲಿ ಹೆಚ್ಚುತ್ತಿರುವ ಹಿಂದೂ ಫೋಬಿಯಾದ ನಿದರ್ಶನ ಎಂದು ಅವರು ಟೀಕೆ ಮಾಡಿದ್ದಾರೆ.
‘ಸಿಯಾಟಲ್ ನಗರಸಭೆ ಜಾರಿಗೆ ತಂದ ಕಾನೂನನ್ನು ನಾನು ಬಲವಾಗಿ ವಿರೋಧಿಸುತ್ತೇನೆ. ಜಾತಿ ಪದ್ಧತಿ ಈಗ ಆಚರಣೆಯಲ್ಲಿ ಇಲ್ಲ‘ ಎಂದು ಒಹಿಯೋದ ಮೊದಲ ಹಿಂದೂ ಹಾಗೂ ಭಾರತೀಯ ಸಂಜಾತ ಸೆನೆಟರ್ ನೀರಜ್ ಆ್ಯಂಟನಿ ಹೇಳಿದ್ದಾರೆ.
‘ನಗರಸಭೆಯ ಈ ನಿಯಮ ಹಿಂದೂ ಫೋಬಿಯಾವಾಗಿದೆ. ಅಮೆರಿಕ, ಭಾರತ ಹಾಗೂ ಇನ್ನಿತರ ಕಡೆಗಳಲ್ಲಿ ಹಿಂದೂಗಳಲ್ಲಿ ತಾರತಮ್ಯ ಉಂಟು ಮಾಡಲು ಜಾರಿಗೆ ತಂದ ಅಸ್ತ್ರವಾಗಿದೆ‘ ಎಂದು ಅವರು ಹೇಳಿದ್ದಾರೆ.
‘ಈ ನಿಯಮಕ್ಕಿಂತ ಹಿಂದೂಗಳನ್ನು ತಾರತಮ್ಯದಿಂದ ಪಾರು ಮಾಡುವ ಕಾನೂನನ್ನು ಸಿಯಾಟಲ್ ಜಾರಿಗೆ ತರಬೇಕಿತ್ತು‘ ಎಂದು ಅವರು ಹೇಳಿದ್ದಾರೆ.
ಅಮೆರಿಕದ ವಾಷಿಂಗ್ಟನ್ ರಾಜ್ಯದ ಸಿಯಾಟಲ್ ನಗರವು, ಜಾತಿ ಪದ್ಧತಿಯನ್ನು ತೊಡೆದು ಹಾಕುವ ಕಾನೂನನ್ನು ಮಂಗಳವಾರ ಜಾರಿಗೆ ತಂದಿತ್ತು.
ಇಂಥಹದ್ದೊಂದು ನಿಯಮ ಅನುಷ್ಠಾನಕ್ಕೆ ತಂದ ಅಮೆರಿಕದ ಮೊದಲ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಸಿಯಾಟಲ್‌ನಲ್ಲಿ ದಕ್ಷಿಣ ಏಷ್ಯಾ ಮೂಲದರು, ಅದರಲ್ಲೂ ಭಾರತೀಯ ಹಿಂದೂ ಸಮುದಾಯದವರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಭಾರತದಲ್ಲಿ ಇರುವ ಹಾಗೆ ಅಲ್ಲಿಯೂ ಜಾತಿ ಪದ್ಧತಿ ಆಚರಣೆಯಲ್ಲಿತ್ತು.
ಸಿಯಾಟಲ್ ನಗರಸಭೆಯ ಸದಸ್ಯ, ಭಾರತೀಯ ಸಂಜಾತೆ ಕ್ಷಮಾ ಸಾವಂತ್ ಅವರು, ಜಾತಿ ಪದ್ಧತಿ ತೊಡೆದು ಹಾಕುವ ಮಸೂದೆ ಮಂಡನೆ ಮಾಡಿದರು. 6–1 ಮತಗಳಿಂದ ಈ ಮಸೂದೆಗೆ ಒಪ್ಪಿಗೆ ಸಿಕ್ಕಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.