ಸಿಂಗಪುರ: ಮಾದಕ ವಸ್ತು ಸಾಗಣೆ ಆರೋಪದ ಹಿನ್ನೆಲೆಯಲ್ಲಿ ಮಲೇಷ್ಯಾದಲ್ಲಿರುವ ಭಾರತೀಯ ಮೂಲದ ವ್ಯಕ್ತಿಯೊಬ್ಬರಿಗೆ ಸಿಂಗಪುರ ನ್ಯಾಯಾಲಯ ಸೋಮವಾರ ಮರಣದಂಡನೆ ಶಿಕ್ಷೆ ವಿಧಿಸಿದೆ.
ಸ್ವಚ್ಚತಾ ಮೇಲ್ಚಿಚಾರಕ ಮನಸಾಮಿ ರಾಮಮೂರ್ತಿ(39) ಮರಣದಂಡನೆಗೆ ಗುರಿಯಾದ ವ್ಯಕ್ತಿ. ಈತ ದೋಷಿ ಎಂದು ಸಿಂಗಪುರ ಹೈಕೋರ್ಟ್ ಇತ್ತೀಚೆಗೆ ತೀರ್ಪು ನೀಡಿತ್ತು.
2018ರಲ್ಲಿ ಮಾದಕ ವಸ್ತುಗಳು ತುಂಬಿದ್ದ ಚೀಲದೊಂದಿಗೆ ಈತ ಪೊಲೀಸರಿಗೆ ಸಿಕ್ಕಿಬಿದ್ದಿದ್ದ. ಮಾಧ್ಯಮ ವರದಿಗಳ ಪ್ರಕಾರಹಾರ್ಬರ್‌ಫ್ರಂಟ್ ಅವೆನ್ಯೂದಲ್ಲಿ ನಿಲ್ಲಿಸಿದ್ದ ಮೋಟಾರ್ ಸೈಕಲ್‌ನಲ್ಲಿ ಮಾದಕ ವಸ್ತುಗಳು ತುಂಬಿದ ಚೀಲದೊಂದಿಗೆ ಅವರು ಸಿಕ್ಕಿಬಿದ್ದಿದ್ದರು.
ರಾಮಮೂರ್ತಿ, 6.3 ಕೆಜಿ ಹರಳುಗಳಂತಹ ವಸ್ತು ತುಂಬಿದ್ದ ಚೀಲದೊಂದಿಗೆ ಸಿಕ್ಕಿಬಿದ್ದಿದ್ದರು. ಆ ವಸ್ತುಗಳನ್ನು ಪರಿಶೀಲನೆಗೆ ಒಳಪಡಿಸಿದಾಗ ಅದು 57.54 ಗ್ರಾಂ ತೂಕದ ಹೆರಾಯಿನ್ ಎಂದು ಪತ್ತೆಯಾಗಿತ್ತು.
ನ್ಯಾಯಮೂರ್ತಿ ಔಡ್ರೆ ಲಿಮ್ ಅವರು ಸೋಮವಾರ ನೀಡಿದ ಲಿಖಿತ ಆದೇಶದಲ್ಲಿ ಮನಸಾಮಿಗೆ ಶಿಕ್ಷೆ ವಿಧಿಸುವ ನಿರ್ಧಾರವನ್ನು ವಿವರಿಸಿದರು. ’ಬ್ಯಾಗ್‌ನಲ್ಲಿ ಕಳವು ಮಾಡಿದ ಮೊಬೈಲ್ ಫೋನ್‌ಗಳಿವೆ ಎಂದು ಭಾವಿಸಿದ್ದಾಗಿ’ ಆರೋಪಿ ಹೇಳಿದ ಮಾತನ್ನು ತಾವು ನಂಬುವುದಿಲ್ಲ’ ಎಂದು ನ್ಯಾಯಮೂರ್ತಿ ಹೇಳಿದರು.
15 ಗ್ರಾಂಗಿಂತ ಹೆಚ್ಚು ಹೆರಾಯಿನ್ ಸಾಗಾಣಿಕೆ ಮಾಡಿದರೆ, ಮರಣದಂಡನೆ ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ.
33 ವರ್ಷದ ಭಾರತೀಯ ಮೂಲದ ಮತ್ತೊಬ್ಬ ಮಲೇಷ್ಯಾ ವ್ಯಕ್ತಿ ಮರಣದಂಡನೆಗೆ ಗುರಿಯಾದ ಒಂದು ವಾರದಲ್ಲಿ, ಇನ್ನೊಂದು ಮರಣದಂಡನೆ ಶಿಕ್ಷೆ ಪ್ರಕಟವಾಗಿದೆ. ನ.10ರಂದು ಆ ಆರೋಪಿಯನ್ನು ಗಲ್ಲಿಗೇರಿಸಬೇಕಿತ್ತು. ಕೋವಿಡ್ ಸೋಂಕಿನ ಕಾರಣ, ಈ ಪ್ರಕ್ರಿಯೆಯನ್ನು ಮುಂದೂಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.