ADVERTISEMENT

ಕೆನಡಾ: ಭಾರತ ಮೂಲದ ಸಿಖ್ ವಿದ್ಯಾರ್ಥಿ ಮೇಲೆ ಹಲ್ಲೆ– ಟರ್ಬನ್ ಕಿತ್ತ ದುಷ್ಕರ್ಮಿಗಳು

ಪಿಟಿಐ
Published 20 ಮಾರ್ಚ್ 2023, 10:04 IST
Last Updated 20 ಮಾರ್ಚ್ 2023, 10:04 IST
ಐಸ್ಟಾಕ್: ಪ್ರಾತಿನಿಧಿಕ ಚಿತ್ರ
ಐಸ್ಟಾಕ್: ಪ್ರಾತಿನಿಧಿಕ ಚಿತ್ರ   

ಟೊರೊಂಟೊ: ಕೆನಡಾದ ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದಲ್ಲಿ ಭಾರತ ಮೂಲದ 21 ವರ್ಷದ ವಿದ್ಯಾರ್ಥಿ ಮೇಲೆ ಜನಾಂಗೀಯ ದಾಳಿ ನಡೆದಿದೆ. ದುಷ್ಕರ್ಮಿಗಳ ಗುಂಪು ಹಲ್ಲೆ ನಡೆಸಿ, ಆತನ ಟರ್ಬನ್ ಕಿತ್ತು ಕೂದಲನ್ನು ಹಿಡಿದು ದಾರಿಉದ್ದಕ್ಕೂ ಎಳೆದೊಯ್ದಿದೆ ಎಂದು ಮಾಧ್ಯಮ ವರದಿ ತಿಳಿಸಿದೆ.

ಗಗನದೀಪ್ ಸಿಂಗ್ ಎಂಬ ಯುವಕ ಶುಕ್ರವಾರ ರಾತ್ರಿ ತಮ್ಮ ಮನೆಗೆ ತೆರಳುತ್ತಿದ್ದಾಗ ಈ ದಾಳಿ ನಡೆದಿದೆ ಎಂದು ‘ಸಿಟಿವಿ‘ ವರದಿ ಮಾಡಿದೆ.

ದಾಳಿ ಬಗ್ಗೆ ತಿಳಿದ ಕೂಡಲೇ ಗಗನದೀಪ್ ಅವರನ್ನು ಭೇಟಿ ಮಾಡಿದ್ದೇನೆ ಎಂದು ಕೌನ್ಸಿಲರ್ ಮೊಹಿನಿ ಸಿಂಗ್ ಹೇಳಿದ್ದಾರೆ.

ADVERTISEMENT

‘ಗಗನದೀಪ್ ಸ್ಥಿತಿ ಕಂಡು ನನಗೆ ದಿಗ್ಭ್ರಮೆಯಾಯಿತು. ಹಲ್ಲೆಯಿಂದಾಗಿ ಅವರು ಎಷ್ಟು ಜರ್ಜರಿತರಾಗಿದ್ದರೆಂದರೆ, ಮೆದು ಧ್ವನಿಯಲ್ಲಿ ಮಾತನಾಡುತ್ತಿದ್ದರು. ಬಾಯಿ ತೆರೆಯಲು ಸಹ ಆಗುತ್ತಿರಲಿಲ್ಲ. ಕಣ್ಣು ಊದಿಕೊಂಡು, ತೀವ್ರ ನೋವಿನಿಂದ ಬಳಲುತ್ತಿದ್ದರು’ ಎಂದು ಅವರು ಹೇಳಿದ್ದಾರೆ.

ದಿನಸಿ ಖರೀದಿಗಾಗಿ ಹೋಗಿದ್ದ ಗಗನದೀಪ್ ರಾತ್ರಿ 10.30ರ ಸುಮಾರಿಗೆ ಬಸ್‌ನಲ್ಲಿ ಮನೆಗೆ ತೆರಳುತ್ತಿದ್ದರು. ಬಸ್‌ನಲ್ಲಿದ್ದ 12–15 ಮಂದಿಯ ದುಷ್ಕರ್ಮಿಗಳ ಗುಂಪು ಅವರ ಮೇಲೆ ಹಲ್ಲೆ ಮಾಡಿದೆ. ಟರ್ಬನ್ ಕಿತ್ತು ಕ್ರೌರ್ಯ ಮೆರೆದಿದೆ ಎಂದು ಮೋಹಿನಿ ಸಿಂಗ್ ತಿಳಿಸಿದ್ದಾರೆ. ಪೊಲೀಸರಿಗೆ ಕರೆ ಮಾಡುವುದಾಗಿ ಗಗನದೀಪ್ ಹೇಳಿದರೂ ಯುವಕರ ಗುಂಪು ಸೊಪ್ಪು ಹಾಕಿಲ್ಲ ಎಂದೂ ಅವರು ಹೇಳಿದ್ದಾರೆ.

ದುಷ್ಕರ್ಮಿಗಳ ಕಿರುಕುಳದಿಂದ ಬೇಸತ್ತ ಗಗನದೀಪ್, ಬಸ್‌ನಿಂದ ಇಳಿದಿದ್ದಾರೆ. ಅವರ ಹಿಂದೆಯೇ ಇಳಿದ ಯುವಕರ ಗುಂಪು, ಬಸ್ ಹೋಗುವವರೆಗೂ ಸುಮ್ಮನಿದ್ದು, ಹಿಂಬಾಲಿಸಿ ಹಲ್ಲೆ ನಡೆಸಿದೆ. ಯುವಕನ ಮುಖ, ಪಕ್ಕೆಲುಬು, ತೋಳುಗಳು ಮತ್ತು ಕಾಲುಗಳಿಗೆ ಹೊಡೆದಿದ್ದಾರೆ. ಬಳಿಕ, ಟರ್ಬನ್ ಕಿತ್ತೊಗೆದು, ಕೂದಲನ್ನು ಹಿಡಿದು ಎಳೆದೊಯ್ದಿದ್ದಾರೆ’ ಎಂದು ಮೋಹಿನಿ ಸಿಂಗ್ ಹೇಳಿದ್ದಾರೆ. ಗಗನ್‌ದೀಪ್ ಅವರನ್ನು ರಸ್ತೆ ಬದಿಯಲ್ಲಿ ಕೊಳಕು ಹಿಮ ರಾಶಿಯ ಮೇಲೆ ತಳ್ಳಿದ್ದ ಗುಂಪು ಟರ್ಬನ್‌ ಅನ್ನು ತೆಗೆದುಕೊಂಡು ಹೋಗಿದೆ ಎಂದು ಅವರು ಹೇಳಿದ್ದಾರೆ.

‘ಕೊಳಕು ಟರ್ಬನ್ ಅನ್ನು ಟ್ರೋಫಿ ರೀತಿ ಹೊತ್ತುಕೊಂಡು ಓಡಾಡುತ್ತೀರಾ’ಎಂದು ಯುವಕರು ನಿಂದಿಸಿದ್ದಾರೆ.

ಪ್ರಜ್ಞೆ ಬಂದಾಗ ಗಗನದೀಪ್ ತನ್ನ ಸ್ನೇಹಿತನಿಗೆ ಕರೆ ಮಾಡಿದ್ದಾರೆ. ಬಳಿಕ, ತುರ್ತು ಸಹಾಯವಾಣಿ ಸಂಖ್ಯೆ 911ಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.

ಗಗನದೀಪ್ ಮತ್ತು ಅವರ ಸ್ನೇಹಿತರು ಹಾಗೂ ಇತರೆ ದೇಶಗಳಿಂದ ಆಗಮಿಸಿರುವ ವಿದ್ಯಾರ್ಥಿಗಳು ಘಟನೆಯಿಂದ ಬೆಚ್ಚಿಬಿದ್ದಿದ್ದಾರೆ ಎಂದು ಮೋಹಿನಿ ಸಿಂಗ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.