ಹೆಜೆರೆ (ಇಥಿಯೋಪಿಯಾ): ಯೂರೋಪ್ ಒಕ್ಕೂಟ ಸೇರಿದಂತೆ ಹಲವು ದೇಶಗಳು ಬೋಯಿಂಗ್ ವಿಮಾನ ಹಾರಾಟವನ್ನು ನಿಷೇಧಿಸಿವೆ.
ಕಳೆದ ಭಾನುವಾರ ಇಥಿಯೋಪಿಯಾದ ಆಡಿಸ್ ಅಬಬಾದಿಂದ ಕೀನ್ಯಾದ ನೈರೋಬಿಗೆ ಹೊರಟಿದ್ದ ಬೋಯಿಂಗ್ ವಿಮಾನ ಪತನಗೊಂಡು 157 ಮಂದಿ ಮೃತಪಟ್ಟಿದ್ದರು. ಕಳೆದ ಅಕ್ಟೋಬರ್ ತಿಂಗಳಲ್ಲಿ ಇಂಡೋನೇಷ್ಯಾದಲ್ಲಿ ಇದೇ ಮಾದರಿಯ ವಿಮಾನ ಅಪಘಾತಗೊಂಡು 189 ಜನರು ಸಾವನ್ನಪ್ಪಿದ್ದರು.
ಹಾಗಾಗಿ ಸುರಕ್ಷತಾ ದೃಷ್ಟಿಯಿಂದ ವೈಮಾನಿಕ ಸುರಕ್ಷತಾ ಸಂಸ್ಥೆಗಳು ಈ ನಿರ್ಣಯ ಕೈಗೊಂಡಿವೆ.
ನ್ಯೂಜಿಲೆಂಡ್ ಇತರ ವಿಮಾನಯಾನ ಪ್ರಾಧಿಕಾರರೊಂದಿಗೆ ಚರ್ಚಿಸಿದ ಬಳಿಕ ತಾತ್ಕಾಲಿಕವಾಗಿ ಬೋಯಿಂಗ್ ವಿಮಾನ ಹಾರಾಟ ರದ್ದುಗೊಳಿಸಿರುವುದಾಗಿ ಬುಧವಾರ ತಿಳಿಸಿದೆ.
‘ಈ ವಿಮಾನಗಳಲ್ಲಿ ಬದಲಾವಣೆ ಹಾಗೂ ಸುರಕ್ಷಾ ಕಾರ್ಯಾಚರಣೆ ಖಾತರಿಪಡಿಸಿದ ಬಳಿಕವೇ ಹಾರಾಟಕ್ಕೆ ಅನುವು ಮಾಡಿಕೊಡಲಾಗುತ್ತದೆ’ ಎಂದು ಹಲವು ದೇಶಗಳು ಸ್ಪಷ್ಟಪಡಿಸಿದೆ.
ಬೋಯಿಂಗ್ ವಿಮಾನ ಸುರಕ್ಷಿತ ಮತ್ತು ವಿಶ್ವಾಸಾರ್ಹವೆಂದು ಭರವಸೆ ನೀಡಿದರೂ,ಬ್ರಿಟನ್, ಭಾರತ, ಸರ್ಬಿಯಾ, ಚೀನಾ ಸೇರಿದಂತೆ ಹಲವು ದೇಶಗಳು ತಾತ್ಕಾಲಿಕವಾಗಿ ಬೋಯಿಂಗ್ ವಿಮಾನ ಹಾರಾಟ ನಿಷೇಧಿಸಿವೆ.ಅಪಘಾತ ಪ್ರಕರಣದ ತನಿಖೆ ಮುಗಿಯುವವರೆಗೆ ಕಾಯುವುದಾಗಿ ಹೇಳಿವೆ.
ಆಧಾರವಿಲ್ಲದೆ ನಿಷೇಧ: ಅಮೆರಿಕ
‘ಯಾವುದೇ ಆಧಾರವಿಲ್ಲದೆ ಬೋಯಿಂಗ್ ವಿಮಾನವನ್ನು ಹಲವು ದೇಶಗಳು ನಿಷೇಧಿಸಿವೆ’ ಎಂದು ಅಮೆರಿಕದ ನಾಗರಿಕ ವಿಮಾನಯಾನ ಪ್ರಾಧಿಕಾರ ತಿಳಿಸಿದೆ.
‘ಇಲ್ಲಿಯವರೆಗಿನ ತನಿಖೆಯ ಪ್ರಕಾರ, ಯಾವುದೇ ವ್ಯವಸ್ಥಿತ ಕಾರ್ಯಕ್ಷಮತೆ ಸಮಸ್ಯೆಗಳು ಕಂಡುಬಂದಿಲ್ಲ. ಅಲ್ಲದೇ ನಿಷೇಧ ಹೇರಿರುವುದಕ್ಕೆ ಯಾವ ದೇಶಗಳು ದಾಖಲೆ ನೀಡಿಲ್ಲ’ ಎಂದು ಪ್ರಾಧಿಕಾರ ತಿಳಿಸಿದೆ.
‘ಯಾವುದೇ ನಾಗರಿಕ ವಿಮಾನಯಾನ ಅಧಿಕಾರಿಗಳು ನಮ್ಮ ವಿರುದ್ಧ ಕ್ರಮ ಕೈಗೊಳ್ಳುವ ಮಾಹಿತಿ ನೀಡಿಲ್ಲ’ ಎಂದು ಅದು ತಿಳಿಸಿದೆ.
‘ಬೋಯಿಂಗ್ವಿಮಾನ ಹಾರಾಟಕ್ಕೆ ಯೋಗ್ಯವಲ್ಲವೆಂದು ಕಂಡುಬಂದರೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಪ್ರಾಧಿಕಾರ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.