ಕೋಲ್ಕತ್ತ: ಬಾಂಗ್ಲಾದೇಶದ ಪ್ರಧಾನಿ ಹುದ್ದೆಗೆ ರಾಜೀನಾಮೆ ಸಲ್ಲಿಸಿ, ದೇಶದಿಂದ ಪಲಾಯನಗೈದಿರುವ ಶೇಖ್ ಹಸೀನಾ ಅವರು ಪ್ರಜಾತಂತ್ರದ ಮರುಸ್ಥಾಪನೆ ಆದ ನಂತರ ದೇಶಕ್ಕೆ ಮರಳಲಿದ್ದಾರೆ ಎಂದು ಅವರ ಮಗ ಸಾಜೀಬ್ ವಾಜೆದ್ ಜಾಯ್ ಗುರುವಾರ ಹೇಳಿದ್ದಾರೆ.
ದೇಶದಲ್ಲಿ ಈಗ ಸೃಷ್ಟಿಯಾಗಿರುವ ಅಶಾಂತಿಯ ಕಿಚ್ಚಿಗೆ ತುಪ್ಪ ಸುರಿಯುವ ಕೆಲಸವನ್ನು ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್‌ಐ ಮಾಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಹಸೀನಾ ಅವರು ಬಾಂಗ್ಲಾದೇಶಕ್ಕೆ ಮರಳುವುದು ಖಚಿತವಾಗಿದ್ದರೂ, ಅವರು ಸಕ್ರಿಯ ರಾಜಕಾರಣಿಯಾಗಿ ಮರಳುತ್ತಾರೋ ಅಥವಾ ನಿವೃತ್ತ ರಾಜಕಾರಣಿಯಾಗಿ ಮರಳುತ್ತಾರೋ ಎಂಬುದು ಇನ್ನೂ ತೀರ್ಮಾನವಾಗಿಲ್ಲ ಎಂದು ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಜಾಯ್ ಹೇಳಿದ್ದಾರೆ.
ಶೇಖ್ ಮುಜೀಬುರ್ ರಹಮಾನ್ ಕುಟುಂಬದವರು ತಮ್ಮ ಜನರನ್ನಾಗಲೀ, ಅವಾಮಿ ಲೀಗ್ ಪಕ್ಷವನ್ನಾಗಲಿ ಕೈಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ತಮ್ಮ ತಾಯಿಗೆ ರಕ್ಷಣೆ ನೀಡಿದ್ದಕ್ಕಾಗಿ ಜಾಯ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.
ಬಾಂಗ್ಲಾದೇಶದಲ್ಲಿ ಪ್ರಜಾತಂತ್ರದ ಮರುಸ್ಥಾಪನೆಗೆ ಒತ್ತಡ ತರಲು ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಅಭಿಪ್ರಾಯ ರೂಪಿಸುವಲ್ಲಿ ಭಾರತವು ಸಹಾಯ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
‘ಅವರು ಬಾಂಗ್ಲಾದೇಶಕ್ಕೆ ಮರಳುವುದಿಲ್ಲ ಎಂದು ನಾನು ಹೇಳಿದ್ದುದು ನಿಜ. ಆದರೆ ಕಳೆದ ಎರಡು ದಿನಗಳಲ್ಲಿ ನಮ್ಮ ಪಕ್ಷದ ನಾಯಕರು ಮತ್ತು ಕಾರ್ಯಕರ್ತರ ಮೇಲೆ ದೇಶದಾದ್ಯಂತ ನಿರಂತರ ದಾಳಿಗಳು ನಡೆದ ನಂತರದಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ. ಈಗ ನಾವು ನಮ್ಮ ಜನರನ್ನು ಸುರಕ್ಷಿತವಾಗಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡಲಿದ್ದೇವೆ; ಅವರನ್ನು ಒಬ್ಬಂಟಿಯಾಗಿ ಬಿಡುವುದಿಲ್ಲ’ ಎಂದು ಜಾಯ್ ಹೇಳಿದ್ದಾರೆ.
‘ಅವಾಮಿ ಲೀಗ್ ಪಕ್ಷವು ಬಾಂಗ್ಲಾದೇಶದ ಅತ್ಯಂತ ಹಳೆಯ ಹಾಗೂ ಅತ್ಯಂತ ದೊಡ್ಡ ರಾಜಕೀಯ ಪಕ್ಷ. ಹೀಗಾಗಿ ನಾವು ಜನರಿಂದ ದೂರವಾಗಲು ಸಾಧ್ಯವಿಲ್ಲ. ಪ್ರಜಾತಂತ್ರದ ಮರುಸ್ಥಾಪನೆ ಆದ ನಂತರ ಹಸೀನಾ ಅವರು ಖಂಡಿತವಾಗಿಯೂ ಬಾಗ್ಲಾದೇಶಕ್ಕೆ ಮರಳಲಿದ್ದಾರೆ’ ಎಂದು ಸ್ಪಷ್ಟಪಡಿಸಿದ್ದಾರೆ.
ಜೀವ ಉಳಿಸಿಕೊಳ್ಳಲು ಪಲಾಯನಗೈದಿದ್ದಲ್ಲ: ಹಸೀನಾ ಅವರು ತಮ್ಮ ಜೀವ ಉಳಿಸಿಕೊಳ್ಳಲು ದೇಶದಿಂದ ಓಡಿಹೋದರು ಎಂಬ ವರದಿಗಳನ್ನು ಅಲ್ಲಗಳೆದಿರುವ ಜಾಯ್ ಅವರು, ‘ಅವರು ದೇಶ ತೊರೆಯಲು ಒಪ್ಪಿರಲಿಲ್ಲ. ಪ್ರಧಾನಿಯವರ ಭದ್ರತಾ ಸಿಬ್ಬಂದಿ ಕೊನೆಯವರೆಗೂ ಅವರಿಗೆ ರಕ್ಷಣೆ ಒದಗಿಸಲು ಸಿದ್ಧರಿದ್ದರು. ಆದರೆ, ಹಾಗೆ ಮಾಡಿದ್ದರೆ ಪ್ರಧಾನಿ ನಿವಾಸದ ಕಡೆ ಬರುತ್ತಿದ್ದ ಪ್ರತಿಭಟನಕಾರರಲ್ಲಿ ನೂರಾರು ಮಂದಿ ಸಾಯುತ್ತಿದ್ದರು. ಬಾಂಗ್ಲಾದ ಹಿತದ ಕಾರಣಕ್ಕೆ ನಾವು ಹಸೀನಾ ಅವರನ್ನು ಒಪ್ಪಿಸಿದೆವು’ ಎಂದರು.
‘ನಮ್ಮ ಸರ್ಕಾರ ದುರ್ಬಲವಾಗಿರಲಿಲ್ಲ. ವಿದ್ಯಾರ್ಥಿಗಳಿಗೆ ತೊಂದರೆಯಾಗುವುದು ಅಮ್ಮನಿಗೆ ಬೇಕಿರಲಿಲ್ಲ. ಹಸೀನಾ ದೇಶ ತೊರೆದ ನಂತರವೂ ಅಲ್ಲಿ ರಕ್ತಪಾತ ನಿಂತಿಲ್ಲ. ಹಸೀನಾ ಅವರು ಇದ್ದಾಗಿನ, ಇಲ್ಲದಿದ್ದಾಗಿನ ವ್ಯತ್ಯಾಸವು ದೇಶದ ಜನರಿಗೆ ಈಗ ಗೊತ್ತಾಗುತ್ತದೆ’ ಎಂದರು.
ಜಾಯ್ ಹೇಳಿದ ಮಾತುಗಳು
* ಬಾಂಗ್ಲಾದೇಶವು ಅರಾಜಕತೆಯತ್ತ ಸಾಗುತ್ತಿದೆ, ಅದು ಈ ಪ್ರದೇಶದಲ್ಲಿ ಎರಡನೆಯ ಅಫ್ಗಾನಿಸ್ತಾನವಾಗುತ್ತಿದೆ
* ಬಾಂಗ್ಲಾದಲ್ಲಿ ಪ್ರಜಾತಂತ್ರದ ಮರುಸ್ಥಾಪನೆಯಾದ ನಂತರ ಅವಾಮಿ ಲೀಗ್ ಅಥವಾ ಬಿಎನ್‌ಪಿ ಅಧಿಕಾರಕ್ಕೆ ಬರುತ್ತದೆ
* ದಂಗೆಕೋರರು ಬಂದೂಕು ಬಳಸಿ ಪೊಲೀಸರ ಮೇಲೆ ದಾಳಿ ನಡೆಸಿದರು. ಈ ಬಂದೂಕುಗಳನ್ನು ಭಯೋತ್ಪಾದಕ ಸಂಘಟನೆಗಳು ಮತ್ತು ವಿದೇಶಿ ಶಕ್ತಿಗಳು ಮಾತ್ರ ಒದಗಿಸಬಲ್ಲವು
* ಕಳೆದ ಎರಡು ದಿನಗಳಿಂದ ಹಸೀನಾ ಅವರು ನಮ್ಮ ಪಕ್ಷದ ಎಲ್ಲ ಮುಖಂಡರ ಜೊತೆ ಸಂಪರ್ಕದಲ್ಲಿದ್ದಾರೆ
* ಬಾಂಗ್ಲಾದಲ್ಲಿನ ಬೆಳವಣಿಗೆಗಳ ಹಿಂದೆ ಅಮೆರಿಕದ ಸಿಐಎ ಕೈವಾಡ ಇರಬಹುದೇ ಎಂಬ ವಿಚಾರವಾಗಿ ನನ್ನಲ್ಲಿ ಆಧಾರ ಇಲ್ಲ. ಆದರೆ ಅವರ ಕೈವಾಡ ಇದ್ದಿರಲೂಬಹುದು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.