ADVERTISEMENT

ಟ್ವಿಟರ್‌ ಸಿಇಒ ಸ್ಥಾನದಲ್ಲಿ ಮುಂದುವರಿಯಬೇಕೆ, ಬೇಡವೇ? ಇಲಾನ್‌ ಮಸ್ಕ್‌ ಪ್ರಶ್ನೆ

ಐಎಎನ್ಎಸ್
Published 19 ಡಿಸೆಂಬರ್ 2022, 5:32 IST
Last Updated 19 ಡಿಸೆಂಬರ್ 2022, 5:32 IST
   

ನವದೆಹಲಿ: ಟ್ವಿಟರ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಸ್ಥಾನದಿಂದ ನಾನು ಕೆಳಗಿಳಿಯಬೇಕೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪ್ರಶ್ನೆ ಕೇಳಿರುವ ಇಲಾನ್‌ ಮಸ್ಕ್‌, ಜನರು ನೀಡುವ ಉತ್ತರಕ್ಕೆ ತಾವು ಬದ್ಧರಾಗಿರುವುದಾಗಿ ಘೋಷಿಸಿದ್ದಾರೆ. ಇದಕ್ಕಾಗಿ ಅವರು ಟ್ವಿಟರ್‌ ಸಮೀಕ್ಷೆ ಆರಂಭಿಸಿದ್ದಾರೆ.

ಟ್ವಿಟರ್‌ನ ಸಾವಿರಾರು ಬಳಕೆದಾರರು ಮಸ್ಕ್‌ ಅವರ ಸಮೀಕ್ಷೆಯಲ್ಲಿ ಪಾಲ್ಗೊಳ್ಳುತ್ತಿದ್ದು, ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಜನಪ್ರಿಯ ಯೂಟ್ಯೂಬರ್‌ ಜಿಮ್ಮಿ ಡೊನಾಲ್ಡ್‌ಸನ್ ಅಕಾ ಮಿಸ್ಟರ್‌ಬೀಸ್ಟ್, ‘ನಿಮ್ಮ ಈ ಪ್ರವೃತ್ತಿಯನ್ನು ನೀವು ಹೀಗೇ ಮುಂದುವರಿಸಿಕೊಂಡು ಹೋಗುತ್ತೀರಿ ಎಂಬುದಾದರೆ... ನನ್ನ ಉತ್ತರ ಹೌದು ಎಂದಾಗಿರಲಿದೆ’ ಎಂದು ತಿಳಿಸಿದ್ದಾರೆ.

ADVERTISEMENT

‘ಅವರು ಈಗಾಗಲೇ ಹೊಸ ಸಿಇಒ ಆಯ್ಕೆ ಮಾಡಿದ್ದಾರೆ. ಆಡಳಿತ ಮಂಡಳಿ ಅಥವಾ ಟ್ವೀಟರ್‌ನ ಅಧ್ಯಕ್ಷರಾಗಿ ಮಸ್ಕ್‌ ಇರಲಿದ್ದಾರೆ’ ಎಂದು ಮತ್ತೊಬ್ಬ ಬಳಕೆದಾರ ಪ್ರತಿಕ್ರಿಯಿಸಿದ್ದಾರೆ.

ಇದಕ್ಕೆ ಉತ್ತರಿಸಿರುವ ಮಸ್ಕ್‌, ‘ನಿಜವಾಗಿಯೂ ಟ್ವಿಟ್ಟರ್ ಅನ್ನು ಜೀವಂತವಾಗಿರಿಸುವ ಕೆಲಸವನ್ನು ಯಾರೂ ಮಾಡುವುದಿಲ್ಲ. ನನ್ನ ಉತ್ತರಾಧಿಕಾರಿಯ ನೇಮಕ ಆಗಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

‘ಟೆಸ್ಲಾ ಅಥವಾ ಟ್ವಿಟರ್ ಆಗಿರಲಿ... ಯಾವುದೇ ಕಂಪನಿಯ ಸಿಇಒ ಆಗಿರಲು ನಾನು ಬಯಸುವುದಿಲ್ಲ’ ಎಂದು ಮಸ್ಕ್ ಕಳೆದ ತಿಂಗಳು ಹೇಳಿದ್ದರು.

ಟ್ವಿಟರ್‌ನ ಸಿಇಒ ಆಗಿ ಶಾಶ್ವತವಾಗಿ ಉಳಿಯಲು ಬಯಸುವುದಿಲ್ಲ ಎಂದು ಟೆಸ್ಲಾದ ವಿವಾದಾತ್ಮಕ ವೇತನ ಪರಿಹಾರ ಪ್ಯಾಕೇಜ್‌ಗೆ ಸಂಬಂಧಿಸಿದ ವಿಚಾರಣೆಯ ಸಂದರ್ಭದಲ್ಲಿ ಮಸ್ಕ್‌ ಹೇಳಿದ್ದರು.

ಅಂದಹಾಗೆ, ಇಲಾನ್‌ ಮಸ್ಕ್‌ ಆರಂಭಿಸಿರುವ ಸಮೀಕ್ಷೆಯಲ್ಲಿ ಸೋಮವಾರ ಬೆಳಗ್ಗೆ 10.30ರ ಹೊತ್ತಿಗೆ ಶೇ. 53ರಕ್ಕೂ ಅಧಿಕ ಮಂದಿ, ನೀವು ಸಿಇಒ ಸ್ಥಾನದಿಂದ ಕೆಳಗಿಳಿಯಬೇಕು ಎಂದೇ ಉತ್ತರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.