ಸಿಂಗಪುರ: ರಂಜಾನ್ ವೇಳೆ ನೀಡಲಾಗುವ ಲಘು ಆಹಾರದ (ಸ್ನ್ಯಾಕ್ಸ್) ರುಚಿ ನೋಡಲು ಮುಂದಾಗಿದ್ದ ಭಾರತೀಯ ಮುಸ್ಲಿಂ ದಂಪತಿಯನ್ನು ತಡೆದಿದ್ದ ಇಲ್ಲಿನ ಸ್ಥಳೀಯ ಸೂಪರ್ ಮಾರ್ಕೆಟ್ ನಂತರದಲ್ಲಿ ದಂಪತಿಯ ಕ್ಷಮೆಯಾಚಿಸಿದೆ ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.
‘ಇಲ್ಲಿನ ನ್ಯಾಷನಲ್ ಟ್ರೇಡ್ಸ್ ಯೂನಿಯನ್ ಕಾಂಗ್ರೆಸ್ ನಡೆಸುತ್ತಿರುವ ಸೂಪರ್‌ಮಾರ್ಕೆಟ್‌ಗೆ ತೆರಳಿದ್ದಾಗ ಅಲ್ಲಿನ ಪುರುಷ ಸಿಬ್ಬಂದಿಯೊಬ್ಬರು ರಂಜಾನ್‌ನ ಲಘು ಆಹಾರದ ರುಚಿ ನೋಡಲು ಮುಂದಾಗಿದ್ದ ತಮ್ಮನ್ನು ತಡೆದು, ಇದು ಮಲೇಷ್ಯಾ ಮತ್ತು ಇಂಡೊನೇಷ್ಯಾದವರಿಗೆ ಮಾತ್ರ ಎಂದು ಹೇಳಿದರು’ ಎಂದು ಜಹಬರ್ ಶಾಲಿಹ್ ಮತ್ತು ಅವರ ಪತ್ನಿ ಫರ‍್ಹಾ ನಾಡಿಯಾ ದಂಪತಿ ಸೋಮವಾರ ‘ಚಾನೆಲ್ ನ್ಯೂಸ್ ಏಷ್ಯಾ’ಕ್ಕೆ ತಿಳಿಸಿದ್ದರು.
ಜಹಬರ್ ಭಾರತದವರಾಗಿದ್ದರೆ, ಅವರ ಪತ್ನಿ ಫರ‍್ಹಾ ಮಲೇಷ್ಯಾಕ್ಕೆ ಸೇರಿದವರಾಗಿದ್ದಾರೆ. ದಂಪತಿ ಇಬ್ಬರು ಮಕ್ಕಳೊಂದಿಗೆ ಸೂಪರ್‌ಮಾರ್ಕೆಟ್‌ಗೆ ಶಾಪಿಂಗ್‌ಗೆ ತೆರಳಿದ್ದಾಗ ಈ ಘಟನೆ ನಡೆದಿದೆ.
ಘಟನೆ ಕುರಿತು ಫರ‍್ಹಾ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ‘ಅಸಹ್ಯಕರ’ ಎಂದು ಬರೆದುಕೊಂಡಿದ್ದರು. ಇದಕ್ಕೆ 500ಕ್ಕೂ ಹೆಚ್ಚು ಮಂದಿ ಪ್ರತಿಕ್ರಿಯೆ ನೀಡಿದ್ದಾರೆ.
ಮಾರ್ಚ್ 23ರಂದು ಇಲ್ಲಿನ ಫೇರ್‌ಪ್ರೈಸ್ ಗ್ರೂಪ್ ಇಫ್ತಾರ್ ಬೈಟ್ಸ್ ಸ್ಟೇಷನ್ ಅನ್ನು ಬಿಡುಗಡೆ ಮಾಡಿತ್ತು. ರಂಜಾನ್ ಸಮಯದಲ್ಲಿ ಮುಸ್ಲಿಂ ಗ್ರಾಹಕರಿಗೆ ತನ್ನ 60 ಮಳಿಗೆಗಳಲ್ಲಿ ಫೇರ್ ಪ್ರೈಸ್ ಗ್ರೂಪ್ ಉಚಿತವಾಗಿ ಲಘು ಆಹಾರ, ಖರ್ಜೂರ ಮತ್ತು ಪಾನೀಯಗಳನ್ನು ನೀಡುವ ವ್ಯವಸ್ಥೆ ಮಾಡಿದೆ. ಅಂತೆಯೇ ಸೂಪರ್ ಮಾರ್ಕೆಟ್‌ನಲ್ಲಿ ಇಫ್ತಾರ್ ಬೈಟ್ಸ್ ಸ್ಟೇಷನ್ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿಗೆ ತೆರಳಿದ್ದ ಜಹಬರ್ ಅಲ್ಲಿದ್ದ ಬೋರ್ಡ್ ಅನ್ನು ಓದಲು ಮುಂದಾಗುತ್ತಿದ್ದಂತೆಯೇ, ಅಲ್ಲಿನ ಸಿಬ್ಬಂದಿಯೊಬ್ಬರು ತಡೆದು, ‘ಇದು ಭಾರತದವರಿಗೆ ಅಲ್ಲ’, ‘ಮಲೇಷ್ಯಾ ಮತ್ತು ಇಂಡೊನೇಷ್ಯಾದವರಿಗೆ ಮಾತ್ರ’ ಎಂದು ಹೇಳಿದ್ದರು.
ಜಹಬರ್ ಭಾರತೀಯ ಮೂಲದ ಮುಸ್ಲಿಂ ದಂಪತಿ ಎಂಬುದನ್ನು ಅರಿತ ಬಳಿಕ ಸೂಪರ್ ಮಾರ್ಕೆಟ್ ಆಡಳಿತ ವರ್ಗ ಘಟನೆಯ ಬಗ್ಗೆ ಕ್ಷಮೆಯಾಚಿಸಿದೆ.
‘ನಾವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಈ ಬಗ್ಗೆ ನಮ್ಮ ಉದ್ಯೋಗಿಗೆ ಸಲಹೆ ನೀಡಿದ್ದೇವೆ. ರಂಜಾನ್ ಅವಧಿಯಲ್ಲಿ ನಮ್ಮೆಲ್ಲ ಮುಸ್ಲಿಂ ಗ್ರಾಹಕರಿಗೆ ಉಚಿತವಾಗಿ ಇಫ್ತಾರ್ ಪ್ಯಾಕ್‌ಗಳನ್ನು ನೀಡುತ್ತೇವೆ ಎಂಬುದನ್ನು ಸ್ಪಷ್ಟಪಡಿಸುತ್ತೇವೆ’ ಎಂದು ಸೂಪರ್ ಮಾರ್ಕೆಟ್ ಹೇಳಿಕೆಯಲ್ಲಿ ಉಲ್ಲೇಖಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.