ಲಾಹೋರ್: ಆರ್ಥಿಕ ಸಂಕಷ್ಟದಿಂದ ತತ್ತರಿಸುತ್ತಿರುವ ಪಾಕಿಸ್ತಾನದಲ್ಲಿ ಈಗ ತೀವ್ರ ಪೆಟ್ರೋಲ್ ಕೊರತೆ ಕಾಡುತ್ತಿದೆ.
ಪೆಟ್ರೋಲ್ ಸರಬರಾಜು ಸಾಕಷ್ಟಿದೆ ಎಂದು ಹೇಳುತ್ತಿರುವ ಅಲ್ಲಿನ ಸರ್ಕಾರ, ಪೆಟ್ರೋಲ್ ಅನ್ನು ಸಂಗ್ರಹಿಸಿ ಇಡುವವರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಎಚ್ಚರಿಸಿದೆ. ಪಂಜಾಬ್ ಪ್ರಾಂತ್ಯದ ಹಲವೆಡೆ ಪೆಟ್ರೋಲ್ ಕೊರತೆ ತೀವ್ರವಾಗಿ ಕಾಡುತ್ತಿದ್ದು, ದೈನಂದಿನ ಜನಜೀವನಕ್ಕೆ ತೊಂದರೆಯಾಗಿದೆ.
ದೂರದ ಪ್ರದೇಶಗಳಲ್ಲಿ ಕಳೆದ ಒಂದು ತಿಂಗಳಿಂದ ಪೆಟ್ರೋಲ್ ಸರಬರಾಜು ಆಗದೆ, ಪೆಟ್ರೋಲ್ ಬಂಕ್‌ಗಳು ಬಂದ್ ಆಗಿವೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.
ಪೆಟ್ರೋಲ್ ಬಂಕ್‌ಗಳು ಬಂದ್ ಆಗುವುದಕ್ಕೆ ಮತ್ತು ವಾಹನ ಸವಾರರ ಪರದಾಟಕ್ಕೆ ಸಾಕಷ್ಟು ಪ್ರಮಾಣದಲ್ಲಿ ಪೆಟ್ರೋಲ್ ಸರಬರಾಜು ಮಾಡದ ತೈಲ ಮಾರಾಟ ಕಂಪನಿಗಳು(ಒಎಂಸಿ) ಕಾರಣ ಎಂದು ಪಾಕಿಸ್ತಾನದ ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಶನ್(ಪಿಪಿಡಿಎ) ಆರೋಪಿಸಿದೆ.
ಆದರೆ, ಈ ಆರೋಪವನ್ನು ತಳ್ಳಿಹಾಕಿರುವ ತೈಲ ಕಂಪನಿಗಳು, ಕೆಲ ಬಂಕ್‌ಗಳ ಮಾಲೀಕರು ಪೆಟ್ರೋಲ್ ಬೆಲೆ ಹೆಚ್ಚಾಗುವ ನಿರೀಕ್ಷೆಯಿಂದ ಲಾಭ ಮಾಡುವ ದುರುದ್ದೇಶ ಇಟ್ಟುಕೊಂಡು ಪೆಟ್ರೋಲ್ ಅನ್ನು ಸಂಗ್ರಹಿಸಿ ಇಟ್ಟುಕೊಂಡಿದ್ದಾರೆ. ಇದು ಕೃತಕ ಕೊರತೆ ಸೃಷ್ಟಿಗೆ ಕಾರಣವಾಗಿದೆ ಎಂದು ಅದು ಹೇಳಿವೆ.
‘ಸದ್ಯ ಲಾಹೋರ್ ನಗರ ಮತ್ತು ಹೊರವಲಯದಲ್ಲಿರುವ 450 ಪೆಟ್ರೋಲ್ ಬಂಕ್‌ಗಳ ಪೈಕಿ ಶೇಕಡ 30ರಿಂದ 40ರಷ್ಟು ಬಂಕ್‌ಗಳಲ್ಲಿ ಪೆಟ್ರೋಲ್ ಇಲ್ಲ. ಸಾರ್ವಜನಿಕ ವಲಯದ ಬಹು ದೊಡ್ಡ ತೈಲ ಕಂಪನಿ ಮತ್ತು ಎರಡು ಅಂತರರಾಷ್ಟ್ರೀಯ ತೈಲ ಕಂಪನಿಗಳು ಸರಬರಾಜು ತಗ್ಗಿಸಿರುವುದರಿಂದ ಈ ಕೊರತೆ ಕಾಡುತ್ತಿದೆ. ಈ ಹಿಂದೆ ಈ ಕಂಪನಿಗಳು ಸಾಮಾನ್ಯವಾಗಿ ಸರಬರಾಜು ಮಾಡುತ್ತಿದ್ದವು. ಇದೀಗ ಅವೂ ಸಹ ಜನರ ಜೊತೆ ಆಟವಾಡಲು ಶುರು ಮಾಡಿವೆ’ಎಂದು ಪಿಪಿಡಿಎ ಕಾರ್ಯದರ್ಶಿ ಖ್ವಾಜಾ ಅತೀಫ್ ಆರೋಪಿಸಿದ್ದಾರೆ.
ಗುಜ್ರಾನ್‌ವಾಲಾ, ಫೈಸಲಾಬಾದ್, ಶೇಖುಪ್ರಾ, ಸರ್ಗೋಧಾ, ಸಹಿವಾಲ್, ಕಸೂರ್ ಮತ್ತು ಇತರೆ ಜಿಲ್ಲೆಗಳಲ್ಲಿ ಹಲವು ದಿನಗಳಿಂದ ಬಂಕ್‌ಗಳು ಬಂದ್ ಆಗಿವೆ ಎಂದೂ ಅವರು ಹೇಳಿರುವುದಾಗಿ ಡಾನ್ ವರದಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.