ವಾಷಿಂಗ್ಟನ್: 2008ರಲ್ಲಿ ಮುಂಬೈ ಮೇಲೆ ನಡೆದ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ ಪಾಕಿಸ್ತಾನ ಮೂಲದ ಕೆನಡಾ ಉದ್ಯಮಿ ತಹವ್ವುರ್ ಹುಸೇನ್ ರಾಣಾ (63) ಅವರನ್ನು ಭಾರತಕ್ಕೆ ಹಸ್ತಾಂತರಿಸಬಹುದು ಎಂದು ಅಮೆರಿಕದ ನ್ಯಾಯಾಲಯವೊಂದು ಹೇಳಿದೆ.
ಭಯೋತ್ಪಾದಕ ದಾಳಿ ಸಂಬಂಧ ರಾಣಾ ಅವರನ್ನು ಭಾರತದಲ್ಲಿ ವಿಚಾರಣೆಗೆ ಗುರಿಪಡಿಸಬೇಕಿದೆ. ಪಾಕಿಸ್ತಾನ ಮೂಲದ ಲಷ್ಕರ್–ಎ–ತಯ್ಯಬಾ ಭಯೋತ್ಪಾದಕ ಸಂಘಟನೆಯು ಈ ದಾಳಿ ನಡೆಸಿತ್ತು.
ಭಾರತ ಮತ್ತು ಅಮೆರಿಕದ ನಡುವಿನ ಹಸ್ತಾಂತರಕ್ಕೆ ಸಂಬಂಧಿಸಿದ ‘ಒಪ್ಪಂದವು ರಾಣಾ ಅವರನ್ನು ಹಸ್ತಾಂತರಿಸುವಕ್ಕೆ ಅನುಮತಿ ನೀಡುತ್ತದೆ’ ಎಂದು ಅಮೆರಿಕದ ಮೇಲ್ಮನವಿ ನ್ಯಾಯಾಲಯವೊಂದು ಗುರುವಾರ ಹೇಳಿದೆ.
ರಾಣಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮೇಲ್ಮನವಿ ನ್ಯಾಯಾಲಯವು, ಜಿಲ್ಲಾ ನ್ಯಾಯಾಲಯವೊಂದರ ಆದೇಶವನ್ನು ಎತ್ತಿಹಿಡಿಯಿತು.
ರಾಣಾ ಅವರು ಈಗ ಲಾಸ್ ಏಂಜಲೀಸ್ ಜೈಲಿನಲ್ಲಿದ್ದಾರೆ. ಅವರು ಪಾಕಿಸ್ತಾನ ಮೂಲದ ಅಮೆರಿಕದ ಭಯೋತ್ಪಾದಕ ಡೇವಿಡ್ ಹೆಡ್ಲಿ ಜೊತೆ ನಂಟು ಹೊಂದಿದ್ದಾರೆ ಎನ್ನಲಾಗಿದೆ. ಮುಂಬೈ ಮೇಲೆ ನಡೆದ ದಾಳಿಯ ಪ್ರಮುಖ ಸಂಚುಕೋರರಲ್ಲಿ ಡೇವಿಡ್ ಹೆಡ್ಲಿ ಕೂಡ ಒಬ್ಬ. ಈಗ ನ್ಯಾಯಾಲಯ ನೀಡಿರುವ ಆದೇಶವನ್ನು ಪ್ರಶ್ನಿಸುವ ಅವಕಾಶ ರಾಣಾ ಅವರಿಗೆ ಇದೆ.
ಮುಂಬೈ ಮೇಲೆ ಭಾರಿ ಪ್ರಮಾಣದಲ್ಲಿ ದಾಳಿ ನಡೆಸಿದ ಭಯೋತ್ಪಾದಕ ಸಂಘಟನೆಗೆ ಬೆಂಬಲ ಒದಗಿಸಿದ ಆರೋಪದ ಅಡಿಯಲ್ಲಿ ರಾಣಾ ವಿರುದ್ಧ ಅಮೆರಿಕದ ಜಿಲ್ಲಾ ನ್ಯಾಯಾಲಯವೊಂದರಲ್ಲಿ ವಿಚಾರಣೆ ನಡೆದಿತ್ತು. ವಿದೇಶಿ ಭಯೋತ್ಪಾದಕ ಸಂಘಟನೆಯೊಂದಕ್ಕೆ ಬೆಂಬಲ ಒದಗಿಸಿದ ಹಾಗೂ ಡೆನ್ಮಾರ್ಕ್‌ನಲ್ಲಿ ಭಯೋತ್ಪಾದಕ ದಾಳಿಗೆ ನಡೆದ ವಿಫಲ ಯತ್ನವೊಂದಕ್ಕೆ ಬೆಂಬಲ ಒದಗಿಸಲು ಪಿತೂರಿ ನಡೆಸಿದ ಅಪರಾಧವನ್ನು ರಾಣಾ ಎಸಗಿದ್ದಾರೆ ಎಂದು ನ್ಯಾಯಾಲಯ ಹೇಳಿತ್ತು.
ಆದರೆ, ಭಾರತದ ಮೇಲೆ ನಡೆದ ಭಯೋತ್ಪಾದಕ ದಾಳಿಗಳಿಗೆ ಸಂಬಂಧಿಸಿದಂತೆ ಬೆಂಬಲ ಒದಗಿಸಲು ಪಿತೂರಿ ನಡೆಸಿದ ಆರೋಪದಿಂದ ರಾಣಾ ಅವರನ್ನು ಮುಕ್ತಗೊಳಿಸಲಾಗಿತ್ತು. ರಾಣಾ ಅವರು ಏಳು ವರ್ಷ ಜೈಲಿನಲ್ಲಿದ್ದು, ಬಿಡುಗಡೆ ಆದ ನಂತರದಲ್ಲಿ ಭಾರತವು ಅವರನ್ನು ಹಸ್ತಾಂತರಿಸಬೇಕು ಎಂದು ಕೋರಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.