ADVERTISEMENT

ಗಂಭೀರ್‌–ಅಫ್ರಿದಿ ನಡುವೆ ಮುಗಿಯದ ಕಿತ್ತಾಟ

ಏಜೆನ್ಸೀಸ್
Published 5 ಮೇ 2019, 10:13 IST
Last Updated 5 ಮೇ 2019, 10:13 IST
   

ಕರಾಚಿ:ಕಿತ್ತಾಟದ ಮೂಲಕ ಸದಾ ಸುದ್ದಿಯಾಗುವ ಭಾರತದ ಮಾಜಿ ಕ್ರಿಕೆಟರ್‌ ಗೌತಮ್‌ ಗಂಭೀರ್‌ ಮತ್ತು ಪಾಕಿಸ್ತಾನದ ಮಾಜಿ ಕ್ರಿಕೆಟರ್‌ ಶಾಹಿದ್‌ ಅಫ್ರಿದಿ ಮತ್ತೊಮ್ಮೆ ಜಗಳವಾಡಿಕೊಂಡಿದ್ದಾರೆ.

ಭಾರತದಲ್ಲಿ ಒಂದೊಳ್ಳೆ ಮನೋತಜ್ಞರ ಬಳಿಗೆ ನಾನೇ ಅಫ್ರಿದಿಯನ್ನು ಕೊರೆದೊಯ್ಯುತ್ತೇನೆ ಎಂಬ ಗೌತಮ್‌ ಗಂಭೀರ್‌ ಮಾತಿಗೆ ಅದೇ ಧಾಟಿಯಲ್ಲೇ ತಿರುಗೇಟು ನೀಡಿರುವ ಶಾಹಿದ್‌ ಅಫ್ರಿದಿ, ‘ ಗೌತಮ್‌ ಕಾಯಿಲೆಗೆ ಪಾಕಿಸ್ತಾನದಲ್ಲಿ ಚಿಕಿತ್ಸೆ ಕೊಡಿಸಲು ನಾನು ವೀಸಾ ವ್ಯವಸ್ಥೆ ಮಾಡುತ್ತೇನೆ,’ ಎಂದು ಶಾಹಿದ್‌ ಆಫ್ರಿದಿ ಅವರು ಶನಿವಾರ ತಮ್ಮ ಆತ್ಮಚರಿತ್ರೆ ‘ಗೇಮ್‌ ಚೇಂಜರ್‌’ಬಿಡುಗಡೆ ನಂತರ ಮಾಧ್ಯಮಗಳಿಗೆ ಹೇಳಿದ್ದಾರೆ.

‘ನನಗನಿಸಿದ ಮಟ್ಟಿಗೆ ಗೌತಮ್‌ ಗಂಭೀರ್‌ಗೆ ಸ್ವಲ್ಪ ಸಮಸ್ಯೆ ಇರಬೇಕು. ಆಸ್ಪತ್ರೆಗಳೊಂದಿಗೆ ನನಗೆ ಒಡನಾಟವಿದೆ. ನಾನು ಅವರಿಗೆ ಪಾಕಿಸ್ತಾನದಲ್ಲಿ ಒಳ್ಳೆ ಚಿಕಿತ್ಸೆ ಕೊಡಿಸಬಲ್ಲೆ,’ ಎಂದು ಅಫ್ರಿದಿ ಹೇಳಿದ್ದಾರೆ.‘ಭಾರತೀಯ ಸರ್ಕಾರ ಸಾಮಾನ್ಯವಾಗಿ ನಮ್ಮ ಜನರಿಗೆ ವೀಸಾ ನೀಡುವುದಿಲ್ಲ. ಆದರೆ, ಭಾರತದಿಂದ ಪಾಕಿಸ್ತಾನಕ್ಕೆ ಬರುವ ಪ್ರತಿಯೊಬ್ಬರನ್ನೂ ನಾನು ಸ್ವಾಗತಿಸುತ್ತೇನೆ. ನಮ್ಮ ಜನ ಮತ್ತು ಸರ್ಕಾರ ಭಾರತೀಯರನ್ನು ಸದಾ ಸ್ವಾಗತಿಸುತ್ತದೆ. ಹಾಗೆಯೇ ಗಂಭೀರ್‌ ಅವರನ್ನೂ ಕೂಡ. ನಾನು ಗೌತಮ್‌ಗೆ ವೀಸಾ ವ್ಯವಸ್ಥೆ ಮಾಡಿಸುತ್ತೇನೆ. ಆ ಮೂಲಕ ಅವರು ಇಲ್ಲಿ ಉತ್ತಮ ಚಿಕತ್ಸೆ ಪಡೆಯಬಹುದು,’ ಎಂದು ಅಫ್ರಿದಿ ಹೇಳಿದ್ದಾರೆ.

ಗಂಭೀರ್‌ ವರ್ತನೆ ಸರಿಯಿಲ್ಲ. ಅವರಿಗೆ ವ್ಯಕ್ತಿತ್ವವಿಲ್ಲ ಎಂದು ಅಫ್ರಿದಿ ಅವರು ತಮ್ಮ ಆತ್ಮಚರಿತ್ರೆ ‘ಗೇಮ್‌ ಚೇಂಜರ್‌’ ನಲ್ಲಿ ಬರೆದುಕೊಂಡಿದ್ದು, ಅದು ಭಾರಿ ಸುದ್ದಿಯಾಗಿತ್ತು. ಇದೇ ಹಿನ್ನೆಲೆಯಲ್ಲಿ ಅಫ್ರಿಧಿ ವಿರುದ್ಧ ಗುಡುಗಿದ್ದ ಗೌತಮ್‌ ಗಂಭೀರ್‌, ‘ಅಫ್ರಿದಿಯನ್ನು ಭಾರತದಲ್ಲಿ ಒಳ್ಳೆಯ ಮನೋತಜ್ಞರ ಬಳಿಗೆ ನಾನೇ ಕರೆದೊಯ್ಯುತ್ತೇನೆ,’ ಎಂದು ಟ್ವೀಟ್‌ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.