ಕ್ವಾಲಾಲಂಪುರ: 31 ಗ್ರಾಂ ಮಾದಕವಸ್ತು ಕಳ್ಳಸಾಗಣೆ ಮಾಡಿದ್ದ ಪ್ರಕರಣದ ಅಪರಾಧಿ ಮಹಿಳೆಯನ್ನು ಶುಕ್ರವಾರ ಸಿಂಗಪುರದಲ್ಲಿ ಗಲ್ಲಿಗೇರಿಸಲಾಗಿದ್ದು, 19 ವರ್ಷಗಳಲ್ಲಿ ಮಹಿಳೆಗೆ ನೇಣು ಶಿಕ್ಷೆ ವಿಧಿಸಿದ ಮೊದಲ ಪ್ರಕರಣ ಇದಾಗಿದೆ.
ಸರಿದ್ವಿ ಜಮಾನಿ (45) ಗಲ್ಲಿಗೇರಿದ ಮಹಿಳೆ. 31 ಗ್ರಾಂ (1 ಔನ್ಸ್) ಹೆರಾಯಿನ್ ಅನ್ನು ಕಳ್ಳಸಾಗಣೆ ಮಾಡಿದ ಪ್ರಕರಣದಲ್ಲಿ ಈಕೆ 2018ರಲ್ಲಿ ಶಿಕ್ಷೆಗೆ ಗುರಿಯಾಗಿದ್ದಳು ಎಂದು ಸಿಎನ್‌ಬಿ (ಸೆಂಟ್ರಲ್ ನಾರ್ಕೊಟಿಕ್ಸ್ ಬ್ಯೂರೊ) ಹೇಳಿದೆ.
ಗಲ್ಲು ಶಿಕ್ಷೆ ನಿಷೇಧಕ್ಕೆ ಮಾನವ ಹಕ್ಕುಗಳ ಸಂಘಟನೆಗಳು ಮತ್ತು ಸಾಮಾಜಿಕ ಹೋರಾಟಗಾರರ ಒತ್ತಡಗಳ ನಡುವೆಯೂ ಮಾದಕ ವಸ್ತು ಕಳ್ಳಸಾಗಣೆ ಅಪರಾಧದ ಅಪರಾಧಿಗಳಿಗೆ ಸಿಂಗಪುರದಲ್ಲಿ ಗಲ್ಲು ಶಿಕ್ಷೆ ಜಾರಿಗೊಳಿಸಿರುವುದು ವಾರದಲ್ಲಿ ಇದು ಎರಡನೇ ಪ್ರಕರಣ.
ಜಮಾನಿಯನ್ನು ಗಲ್ಲಿಗೇರಿಸುವ ಎರಡು ದಿನಗಳ ಹಿಂದೆ ಸಿಂಗಪುರದ ವ್ಯಕ್ತಿ ಮೊಹಮ್ಮದ್ ಅಜೀಜ್ ಹುಸೇನ್ (56) ಎಂಬಾತನನ್ನು 50 ಗ್ರಾಂ ಹೆರಾಯಿನ್ ಕಳ್ಳಸಾಗಣೆ ಮಾಡಿದ ಅಪರಾಧಕ್ಕೆ ನೇಣಿಗೇರಿಸಲಾಗಿತ್ತು. ಮುಂದಿನ ವಾರದಲ್ಲಿ ಮತ್ತೊಬ್ಬ ಅಪರಾಧಿಯನ್ನು ಗಲ್ಲಿಗೇರಿಸಲು ಸಿದ್ಧತೆ ನಡೆದಿದೆ ಎಂದು ಮಾನವ ಹಕ್ಕುಗಳ ಹೋರಾಟಗಾರರೊಬ್ಬರು ಹೇಳಿದ್ದಾರೆ.
ಮಾದಕದ್ರವ್ಯ ಕಳ್ಳಸಾಗಣೆ ಅಪರಾಧಕ್ಕೆ 2004ರಲ್ಲಿ ಯೆನ್ ಮೇ ವೋಯೆನ್ (36) ಎಂಬ ಮಹಿಳೆಯನ್ನು ಗಲ್ಲಿಗೇರಿಸಲಾಗಿತ್ತು. 2022ರ ಮಾರ್ಚ್‌ನಿಂದ ಈವರೆಗೆ ಸಿಂಗಪುರದಲ್ಲಿ ತಿಂಗಳಿಗೆ ಒಬ್ಬರಂತೆ 15 ಜನರನ್ನು ಗಲ್ಲಿಗೇರಿಸಲಾಗಿದೆ ಎಂದು ಮಾನವ ಹಕ್ಕುಗಳ ಸಂಘಟನೆ ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.