ADVERTISEMENT

Methane Leak: ಇರಾನ್‌ ಕಲ್ಲಿದ್ದಲು ಗಣಿಯಲ್ಲಿ ಸ್ಫೋಟ; 50ಕ್ಕೂ ಹೆಚ್ಚು ಜನ ಸಾವು

ಪಿಟಿಐ
Published 22 ಸೆಪ್ಟೆಂಬರ್ 2024, 13:13 IST
Last Updated 22 ಸೆಪ್ಟೆಂಬರ್ 2024, 13:13 IST
<div class="paragraphs"><p>ಕಲ್ಲಿದ್ದಲು ಗಣಿಯಲ್ಲಿ ಸ್ಫೋಟ</p></div>

ಕಲ್ಲಿದ್ದಲು ಗಣಿಯಲ್ಲಿ ಸ್ಫೋಟ

   

ತೆಹ್ರಾನ್‌: ಪೂರ್ವ ಇರಾನ್‌ನ ಕಲ್ಲಿದ್ದಲು ಗಣಿಯೊಂದರಲ್ಲಿ ಸ್ಫೋಟ ಸಂಭವಿಸಿ ಕನಿಷ್ಠ 50ಕ್ಕೂ ಹೆಚ್ಚು ಜನರು ಮೃತಪಟ್ಟು, 20 ಮಂದಿ ಗಾಯಗೊಂಡಿದ್ದಾರೆ.

ತೆಹ್ರಾನ್‌ ರಾಜಧಾನಿಯ ಆಗ್ನೇಯ ಭಾಗಕ್ಕೆ 540 ಕಿ.ಮೀ. ದೂರದಲ್ಲಿರುವ ತಬಾಸ್‌ ಎಂಬಲ್ಲಿನ ಕಲ್ಲಿದ್ದಲು ಗಣಿಯಲ್ಲಿ ಮಿಥೇನ್‌ ಅನಿಲ ಸೋರಿಕೆಯಿಂದಾಗಿ ಈ ದುರ್ಘಟನೆ ಸಂಭವಿಸಿದ್ದು, ಗಣಿಯಲ್ಲಿ 18 ಕಾರ್ಮಿಕರು ಸಿಲುಕಿರಬಹುದು ಎನ್ನಲಾಗಿದೆ.

ADVERTISEMENT

ಶನಿವಾರ ಸ್ಫೋಟ ಸಂಭವಿಸಿದ ಬಳಿಕ ಅಧಿಕಾರಿಗಳು ತುರ್ತು ರಕ್ಷಣಾ ಸಿಬ್ಬಂದಿಯನ್ನು ಸ್ಥಳಕ್ಕೆ ಕಳುಹಿಸಿದ್ದು, ಸ್ಫೋಟದ ವೇಳೆ ಸುಮಾರು 80 ಮಂದಿ ಅಲ್ಲಿ ಕೆಲಸ ಮಾಡುತ್ತಿದ್ದರು. 700 ಮೀಟರ್‌ ಆಳದಲ್ಲಿರುವ ಸುರಂಗದಲ್ಲಿ 18 ಮಂದಿ ಸಿಲುಕಿದ್ದಾರೆ ಎಂದು ಮಾಧ್ಯಮದ ವರದಿ ತಿಳಿಸಿದೆ.

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಲ್ಗೊಳ್ಳಲು ನ್ಯೂಯಾರ್ಕ್‌ಗೆ ತೆರಳಲು ಸಿದ್ಧವಾಗುತ್ತಿದ್ದ ಇರಾನಿನ ಹೊಸ ಸುಧಾರಣಾವಾದಿ ಅಧ್ಯಕ್ಷ ಮಸೌದ್‌ ಪೆಜೆಶ್ಕಿಯನ್‌ ಅವರು, ಗಣಿಯಲ್ಲಿ ಸಿಲುಕಿರುವವರನ್ನು ರಕ್ಷಿಸಿ ಹೊರತರಲು ಹಾಗೂ ಅವರ ಕುಟುಂಬಗಳಿಗೆ ನೆರವಾಗಲು ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದೇನೆ. ಸ್ಫೋಟದ ಕುರಿತು ತನಿಖೆ ಶುರುವಾಗಿದೆ ಎಂದು ತಿಳಿಸಿದ್ದಾರೆ.

ಸಾಕಷ್ಟು ಖನಿಜ ಸಂಪತ್ತು ಹೊಂದಿರುವ ಇರಾನ್‌ ವಾರ್ಷಿಕವಾಗಿ 35 ಲಕ್ಷ ಟನ್‌ ಕಲ್ಲಿದ್ದಲ್ಲನ್ನು ಬಳಸುತ್ತದೆ. ಅದರಲ್ಲಿ 18 ಲಕ್ಷ ಟನ್‌ ಕಲ್ಲಿದ್ದನ್ನು ತನ್ನ ಗಣಿಯಿಂದ ತೆಗೆಯುವ ಇರಾನ್‌, ಉಳಿದದ್ದನ್ನು ಆಮದುಕೊಂಡು ದೇಶದ ಉಕ್ಕಿನ ಕಾರ್ಖಾನೆಗಳಲ್ಲಿ ಬಳಸಿಕೊಳ್ಳುತ್ತಿದೆ. 

ಈ ಹಿಂದೆಯೂ ಇರಾನ್‌ ಗಣಿ ಉದ್ಯಮದಲ್ಲಿ ಅನಾಹುತಗಳು ಸಂಭವಿಸಿದ್ದವು. 2013ರಲ್ಲಿ 11 ಕಾರ್ಮಿಕರು ಎರಡು ಪ್ರತ್ಯೇಕ ಘಟನೆಗಳಲ್ಲಿ ಮೃತಪಟ್ಟಿದ್ದರು. 2009ರಲ್ಲಿ ವಿವಿಧ ಘಟನೆಗಳಲ್ಲಿ 20 ಕಾರ್ಮಿಕರು ಮೃತಪಟ್ಟಿದ್ದರು.

2017ರಲ್ಲಿ ನಡೆದ ಗಣಿ ಸ್ಫೋಟದಲ್ಲಿ ಕನಿಷ್ಠ 42 ಮಂದಿ ಮೃತಪಟ್ಟಿದ್ದರು. ಗಣಿಗಳಲ್ಲಿ ಸುರಕ್ಷತಾ ಕ್ರಮಗಳ ಕೊರತೆ ಮತ್ತು ಅಸಮರ್ಪಕ ತುರ್ತು ಸೇವೆಗಳಿಂದಾಗಿ ಈ ಸಾವುಗಳು ಸಂಭವಿಸುತ್ತಿವೆ ಎಂದು ಆರೋಪಿಸಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.