ADVERTISEMENT

ನ್ಯೂಯಾರ್ಕ್‌ನಲ್ಲಿ ಚೀನಾದ ರಹಸ್ಯ ಪೊಲೀಸ್ ಠಾಣೆ; ನೆರವಾದ ಇಬ್ಬರ ಬಂಧನ

ಏಜೆನ್ಸೀಸ್
Published 18 ಏಪ್ರಿಲ್ 2023, 4:18 IST
Last Updated 18 ಏಪ್ರಿಲ್ 2023, 4:18 IST
ಚೀನಾ ಧ್ವಜ
ಚೀನಾ ಧ್ವಜ   

ನ್ಯೂಯಾರ್ಕ್‌: ಚೀನಾ ಸರ್ಕಾರದ ಪರವಾಗಿ ನ್ಯೂಯಾರ್ಕ್‌ನಲ್ಲಿ ರಹಸ್ಯ ಪೊಲೀಸ್‌ ಠಾಣೆ ತೆರೆಯಲು ನೆರವಾದ ಆರೋಪದಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ಈ ಕೆಲಸ ಮಾಡಲು ಒಪ್ಪದ, ಅಮೆರಿಕದಲ್ಲಿರುವ ಜನರಿಗೆ ಸಾಮಾಜಿಕ ಮಾಧ್ಯಮಗಳ ಮೂಲಕ ಕಿರುಕುಳ ನೀಡಿದ ಚೀನಾದ ನ್ಯಾಷನಲ್‌ ಪೊಲೀಸ್‌ ಫೋರ್ಸ್‌ನ ಹತ್ತಕ್ಕೂ ಹೆಚ್ಚು ಅಧಿಕಾರಿಗಳ ವಿರುದ್ಧ ದೋಷಾರೋಪ ಮಾಡಲಾಗಿದೆ ಎಂದು ನ್ಯಾಯಾಂಗ ಇಲಾಖೆ ಸೋಮವಾರ ಹೇಳಿದೆ.

ಬೀಜಿಂಗ್‌ನ ನೀತಿಗಳನ್ನು ಬಹಿರಂಗವಾಗಿ ಟೀಕಿಸುವ ಹಾಗೂ ಪ್ರಜಾಪ್ರಭುತ್ವ ಪರ ಕಾರ್ಯಕರ್ತರನ್ನು ಪತ್ತೆಹಚ್ಚುವ ಸಲುವಾಗಿ ಚೀನಾ ಸರ್ಕಾರ ಇತ್ತೀಚಿನ ವರ್ಷಗಳಲ್ಲಿ ನಡೆಸುತ್ತಿರುವ ಪ್ರಯತ್ನಗಳನ್ನು ತಡೆಯುವ ಭಾಗವಾಗಿ ನ್ಯಾಯಾಂಗ ಇಲಾಖೆಯು ಸರಣಿ ಪ್ರಕರಣಗಳ ವಿಚಾರಣೆ ನಡೆಸುತ್ತಿದೆ.

ಅಮೆರಿಕದ ಫೆಡರಲ್‌ ಬ್ಯೂರೋ ಆಫ್‌ ಇನ್ವೆಸ್ಟಿಗೇಷನ್‌ (ಎಫ್‌ಬಿಐ) ತನಿಖೆಯ ವೇಳೆ ಮ್ಯಾನ್‌ಹಟನ್‌ನ ಚೀನಾಟೌನ್‌ ಮುಚ್ಚುವುದಕ್ಕೂ ಮುನ್ನ ಅಲ್ಲಿ ಚೀನಾದ ಸಾರ್ವಜನಿಕ ಭದ್ರತಾ ಇಲಾಖೆಯ ಸ್ಥಳೀಯ ಕಚೇರಿ ಕಾರ್ಯಾಚರಣೆ ನಡೆಸುತ್ತಿತ್ತು ಎಂಬುದು ಸಹ ತಿಳಿದುಬಂದಿದೆ.

ADVERTISEMENT

ಸದ್ಯ ಠಾಣೆ ಸ್ಥಾಪಿಸಿದ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಇಬ್ಬರು ಚೀನಾ ಅಧಿಕಾರಿಗಳ ನಿಯಂತ್ರಣ ಹಾಗೂ ನಿರ್ದೇಶನದಂತೆ ಕಾರ್ಯ ನಿರ್ವಹಿಸುತ್ತಿದ್ದರು. ಅವರು ಚೀನಾ ಅಧಿಕಾರಿಗಳೊಂದಿಗೆ ಸಂವಹನ ನಡೆಸಿದ ಬಳಿಕ ಎಲ್ಲ ಮಾಹಿತಿಯನ್ನು ತಮ್ಮ ಮೊಬೈಲ್‌ಗಳಿಂದ ಅಳಿಸಿ ಹಾಕಿದ್ದಾರೆ ಎಂಬುದು ತನಿಖೆ ವೇಳೆ ತಿಳಿದುಬಂದಿದೆ ಎಂದು ನ್ಯಾಯಾಂಗ ಇಲಾಖೆ ತಿಳಿಸಿದೆ.

ಬಂಧಿತರನ್ನು ಹ್ಯಾರಿ ಲು ಜಿಯಾನ್‌ವಾಂಗ್‌ (61) ಮತ್ತು ಚೆನ್‌ ಜಿನ್‌ಪಿಂಗ್‌ (59) ಎಂದು ಗುರುತಿಸಲಾಗಿದ್ದು, ಅವರದ್ದೇ ನಿವಾಸಗಳಲ್ಲಿ ಬಂಧಿಸಲಾಗಿದೆ. ಅವರ ಪರ ವಾದ ಮಾಡಲು ವಕೀಲರು ಇದ್ದಾರೆಯೇ ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ ಎಂದೂ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.