ಸುಯೆಜ್ (ಈಜಿಪ್ಟ್): ಸುಯೆಜ್ ಕಾಲುವೆಯಲ್ಲಿ ಸಿಲುಕಿರುವ ಎವರ್‌ಗ್ರೀನ್ ಕಂಪನಿಯ ಎವರ್‌ಗಿವೆನ್ ಬೃಹತ್ ಕಂಟೇನರ್ ಹಡಗನ್ನು ಭಾಗಶಃ ತೇಲಿಸುವಲ್ಲಿ ಎಂಜಿನಿಯರ್‌ಗಳು ಯಶಸ್ವಿಯಾಗಿದ್ದಾರೆ ಎಂದು ಕಾಲುವೆ ಸೇವೆಗಳ ಸಂಸ್ಥೆ ಸೋಮವಾರ ತಿಳಿಸಿದೆ.
ಆದರೆ ಹಡಗು ಯಾವಾಗ ಪೂರ್ಣ ಪ್ರಮಾಣದಲ್ಲಿ ಮುಕ್ತವಾಗುತ್ತದೆ ಎಂಬ ವಿವರಗಳನ್ನು ಸಂಸ್ಥೆ ನೀಡಿಲ್ಲ.
ಮರೀನ್‌ಟ್ರಾಫಿಕ್.ಕಾಂನ ಉಪಗ್ರಹ ಆಧಾರಿತ ದತ್ತಾಂಶದ ಪ್ರಕಾರ, ಕಾಲುವೆಯಲ್ಲಿ ಸಿಲುಕಿದ್ದ ಹಡಗನ್ನು ದಂಡೆಯಿಂದ ಸ್ವಲ್ಪ ಮಟ್ಟಿಗೆ ಬಿಡಿಸಿ ನೀರಿನತ್ತ ಸರಿಸಿರುವುದು ಗೊತ್ತಾಗುತ್ತಿದೆ.
ಹುಣ್ಣಿಮೆಯ ದಿನ ಉಬ್ಬರ ಹೆಚ್ಚಾಗಿತ್ತು. ಇದೇ ಸಂದರ್ಭ ಬಳಸಿಕೊಂಡು 10 ಟಗ್‌ಬೋಟ್‌ಗಳ ನೆರವಿನಿಂದ ಬೃಹತ್ ಹಡಗನ್ನು ಹಿಂದೆ ಮತ್ತು ಮುಂದೆ ಎಳೆಯುವ ಪ್ರಕ್ರಿಯೆ ನಡೆಸಲಾಯಿತು. ಹಡಗನ್ನು ಸಡಿಲಿಸಿ ಭಾಗಶಃ ಸರಿಸಲು ಯಶಸ್ವಿಯಾದ ಸಂಭ್ರಮವನ್ನು ಟಗ್‌ಬೋಟ್‌ಗಳ ಸಿಬ್ಬಂದಿ ಸಂಭ್ರಮಿಸುತ್ತಿರುವ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಗಿವೆ. ಇದು ಇಲ್ಲಿಯವರೆಗೆ ಆಗಿರುವ ಪ್ರಗತಿಯ ಸಂಕೇತವಾಗಿದೆ ಎಂದು ಹೇಳಲಾಗಿದೆ.
ಸುಯೆಜ್ ಕಾಲುವೆ ಪ್ರಾಧಿಕಾರದ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಒಸಾಮಾ ರಬೀ ಅವರು, ‘ಪುಲ್ ಅಂಡ್ ಪುಶ್’ ಪ್ರಯತ್ನ ಯಶಸ್ವಿಯಾಗಿದ್ದು, ಹಡಗನ್ನು ಭಾಗಶಃ ತೇಲಿಸಲು ಸಾಧ್ಯವಾಗಿದೆ ಎಂದಿದ್ದಾರೆ.
ಕಾರ್ಮಿಕರು ಹಡಗಿನ ಹಾದಿಯನ್ನು ಸಂಪೂರ್ಣವಾಗಿ ನೇರಗೊಳಿಸಿದ್ದಾರೆ ಮತ್ತು ಕಾಲುವೆ ದಂಡೆಯಿಂದ 102 ಮೀಟರ್ (334 ಅಡಿ) ಚಲಿಸುವಂತೆ ಮಾಡಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಇನ್ನಷ್ಟು ಉಬ್ಬರ ಹೆಚ್ಚುತ್ತಿದ್ದಂತೆ ರಕ್ಷಣಾ ಸಿಬ್ಬಂದಿ ಹಡಗನ್ನು ಜಲಮಾರ್ಗದ ಮಧ್ಯಕ್ಕೆ ‘ಗ್ರೇಟ್ ಬಿಟ್ಟರ್ ಲೇಕ್‘ ಕಡೆಗೆ ಎಳೆಯಲಿದ್ದಾರೆ. ಅಲ್ಲಿ ಅದು ತಾಂತ್ರಿಕ ಪರೀಕ್ಷೆಗೆ ಒಳಗಾಗಲಿದೆ ಎಂದು ಅವರು ವಿವರಿಸಿದ್ದಾರೆ.
ರಾತ್ರಿ ಕಾರ್ಯಾಚರಣೆಯಲ್ಲಿ ಹಡಗಿನ ಸುತ್ತಲು ಸುಮಾರು 27 ಸಾವಿರ ಘನ ಮೀಟರ್‌ನಷ್ಟು ಮರಳು ಮತ್ತು ಕೆಸರನ್ನು ತೆಗೆಯಲಾಗಿದೆ ಎಂದು ಅವರು ಹೇಳಿದ್ದಾರೆ.
ಹಡಗಿನ ಎಂಜಿನ್ ಕ್ರಿಯಾತ್ಮಕವಾಗಿದ್ದು, ಅದು ಮುಕ್ತವಾದಾಗ ತನ್ನ ಪ್ರವಾಸ ಮುಂದುವರಿಸಬಹುದು ಎಂದು ಹಡಗಿನ ಮಾಲೀಕ ಸಂಸ್ಥೆ ತಿಳಿಸಿದೆ. ಸಂಚಾರಕ್ಕೆ ಮುಕ್ತವಾದ ನಂತರ ಈ ಹಡಗು ತನ್ನ ಗಮ್ಯ ಸ್ಥಾನ ಸೇರುತ್ತದೆಯಾ ಅಥವಾ ದುರಸ್ತಿಗಾಗಿ ಮತ್ತೊಂದು ಬಂದರಿಗೆ ಹೋಗುವ ಅಗತ್ಯವಿದೆಯಾ ಎಂಬುದರ ಬಗ್ಗೆ ಸಂಸ್ಥೆ ಏನೂ ಹೇಳಿಲ್ಲ.
ಸುಮಾರು ವಾರದ ಹಿಂದೆ ಇಲ್ಲಿ ಸಿಲುಕಿದ್ದ ಈ ಬೃಹತ್ ಕಂಟೇನರ್ ಹಡಗಿನಿಂದಾಗಿ ಕಾಲುವೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಸಂಚಾರ ದಟ್ಟಣೆ ಸೃಷ್ಟಿಯಾಗಿತ್ತು. ಕೊರೊನಾ ವೈರಸ್ ಸಾಂಕ್ರಾಮಿಕದಿಂದ ಈಗಾಗಲೇ ನಷ್ಟಕ್ಕೆ ಸಿಲುಕಿರುವ ಜಾಗತಿಕ ವ್ಯಾಪಾರಕ್ಕೆ ಇದು ಇನ್ನಷ್ಟು ಹೊಡೆತ ನೀಡಿದೆ ಎನ್ನಲಾಗಿದೆ.
ಕಚ್ಚಾ ತೈಲದಿಂದ ಹಿಡಿದು ದನಕರುಗಳವರೆಗೆ ಎಲ್ಲವನ್ನೂ ಸಾಗಿಸುವ ಕನಿಷ್ಠ 367 ಹಡಗುಗಳು ಇನ್ನೂ ಕಾಲುವೆಯ ಮೂಲಕ ಹಾದುಹೋಗಲು ಕಾಯುತ್ತಿವೆ. 12ಕ್ಕೂ ಹೆಚ್ಚು ಹಡಗುಗಳು ದಕ್ಷಿಣ ಆಫ್ರಿಕಾದ ತುದಿಯಲ್ಲಿರುವ ಕೇಪ್ ಆಫ್ ಗುಡ್ ಹೋಪ್ ಸುತ್ತಲೂ ಪರ್ಯಾಯ ಮಾರ್ಗದಲ್ಲಿ ತೆರಳಿವೆ. ಈ ಪ್ರಯಾಣಕ್ಕೆ ಎರಡು ವಾರಗಳು ಹೆಚ್ಚುವರಿಯಾಗಿ ಬೇಕಾಗಲಿದ್ದು, ಸಾಮಗ್ರಿಗಳ ವಿತರಣೆ ವಿಳಂಬವಾಗುತ್ತದೆ ಎಂಬ ಆತಂಕವೂ ಎದುರಾಗಿದೆ.
ಇದೆಲ್ಲದರ ನಡುವೆ, ಹಡಗುಗಳ ಆಪರೇಟರ್‌ಗಳು ಕಾಲುವೆಯನ್ನು ಸಂಚಾರಕ್ಕೆ ಮುಕ್ತಗೊಳಿಸುವ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಗಡುವು ನೀಡಿರಲಿಲ್ಲ. ಈ ಮಾರ್ಗದಲ್ಲಿ ಕಳೆದ ವರ್ಷ 19 ಸಾವಿರ ಹಡಗುಗಳು ಸಂಚರಿಸಿದ್ದವು. ವಿಶ್ವದ ಶೇ 7ರಷ್ಟು ತೈಲ ಸೇರಿದಂತೆ ಜಾಗತಿಕ ವ್ಯಾಪಾರದ ಶೇ 10ರಷ್ಟು ಸರಕುಗಳ ಸಾಗಣೆ ಈ ಮಾರ್ಗದ ಮೂಲಕ ನಡೆಯುತ್ತದೆ ಎಂದು ಕಾಲುವೆಯ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.