ಕಠ್ಮಂಡು: ನೇಪಾಳದ ಪ್ರಧಾನ ಮಂತ್ರಿಯಾಗಿ ನೇಪಾಳಿ ಕಾಂಗ್ರೆಸ್‌ನಮುಖ್ಯಸ್ಥ ಶೇರ್ ಬಹದ್ದೂರ್ ದೇವುಬಾ ಅವರು ಮಂಗಳವಾರ ಸಂಜೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ನೇಪಾಳ ಸುಪ್ರೀಂ ಕೋರ್ಟ್ ಸೋಮವಾರ ನೀಡಿದ ತೀರ್ಪಿನ ಅನುಸಾರ ಪ್ರತಿಪಕ್ಷ ನಾಯಕ 75 ವರ್ಷದ ದೇವುಬಾ ಅವರನ್ನು ಪ್ರಧಾನ ಮಂತ್ರಿಯಾಗಿ ನೇಮಕ ಮಾಡುವ ಬಗ್ಗೆ ಅಧ್ಯಕ್ಷೆ ವಿದ್ಯಾದೇವಿ ಭಂಡಾರಿ ಮಂಗಳವಾರ ನೋಟಿಸ್ ನೀಡಿದ್ದರು. ಅದರಂತೆ ದೇವುಬಾ ಪ್ರಧಾನಿಯಾಗಿ ಪ್ರತಿಜ್ಙಾವಿಧಿ ಸ್ವೀಕರಿಸಿದ್ದಾರೆ.
ಪ್ರಮಾಣ ವಚನ ಸ್ವೀಕರಿಸಲು ನಿರಾಕರಿಸಿದ್ದ ದೇವುಬಾ
ರಾಷ್ಟ್ರದ ಅಧ್ಯಕ್ಷೆ ವಿದ್ಯಾದೇವಿ ಭಂಡಾರಿ ಅವರು ತಮ್ಮನ್ನು ಪ್ರಧಾನಿಯಾಗಿ ನೇಮಿಸಿದ ನೋಟಿಸ್ ಪರಿಷ್ಕರಿಸುವ ವರೆಗೆ ಪ್ರತಿಜ್ಞಾ ವಿಧಿ ಸ್ವೀಕರಿಸುವುದಿಲ್ಲ ಎಂದು ಶೇರ್ ಬಹದ್ದೂರ್ ದೇವುಬಾ ಹೇಳಿದ್ದರು.
ನೇಪಾಳ ಸುಪ್ರೀಂ ಕೋರ್ಟ್ ಸೋಮವಾರ ನೀಡಿದ ತೀರ್ಪಿನ ಅನುಸಾರ ಪ್ರತಿಪಕ್ಷ ನಾಯಕ 75 ವರ್ಷದ ದೇವುಬಾ ಅವರನ್ನು ಪ್ರಧಾನ ಮಂತ್ರಿಯಾಗಿ ನೇಮಕ ಮಾಡುವ ಬಗ್ಗೆ ಅಧ್ಯಕ್ಷೆ ವಿದ್ಯಾದೇವಿ ಭಂಡಾರಿ ಮಂಗಳವಾರ ನೋಟಿಸ್ ನೀಡಿದ್ದರು.
ರಾಷ್ಟ್ರದ ಸಂವಿಧಾನದ 76 (5) ನೇ ವಿಧಿಗೆ ಅನುಗುಣವಾಗಿ ದೇವುಬಾ ಅವರನ್ನು ಪ್ರಧಾನ ಮಂತ್ರಿಯಾಗಿ ನೇಮಿಸಬೇಕು ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಚೋಳೇಂದ್ರ ಶುಮ್ಶರ್ ರಾಣಾ ನೇತೃತ್ವದ ಐದು ಸದಸ್ಯರ ಸಾಂವಿಧಾನಿಕ ಪೀಠವು ಸೋಮವಾರ ಆದೇಶ ನೀಡಿತ್ತು.
ಸುಪ್ರೀಂ ಕೋರ್ಟ್ ಸ್ವತಃ ನಿರ್ದೇಶನ ನೀಡಿದ್ದರೂ, ಪ್ರಧಾನಿಯನ್ನು ಯಾವ ವಿಧಿಯ ಅನುಗುಣವಾಗಿ ನೇಮಕ ಮಾಡಿದೆ ಎಂದು ಅಧ್ಯಕ್ಷರ ಕಚೇರಿಯು ನೋಟಿಸ್‌ನಲ್ಲಿ ಉಲ್ಲೇಖಿಸಿರಲಿಲ್ಲ.
ಕಾನೂನು ಸಲಹೆಯಂತೆ ರಾಷ್ಟ್ರಾಧ್ಯಕ್ಷರಿಗೆ ಸಂದೇಶ ಕಳುಹಿಸಿರುವ ದೇವುಬಾ ಅವರು, ನೋಟಿಸ್‌ನಲ್ಲಿನ ದೋಷವನ್ನು ಸರಿಪಡಿಸುವವರೆಗೂ ಪ್ರಮಾಣವಚನ ಸ್ವೀಕರಿಸುವುದಿಲ್ಲ ಎಂದು ತಿಳಿಸಿದ್ದಾರೆ ಎಂದು ಮಾಧ್ಯಮ ವರದಿಗಳಿಂದ ಗೊತ್ತಾಗಿತ್ತು.
ಐದನೇ ಬಾರಿಗೆ ಪಿಎಂ
ದೇವುಬಾ ಅವರು ಈ ಹಿಂದೆ, ಸೆಪ್ಟೆಂಬರ್ 1995 ರಿಂದ ಮಾರ್ಚ್ 1997 ವರೆಗೆ, ಜುಲೈ 2001ರಿಂದ ಅಕ್ಟೋಬರ್ 2002ರ ವರೆಗೆ, ಜೂನ್ 2004ರಿಂದ ಫೆಬ್ರವರಿ 2005ರ ವರೆಗೆ, ಜೂನ್ 2017 ರಿಂದ ಫೆಬ್ರವರಿ 2018ರ ವರೆಗೆ ನಾಲ್ಕು ಬಾರಿ ನೇಪಾಳದ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಈಗ ಐದನೇ ಬಾರಿಗೆ ಪ್ರಧಾನಿಯಾಗಿದ್ದಾರೆ.
ಸಂವಿಧಾನದ ನಿಬಂಧನೆಗಳ ಪ್ರಕಾರ ಪ್ರಧಾನಮಂತ್ರಿಯಾಗಿ ನೇಮಕಗೊಂಡ 30 ದಿನಗಳ ಒಳಗಾಗಿ ದೇವುಬಾ ಅವರು ಸದನದಲ್ಲಿ ವಿಶ್ವಾಸ ಮತ ಸಾಬೀತುಪಡಿಸಬೇಕಾಗಿದೆ.
ಸುಪ್ರೀಂ ಕೋರ್ಟ್‌ನಿಂದ ಆಯ್ಕೆ
ಸಂಸತ್ತು ವಿಸರ್ಜಿಸುವ ಈ ಹಿಂದಿನ ಪ್ರಧಾನಿ ಕೆ.ಪಿ.ಒಲಿ ಅವರ ಮೇ 21ರ ತೀರ್ಮಾನವನ್ನು ಸೋಮವಾರ ತಳ್ಳಿಹಾಕಿದ್ದ ಸುಪ್ರೀಂ ಕೋರ್ಟ್, ದೇವುಬಾ ಅವರನ್ನು ಪ್ರಧಾನಿಯಾಗಿ ನೇಮಿಸಬೇಕು ಎಂದು ಆದೇಶಿಸಿತ್ತು.
ಮುಖ್ಯ ನ್ಯಾಯಮೂರ್ತಿ ಚೋಳೇಂದ್ರ ಶಮ್‌ಶೇರ್ ರಾಣಾ ನೇತೃತ್ವದ ಪಂಚ ಸದಸ್ಯರ ಸಾಂವಿಧಾನಿಕ ಪೀಠವು, ಪ್ರಧಾನಮಂತ್ರಿ ಸ್ಥಾನದ ಹಕ್ಕು ಪ್ರತಿಪಾದಿಸುವ ಒಲಿ ಅವರ ಕ್ರಮ ಅಸಾಂವಿಧಾನಿಕವಾದುದು ಎಂದು ಅಭಿಪ್ರಾಯಪಟ್ಟಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.