ಹ್ಯಾಂಬರ್ಗ್: ಜರ್ಮನಿಯ ಹ್ಯಾಂಬರ್ಗ್‌ನಲ್ಲಿರುವ ಚರ್ಚ್ ಒಂದರಲ್ಲಿ ಅಪರಿಚಿತ ಬಂದೂಕುಧಾರಿ ನಡೆಸಿದ ಗುಂಡಿನ ದಾಳಿಯಲ್ಲಿ ಕನಿಷ್ಠ 8 ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ದುರ್ಘಟನೆಯಲ್ಲಿ ಬಂದೂಕುಧಾರಿ ಕೂಡ ಮೃತಪಟ್ಟಿದ್ದಾನೆ ಎಂದು ಜರ್ಮನ್ ಪೊಲೀಸರು ಹೇಳಿದ್ದಾರೆ.
ಉತ್ತರ ಹ್ಯಾಂಬರ್ಗ್‌ನಲ್ಲಿರುವ ಚರ್ಚ್‌ನಲ್ಲಿ ಈ ದಾಳಿ ನಡೆದಿದ್ದು, ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ, ಕೆಲವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಜರ್ಮನಿಯ ಪೊಲೀಸರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಕಟ್ಟಡದಿಂದ ಗುಂಡಿನ ಶಬ್ದ ಕೇಳಿ ಬಂದಿದೆ. ರಾತ್ರಿ 8.15ರ ಸುಮಾರಿಗೆ ಮೊದಲ ತುರ್ತು ಕರೆ ಬಂದಿದೆ. ಈ ಕ್ಷಣದವೆರೆಗೆ ಘಟನೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಹೀಗಾಗಿ ಜನ ವದಂತಿಗಳಿಗೆ ಕಿವಿಗೊಡಬಾರದು ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.
ಘಟನೆ ನಡೆಯುತ್ತಿದ್ದಂತೆ ಪೊಲೀಸರು ಆ ಪ್ರದೇಶದಲ್ಲಿ ‘ಅತ್ಯಂತ ಅಪಾಯಕಾರಿ’ ಸನ್ನಿವೇಶ ಎಂಬ ಸಂದೇಶ ನೀಡುವ ಅಲಾರಾಂ ಮೊಳಗಿಸಿದ್ದಾರೆ. ಸ್ಥಳೀಯ ನಿವಾಸಿಗಳಿಗೆ ಮನೆಯಿಂದ ಹೊರಬರದಂತೆ, ದಾಳಿ ನಡೆದ ಪ್ರದೇಶದಿಂದ ದೂರ ಉಳಿಯುವಂತೆ ಎಚ್ಚರಿಕೆ ನೀಡಿದ್ದಾರೆ.
ಸಾವಿನ ಸಂಖ್ಯೆಯ ಬಗ್ಗೆ ಪೊಲೀಸರು ಯಾವುದೇ ಮಾಹಿತಿ ನೀಡಿಲ್ಲ. ಆದರೆ ಜರ್ಮನಿಯ ಸ್ಥಳೀಯ ಮಾಧ್ಯಮಗಳು 6 ಜನ ಮೃತಪಟ್ಟಿದ್ದಾರೆ ಎಂದು ವರದಿ ಮಾಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.