ಶಾಂಘೈ: ಚೀನಾದ ವಾಣಿಜ್ಯ ನಗರಿ ಶಾಂಘೈನಲ್ಲಿ ಜನರು ಹಸಿವಿನಿಂದ ಕಂಗೆಟ್ಟಿದ್ದಾರೆ. ಆಹಾರ ಪದಾರ್ಥಗಳು, ದಿನಸಿ, ನೀರು ಸೇರಿದಂತೆ ಅತ್ಯಗತ್ಯ ವಸ್ತುಗಳು ಪೂರೈಕೆಯಾಗದೆ ಜನರು ಆಕ್ರೋಶ ಹೊರ ಹಾಕುತ್ತಿದ್ದಾರೆ. ಆಹಾರ ಪೂರೈಸುವಂತೆ ಮನೆಯ ಕಿಟಕಿಗಳ ಮೂಲಕ ಕೂಗುತ್ತಿದ್ದಾರೆ. ಕೆಲವರು ಹೂವಿನ ಕುಂಡಗಳನ್ನು ಹಾಗೂ ಪಾತ್ರೆಗಳನ್ನು ತೂರಿ ಪ್ರತಿಭಟಿಸಿದ್ದಾರೆ.
ಕೊರೊನಾ ವೈರಸ್ ಸಾಂಕ್ರಾಮಿಕ ತಡೆಯುವ ನಿಟ್ಟಿನಲ್ಲಿ ಶಾಂಘೈನಲ್ಲಿ ಹೇರಲಾಗಿರುವ ಲಾಕ್‌ಡೌನ್ ಎರಡನೇ ವಾರ ತಲುಪಿದೆ. ರಕ್ಷಣಾ ಕವಚ ಧರಿಸಿ ಓಡಾಡುತ್ತಿರುವ ಪೊಲೀಸರ ವಿರುದ್ಧ ಜನರು ಮನೆಯ ಬಾಲ್ಕನಿಗಳಿಂದ ಕೂಗುತ್ತಿದ್ದಾರೆ. ಜನರು ಆಕ್ರೋಶದಿಂದ ಕೂಗುತ್ತಿರುವುದು ವಿಡಿಯೊದಲ್ಲಿ ದಾಖಲಾಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೊಗಳು ಹರಿದಾಡುತ್ತಿವೆ.
'ನಮಗೆ ಆಹಾರ ಬೇಕು, ನಾವು ಊಟ ಮಾಡಬೇಕು...' ಎಂದು ಜನರು ಮೊರೆ ಇಟ್ಟಿರುವುದಾಗಿ ಹಲವು ಮಾಧ್ಯಮಗಳು ವರದಿ ಮಾಡಿವೆ. ಹರಿದಾಡುತ್ತಿರುವ ವಿಡಿಯೊಗಳು ಶಾಂಘೈನದ್ದೇ ಎಂಬುದು ಖಚಿತಪಟ್ಟಿಲ್ಲ.
ಸಿಬ್ಬಂದಿಯ ಮುಂದೆ ಎದುರಾಗಿರುವ ಜನರು ಘೋಷಣೆ ಕೂಗಿದ್ದಾರೆ. ಡ್ರೋನ್ ಮೂಲಕ ಜನರು ಹೊರಬರದಂತೆ ಎಚ್ಚರಿಕೆ ಸಂದೇಶ ನೀಡಲಾಗಿದೆ. ಮನೆಯೊಳಗೆ ಸಿಲುಕಿದಂತಾಗಿರುವ ಜನರು ಕೂಗಾಡಿರುವುದೆಲ್ಲ ವಿಡಿಯೊಗಳಲ್ಲಿ ದಾಖಲಾಗಿದೆ.
ಶಾಂಘೈನಲ್ಲಿ ಸುಮಾರು 2.5 ಕೋಟಿ ಜನರು ವಾಸಿಸುತ್ತಿದ್ದಾರೆ. ಓಮೈಕ್ರಾನ್ ಕೊರೊನಾ ವೈರಸ್ ಸೋಂಕು ಪ್ರಕರಣಗಳು ಏರಿಕೆಯಾದ ಬೆನ್ನಲ್ಲೇ ಏಪ್ರಿಲ್ ಆರಂಭದಿಂದಲೇ ನಗರದಾದ್ಯಂತ ಲಾಕ್‌ಡೌನ್ ಜಾರಿಯಲ್ಲಿದೆ. ಸಾಮೂಹಿಕ ಕೋವಿಡ್ ಪರೀಕ್ಷೆ, ಕಠಿಣ ಐಸೊಲೇಷನ್ ನಿಯಮಗಳನ್ನು ಚೀನಾ ಸರ್ಕಾರ ಅನುಸರಿಸುತ್ತಿದೆ. ಈ ನಡುವೆ ಸೋಮವಾರ 26,087 ಹೊಸ ಪ್ರಕರಣಗಳು ದಾಖಲಾಗಿವೆ. ಆ ಪೈಕಿ 914 ಪ್ರಕರಣಗಳಲ್ಲಿ ಸೋಂಕು ಲಕ್ಷಣಗಳು ಕಾಣಿಸಿಕೊಂಡಿರುವುದಾಗಿ ಪ್ರಕಟಿಸಲಾಗಿದೆ.
ಚೀನಾ ಇತರೆ ಪ್ರಾಂತ್ಯಗಳಿಂದ ಸರ್ಕಾರವು ಸಾವಿರಾರು ಕಾರ್ಯಕರ್ತರನ್ನು ಶಾಂಘೈನಲ್ಲಿ ಆರೋಗ್ಯ ವ್ಯವಸ್ಥೆ ಕಲ್ಪಿಸಲು ನಿಯೋಜಿಸಿದೆ. ಆದರೆ, ಜನರ ಓಡಾಟಕ್ಕೆ ಅತ್ಯಂತ ಕಠಿಣ ನಿರ್ಬಂಧ ವಿಧಿಸಿರುವುದರಿಂದ ಆಹಾರ ಕೊರತೆ ಎದುರಾಗಿದೆ ಹಾಗೂ ವೈದ್ಯಕೀಯ ನೆರವು ಪಡೆಯುವುದು ಕಷ್ಟವಾಗಿದೆ.
ಇದನ್ನೂ ಓದಿ–ಸಂಗತ: ಮರಳಬೇಕಿದೆ ಕಲಿಕೆಯ ಹಳಿಗೆ
ಆಹಾರ ಪೂರೈಕೆಯಲ್ಲಿ ಸಮಸ್ಯೆಯಾಗಿದ್ದು, ಮತ್ತಷ್ಟು ಸ್ವಯಂ ಸೇವಕರನ್ನು ನಿಯೋಜಿಸುವ ಮೂಲಕ ಸರಕು ವಿತರಣೆಗೆ ವ್ಯವಸ್ಥೆ ಮಾಡುವುದಾಗಿ ಶಾಂಘೈನ ಅಧಿಕಾರಿಗಳು ತಿಳಿಸಿರುವುದಾಗಿ ವರದಿಯಾಗಿದೆ.
ಜಗತ್ತಿನಾದ್ಯಂತ ಹಲವು ರಾಷ್ಟ್ರಗಳು ಕೋವಿಡ್–19 ತಡೆಗಟ್ಟುವ ಕ್ರಮಗಳ ಭಾಗವಾಗಿ ಲಸಿಕೆ ವಿತರಣೆಯನ್ನು ಹೆಚ್ಚಿಸುವತ್ತ ಗಮನಹರಿಸಿವೆ ಹಾಗೂ ಲಾಕ್‌ಡೌನ್ ನಿಯಮಗಳು, ಕಠಿಣ ನಿರ್ಬಂಧಗಳನ್ನು ಸಡಿಲಗೊಳಿಸುತ್ತಿವೆ. ಆದರೆ, ಶಾಂಘೈನಲ್ಲಿ ನಿಯಮಗಳು ಕಠಿಣಗೊಳಿಸುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.