ಕಠ್ಮಂಡು : ನೇಪಾಳಿ ಶೆರ್ಪಾ ಮಾರ್ಗದರ್ಶಕರೊಬ್ಬರು (ಶೆರ್ಪಾ ಗೈಡ್) 26ನೇ ಬಾರಿಗೆ ಜಗತ್ತಿನ ಅತಿ ಎತ್ತರದ ಪರ್ವತ ಮೌಂಟ್ ಎವರೆಸ್ಟ್ ಏರುವ ಮೂಲಕ ತಮ್ಮ ಒಡನಾಡಿ ಕಾಮಿ ರೀಟಾ ಶೇರ್ಪಾ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.
ಪಸಂಗ್ ದವಾ ಶೆರ್ಪಾ ಈ ದಾಖಲೆ ಸರಿಗಟ್ಟಿದ ಕೀರ್ತಿಗೆ ಭಾಜನರಾಗಿದ್ದಾರೆ. ಅವರು, ಹಂಗೇರಿಯ ಪರ್ವತಾರೋಹಿಯೊಂದಿಗೆ ಭಾನುವಾರ ಎವರೆಸ್ಟ್‌ನ ತುತ್ತತುದಿ ತಲುಪಿದ್ದಾರೆ ಎಂದು ಆಯೋಜಕ ಸಂಸ್ಥೆ ಇಮ್ಯಾಜಿನ್ ನೇಪಾಳ ಟ್ರೆಕ್ಸ್ ತಿಳಿಸಿದೆ.
ಪಸಂಗ್ ಅವರು ಮೊದಲ ಬಾರಿಗೆ ಎವರೆಸ್ಟ್ ಏರಿದ್ದು 1998ರಲ್ಲಿ. ಅಂದಿನಿಂದ ಪ್ರತಿ ವರ್ಷವೂ ಪರ್ವತಾರೋಹಣ ಮಾಡುತ್ತಿದ್ದಾರೆ. ನೇಪಾಳಿ ಪರ್ವತಾರೋಹಿ ಕಾಮಿ ರೀಟಾ ಕಳೆದ ವರ್ಷ 26ನೇ ಬಾರಿಗೆ ಎವರೆಸ್ಟ್ ತುತ್ತತುದಿ ಏರಿ ದಾಖಲೆ ನಿರ್ಮಿಸಿದ್ದರು.
ಈ ವಾರಾಂತ್ಯದಿಂದ ನೂರಾರು ಪರ್ವತಾರೋಹಿಗಳು ಆರೋಹಣ ಆರಂಭಿಸುತ್ತಾರೆ. ಅದಕ್ಕೂ ಮೊದಲು ಶೆರ್ಪಾಗಳು ದಾರಿಯುದ್ದಕ್ಕೂ ಹಗ್ಗಗಳನ್ನು ಕಟ್ಟಿ ಅವರಿಗೆ ನೆರವಾಗುತ್ತಾರೆ.
1953ರಲ್ಲಿ ಮೊದಲ ಬಾರಿಗೆ ನ್ಯೂಜಿಲೆಂಡ್‌ನ ಪರ್ವತರೋಹಿ ಎಡ್ಮಂಡ್ ಹಿಲರಿ ಹಾಗೂ ಮಾರ್ಗದರ್ಶಕ ಶೇರ್ಪಾ ತೇನ್‌ಸಿಂಗ್ ನೋರ್ಗೆ ಮೌಂಟ್ ಎವರೆಸ್ಟ್ ಏರಿದ್ದರು. ಈ ಸಂಭ್ರಮಕ್ಕೆ ಈಗ 70 ವರ್ಷಗಳು ತುಂಬಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.